ADVERTISEMENT

ಚೀನಾ ಮೀರಿ ಬೆಳೆಯಲು ಭಾರತ ಯೋಚಿಸಬೇಕು: ಭಾಗವತ್

ಏಜೆನ್ಸೀಸ್
Published 26 ಅಕ್ಟೋಬರ್ 2020, 2:42 IST
Last Updated 26 ಅಕ್ಟೋಬರ್ 2020, 2:42 IST
ನಾಗಪುರದಲ್ಲಿ ಆರ್‌ಎಸ್‌ಎಸ್‌ ಸರಸಂಘಚಾಲಕ ಮೋಹನ್ ಭಾಗವತ್ ಭಾನುವಾರ ಶಸ್ತ್ರ ಪೂಜೆ ನೆರವೇರಿಸಿದರು.
ನಾಗಪುರದಲ್ಲಿ ಆರ್‌ಎಸ್‌ಎಸ್‌ ಸರಸಂಘಚಾಲಕ ಮೋಹನ್ ಭಾಗವತ್ ಭಾನುವಾರ ಶಸ್ತ್ರ ಪೂಜೆ ನೆರವೇರಿಸಿದರು.   

ನಾಗಪುರ: ಲಡಾಖ್‌ನಲ್ಲಿ ಚೀನಾದ ಅತಿಕ್ರಮಣಕ್ಕೆ ಭಾರತ ಯಶಸ್ವಿಯಾಗಿ ತಡೆಹಾಕಿದೆ. ಭಾರತವು ಚೀನಾಕ್ಕಿಂತಲೂ ಬಲಶಾಲಿಯಾಗಿ ಬೆಳೆಯಬೇಕು.ಸುತ್ತಮುತ್ತಲ ದೇಶಗಳೊಂದಿಗೆ ಸಂಬಂಧ ವೃದ್ಧಿಸಿಕೊಳ್ಳುವ ಮೂಲಕ ಚೀನಾದ ಪ್ರಭಾವಕ್ಕೆ ಕಡಿವಾಣ ಹಾಕಲು ಯತ್ನಿಸಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಸರಸಂಘಚಾಲಕ (ಮುಖ್ಯಸ್ಥ) ಮೋಹನ್ ಭಾಗವತ್ ಹೇಳಿದರು.

ಆರ್‌ಎಸ್‌ಎಸ್‌ ಆಚರಿಸುವ ಪ್ರಮುಖ 'ಉತ್ಸವ'ವಿಜಯದಶಮಿಈ ಬಾರಿ ಕೋವಿಡ್ ಕಾರಣದಿಂದಾಗಿ ಸರಳವಾಗಿನಡೆಯಿತು. ನೆರೆದಿದ್ದ ಕೆಲವೇ ಮಂದಿಯನ್ನು ಉದ್ದೇಶಿಸಿ ಮಾತನಾಡಿದ ಮೋಹನ್ ಭಾಗವತ್, 'ನಮ್ಮ ದೇಶದ ಎಲ್ಲೆಯನ್ನು ಚೀನಾ ಅತಿಕ್ರಮಿಸಿತು. ಇದಕ್ಕೆ ಭಾರತವೂ ಸೂಕ್ತ ರೀತಿಯಲ್ಲಿ ಪ್ರತ್ಯುತ್ತರ ನೀಡಿತು. ನಮ್ಮ ಯೋಧರು ಅವರಿಗೆ ಧೈರ್ಯದಿಂದ ಪ್ರತಿಕ್ರಿಯಿಸಿದರು. ನಮ್ಮ ದೇಶಭಕ್ತಿ ಮತ್ತು ಗಟ್ಟಿತನ ಕಂಡು ಇತರ ದೇಶಗಳೂ ಇದೀಗ ಚೀನಾದ ವಿರುದ್ಧ ಮಾತನಾಡುತ್ತಿದೆ' ಎಂದರು.

'ಚೀನಾ ಈಗ ಹೇಗೆ ಪ್ರತಿಕ್ರಿಯಿಸುತ್ತದೆ ಎಂದು ಊಹಿಸಲು ಆಗುವುದಿಲ್ಲ. ನಾವು ಎಂಥದ್ದೇ ಪರಿಸ್ಥಿತಿ ಎದುರಿಸಲು ಸದಾ ಸನ್ನದ್ಧರಾಗಿರಬೇಕು' ಎಂದು ಹೇಳಿದರು.

ಅಕ್ಕಪಕ್ಕದ ದೇಶಗಳಲ್ಲಿ ನಮ್ಮ ಪ್ರಭಾವ ವೃದ್ಧಿಸಿಕೊಳ್ಳಬೇಕು. ಕಾರ್ಯತಂತ್ರ, ಸನ್ನದ್ಧತೆ, ಆರ್ಥಿಕ ಶಕ್ತಿ ಮತ್ತು ಅಂತರರಾಷ್ಟ್ರೀಯ ಸಂಬಂಧಗಳ ವಿಚಾರದಲ್ಲಿ ನಾವು ಚೀನಾಕ್ಕಿಂತ ಹೆಚ್ಚು ಶಕ್ತಿ ಮತ್ತು ವ್ಯಾಪ್ತಿಯನ್ನು ಹೊಂದಬೇಕು' ಎಂದು ಆಶಯ ವ್ಯಕ್ತಪಡಿಸಿದರು.

'ಬ್ರಹ್ಮದೇಶ (ಮ್ಯಾನ್ಮಾರ್), ಶ್ರೀಲಂಕಾ, ಬಾಂಗ್ಲಾದೇಶ ಮತ್ತು ನೇಪಾಳಗಳೊಂದಿಗೆ ನಾವು ಸಾವಿರಾರು ವರ್ಷಗಳ ಸಂಬಂಧ ಹೊಂದಿದ್ದೇವೆ. ಕೆಲ ಭಿನ್ನಾಭಿಪ್ರಾಯಗಳು ಇರಬಹುದು. ಆದರೆ ಅವನ್ನು ಬದಿಗಿಟ್ಟು ಈ ದೇಶಗಳೊಂದಿಗೆ ನಾವು ಸಂಬಂಧ ಸುಧಾರಿಸಿಕೊಳ್ಳಬೇಕು ಸಾಧಿಸಬೇಕು' ಎಂದು ಕಿವಿಮಾತು ಹೇಳಿದರು.

ಲಡಾಖ್‌ನಲ್ಲಿ ಚೀನಾಗೆ ನಮ್ಮ ಯೋಧರು ತಕ್ಕ ಪಾಠ ಕಲಿಸಿದ್ದಾರೆ. ನಮ್ಮ ಯೋಧರ ದೇಶಭಕ್ತಿ ಮತ್ತು ಶೌರ್ಯದ ಬಗ್ಗೆ ಚೀನಾಗೆ ಇದೀಗ ಅರಿವಾಗಿದೆ. ಭಾರತದ ಇಂದಿನ ನಾಯಕತ್ವ ಆತ್ಮಗೌರವಕ್ಕೆ ಬೆಲೆ ಕೊಡುತ್ತದೆ. ದೇಶದ ಜನರಲ್ಲಿ ಒಗ್ಗಟ್ಟು ಇದೆ. ಈ ಶಕ್ತಿಯನ್ನು ನಾವು ಇನ್ನಷ್ಟು ಹೆಚ್ಚಿಸಿಕೊಳ್ಳಬೇಕಿದೆ' ಎಂದು ಅವರು ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.