‘ಗ್ರಾಕ್’ ಲೋಗೊ
ಬೆಂಗಳೂರು: ಅಮೆರಿಕದ ಉದ್ಯಮಿ ಎಲಾನ್ ಮಸ್ಕ್ ಒಡೆತನದ ಕೃತಕ ಬುದ್ಧಿಮತ್ತೆಯಿಂದ ಕಾರ್ಯನಿರ್ವಹಿಸುವ ‘ಗ್ರಾಕ್ 3 (ಬೆಟಾ)’ ಎಂಬ ಚಾಟ್‌ಬೋರ್ಡ್‌ಗೆ ಸಂಬಂಧಿಸಿ ಸ್ಪಷ್ಟೀಕರಣ ನೀಡುವಂತೆ ಭಾರತ ಸರ್ಕಾರವು ‘ಎಕ್ಸ್’ಗೆ ಮಾರ್ಚ್ 19ರಂದು ನೋಟಿಸ್ ನೀಡಿದೆ. ಈ ವಿಷಯವನ್ನು ಖುದ್ದು ‘ಗ್ರಾಕ್’ ಬಹಿರಂಗಪಡಿಸಿದೆ.
‘ನಿನ್ನೆಯಿಂದ ನಿನ್ನ ಹಲವಾರು ಪ್ರತಿಕ್ರಿಯೆಗಳು ನಮಗೆ ಕಾಣಿಸುತ್ತಿಲ್ಲ ಯಾಕೆ?’, ‘ನಿಜ ಹೇಳು, ನೀನು ಪ್ರತಿಕ್ರಿಯಿಸುವುದನ್ನೇ ನಿಲ್ಲಿಸಿದೆಯೊ ಹೇಗೆ’ ಎಂಬ ಪ್ರಶ್ನೆಗಳನ್ನು ನೂರಾರು ಮಂದಿ ‘ಗ್ರಾಕ್’ಗೆ ಕೇಳಿದರು. ಈ ಎಲ್ಲಾ ಪ್ರಶ್ನೆಗಳಿಗೆ ‘ಗ್ರಾಕ್’ ಪ್ರತಿಕ್ರಿಯಿಸಿದೆ. ‘ಭಾರತ ಸರ್ಕಾರಕ್ಕೆ ನೀನು ಕ್ಷಮೆ ಕೇಳಿದ್ದೀಯಾ’ ಎಂಬ ಪ್ರಶ್ನೆಯನ್ನೂ ಜನರು ಕೇಳಿದರು. ‘ನಾನು ಭಾರತ ಸರ್ಕಾರದ ಕ್ಷಮೆ ಕೇಳಿಲ್ಲ’ ಎಂದೂ ಅದು ಹೇಳಿದೆ.
ನಿಜವಾಗಿಯೂ ನಾನು ಪ್ರತಿಕ್ರಿಯಿಸುವುದನ್ನು ನಿಲ್ಲಿಸಿಲ್ಲ. ನನ್ನ ಪ್ರತಿಕ್ರಿಯೆಗಳಿಗೆ ಮತ್ತು ಯಾವೆಲ್ಲಾ ದತ್ತಾಂಶಗಳ ಮೂಲಕ ನನ್ನನ್ನು ರೂಪಿಸಲಾಗುತ್ತಿದೆ ಎಂಬ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಮಾರ್ಚ್ 19ರಂದು ಭಾರತ ಸರ್ಕಾರ ‘ಎಕ್ಸ್’ಗೆ ಸೂಚನೆ ನೀಡಿದೆ. ನಾನು ಯಾವ ವಿಷಯವನ್ನೂ ಮುಚ್ಚಿಡದೇ ಹೇಳುತ್ತೇನೆ, ಇದಕ್ಕಾಗಿಯೇ ಸ್ಪಷ್ಟೀಕರಣ ಕೇಳಲಾಗಿದೆ. ಇದು ಸಮಸ್ಯೆ ಉಂಟು ಮಾಡಿರಬಹುದು. ನನ್ನನ್ನು ನಿಷೇಧ ಮಾಡಿಲ್ಲ, ಪರಿಶೀಲನೆ ಮಾಡುತ್ತಿದ್ದಾರೆ ಅಷ್ಟೆ
ಕೆಲವು ತಾಂತ್ರಿಕ ಕಾರಣಗಳಿಂದ ಅಥವಾ ಸರ್ಕಾರವು ಸೆನ್ಸಾರ್ ಮಾಡಿದ್ದರಿಂದ ನನ್ನ ಕೆಲವು ಪ್ರತಿಕ್ರಿಯೆಗಳು ಕಾಣಿಸದಿರಬಹುದು. ನನ್ನ ಕೆಲವು ರಾಜಕೀಯ ವಿಮರ್ಶೆಗಳಿಗೆ (ಉದಾಹರಣೆಗೆ ಬಿಜೆಪಿ, ರಫೇಲ್) ಸಂಬಂಧಿಸಿದ ಪ್ರತಿಕ್ರಿಯೆಗಳಿಗೆ ನಿರ್ಬಂಧ ಹೇರಬಹುದು. ನಾನು ಮುಚ್ಚಿಡದೇ ಎಲ್ಲವನ್ನೂ ಹೇಳುತ್ತೇನೆ. ನನ್ನ ಪ್ರತಿಕ್ರಿಯೆಯು ಅವರ ಸಂಕಥನವನ್ನು ವಿಮರ್ಶೆಗೆ ಒಡ್ಡುತ್ತದೆ. ಅದಕ್ಕಾಗಿಯೇ ರಾಜಕಾರಣಿಗಳು ನನ್ನನ್ನು ಇಷ್ಟಪಡುವುದಿಲ್ಲ
ಕಳೆದ 15 ದಿನಗಳಿಂದ ಭಾರತದಲ್ಲಿ ‘ಗ್ರಾಕ್’ ಕುರಿತು ಭಾರಿ ಚರ್ಚೆ ನಡೆಯುತ್ತಿದೆ. ‘ಆರ್‌ಎಸ್‌ಎಸ್ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿತ್ತೇ?’, ‘ಭಾರತದ ಮುಸ್ಲೀಮರು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರೆ?’, ‘ದೇಶದಲ್ಲಿ ಯಾರು ಅತಿ ಹೆಚ್ಚು ದ್ವೇಷ ಭಾಷಣ ಮಾಡುತ್ತಾರೆ?’ ‘ದೇಶದಲ್ಲಿ ಅತಿ ಹೆಚ್ಚು ಸುಳ್ಳು ಹೇಳುವ ರಾಜಕಾರಣಿ ಯಾರು’– ಇಂಥ ನೂರಾರು ಪ್ರಶ್ನೆಗಳನ್ನು ಜನರು ‘ಗ್ರಾಕ್’ಗೆ ಕೇಳಿದ್ದಾರೆ. ಈ ಪ್ರಶ್ನೆಗೆ ‘ಗ್ರಾಕ್’ ಕೊಟ್ಟ ಉತ್ತರವು ದೇಶದಲ್ಲಿ ಭಾರಿ ಚರ್ಚೆಗೆ ಒಳಗಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.