ಪಾಕ್ ವಿಮಾನಗಳಿಗೆ ಭಾರತ ನಿರ್ಬಂಧ
Credit: iStock Photo
ನವದೆಹಲಿ: ಪಾಕಿಸ್ತಾನದ ವಿಮಾನಗಳಿಗೆ ಭಾರತದ ವಾಯುಪ್ರದೇಶ ನಿರ್ಬಂಧವನ್ನು ಆಗಸ್ಟ್ 24ರವರೆಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಖಾತೆಯ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ತಿಳಿಸಿದ್ದಾರೆ.
ಪಾಕ್ ವಿಮಾನಯಾನ ಸಂಸ್ಥೆಗಳು ನಿರ್ವಹಿಸುವ ಯಾವುದೇ ವಿಮಾನಗಳು, ಪಾಕ್ ಒಡೆತನದ ಅಥವಾ ಗುತ್ತಿಗೆ ಪಡೆದ ಮಿಲಿಟರಿ ಮತ್ತು ನಾಗರಿಕ ವಿಮಾನಗಳು ಭಾರತದ ವಾಯುಪ್ರದೇಶ ಬಳಸಲು ಅನುಮತಿಸಲಾಗುವುದಿಲ್ಲ ಎಂದು ಮೊಹೋಲ್ ಸ್ಪಷ್ಟಪಡಿಸಿದ್ದಾರೆ.
ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರ ಹತ್ಯೆಯ ನಂತರ ಪಾಕಿಸ್ತಾನ ಜತೆಗಿನ ರಾಜತಾಂತ್ರಿಕ ಸಂಬಂಧ ಕಳಚಿಕೊಂಡು ಭಾರತವು ಅಲ್ಲಿನ ವಿಮಾನಗಳಿಗೆ ನಿರ್ಬಂಧ ಹೇರಿರುವುದನ್ನೂ ಒಳಗೊಂಡು ಹಲವು ಕ್ರಮಗಳನ್ನು ಕೈಗೊಂಡಿತ್ತು.
ಭಾರತೀಯ ಕಾಲಮಾನದ ಪ್ರಕಾರ ಮೇ 24ರವರೆಗೆ ವಿಧಿಸಿದ್ದ ನಿರ್ಬಂಧವನ್ನು ಜೂನ್ 24ರವರೆಗೆ ವಿಸ್ತರಿಸಲಾಗಿತ್ತು. ಇದೀಗ ಮತ್ತೆ ಒಂದು ತಿಂಗಳ ಅವಧಿಗೆ (ಆಗಸ್ಟ್ 24) ನಿರ್ಬಂಧವನ್ನು ವಿಸ್ತರಿಸಲಾಗಿದೆ.
ಏತನ್ಮಧ್ಯೆ, ಪಾಕಿಸ್ತಾನವು ಭಾರತದ ವಿಮಾನಗಳಿಗೆ ತನ್ನ ವಾಯುಪ್ರದೇಶ ನಿರ್ಬಂಧವನ್ನು ಆಗಸ್ಟ್ 24ರವರೆಗೆ ವಿಸ್ತರಿಸಿದೆ ಎಂದು ಪಾಕಿಸ್ತಾನದ ವಿಮಾನಯಾನ ಪ್ರಾಧಿಕಾರ (ಪಿಎಎ) ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.