ಸಾಂಕೇತಿಕ ಚಿತ್ರ
ನವದೆಹಲಿ: ಈ ವರ್ಷದ ಮಾರ್ಚ್ 1ರಿಂದ ಜೂನ್ 24 ವರೆಗೆ ದೇಶದಾದ್ಯಂತ ಸುಮಾರು 7,192 ಶಂಕಿತ ಶಾಖಾಘಾತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 14 ಸಾವುಗಳಷ್ಟೇ ದೃಢಪಟ್ಟಿವೆ ಎಂದು ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆ ಅಡಿ ಪಡೆದ ಮಾಹಿತಿಯಿಂದ ತಿಳಿದುಬಂದಿದೆ.
ಬೇಸಿಗೆ ತೀವ್ರಗೊಳ್ಳುವ ಮೇ ತಿಂಗಳಲ್ಲಿ ಹೆಚ್ಚಿನ (2,962) ಪ್ರಕರಣಗಳು ವರದಿಯಾಗಿವೆ. ಮೂವರು ಮೃತಪಟ್ಟಿದ್ದಾರೆ ಎಂಬುದು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್‌ಸಿಡಿಸಿ) ಹಂಚಿಕೊಂಡಿರುವ ಮಾಹಿತಿಯಿಂದ ಗೊತ್ತಾಗಿದೆ.
ಮಾರ್ಚ್‌ನಲ್ಲಿ 705, ಏಪ್ರಿಲ್‌ನಲ್ಲಿ 2,140 ಶಂಕಿತ ಪ್ರಕರಣಗಳು ವರದಿಯಾಗಿದ್ದವು. ಈ ತಿಂಗಳುಗಳಲ್ಲಿ ಕ್ರಮವಾಗಿ 6 ಹಾಗೂ 2 ಸಾವು ಸಂಭವಿಸಿವೆ. ಅದೇ ರೀತಿ ಜೂನ್ ತಿಂಗಳಲ್ಲಿ (24ರ ವರೆಗೆ) 1,385 ಪ್ರಕರಣಗಳು ಬೆಳಕಿಗೆ ಬಂದಿದ್ದು, ಮೂವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಆಂಧ್ರ ಪ್ರದೇಶದಲ್ಲಿ ಅರ್ಧಕ್ಕಿಂತ ಹೆಚ್ಚು ಪ್ರಕರಣ
ಒಟ್ಟು ಪ್ರಕರಣಗಳ ಪೈಕಿ ಅರ್ಧಕ್ಕಿಂತ ಹೆಚ್ಚು ಆಂಧ್ರ ಪ್ರದೇಶದಲ್ಲಿ (4,055) ವರದಿಯಾಗಿವೆ. ರಾಜಸ್ಥಾನ (373), ಒಡಿಶಾ (350), ತೆಲಂಗಾಣ (348), ಮಧ್ಯಪ್ರದೇಶ (297) ನಂತರದ ಸ್ಥಾನಗಳಲ್ಲಿವೆ.
ಮಹಾರಾಷ್ಟ್ರ, ಉತ್ತರಾಖಂಡ ರಾಜ್ಯಗಳಲ್ಲಿ ತಲಾ ಮೂರು ಸಾವು ಸಂಭವಿಸಿವೆ. ತೆಲಂಗಾಣ, ಒಡಿಶಾ, ಜಾರ್ಖಂಡ್, ತಮಿಳುನಾಡು, ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳದಲ್ಲಿ ಒಬ್ಬೊಬ್ಬರು ಮೃತಪಟ್ಟಿದ್ದಾರೆ.
2024ರಲ್ಲಿ ಸುಮಾರು 48,000 ಶಾಖಾಘಾತ ಪ್ರಕರಣಗಳು ವರದಿಯಾಗಿದ್ದವು. ಇದರಿಂದಾಗಿ, 159 ಸಾವುಗಳು ಸಂಭವಿಸಿದ್ದವು. ಆ ವರ್ಷವನ್ನು 1901ರ ನಂತರದ ಅತ್ಯಂತ ತಾಪಮಾನದಿಂದ ಕೂಡಿದ್ದ ವರ್ಷ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.