ADVERTISEMENT

AI ಅಳವಡಿಸಿಕೊಳ್ಳುವಲ್ಲಿ ಜಗತ್ತಿನಲ್ಲೇ ಮುಂಚೂಣಿಯಲ್ಲಿದೆ ಭಾರತ: ವರದಿ

ಪಿಟಿಐ
Published 10 ಸೆಪ್ಟೆಂಬರ್ 2025, 11:06 IST
Last Updated 10 ಸೆಪ್ಟೆಂಬರ್ 2025, 11:06 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ರಾಯಿಟರ್ಸ್ ಚಿತ್ರ

ನವದೆಹಲಿ: ‘ದೇಶದ ಸುಮಾರು ಅರ್ಧದಷ್ಟು ಕಂಪನಿಗಳು ಕೃತಕ ಬುದ್ಧಿಮತ್ತೆಯನ್ನು (AI) ತಮ್ಮ ಕಾರ್ಯವಿಧಾನಗಳಲ್ಲಿ ಅಳವಡಿಸಿಕೊಂಡಿದೆ. ಭಾರತದ ಈ ಸಾಧನೆ ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ಸ್ವೀಕಾರ ಪ್ರಮಾಣವಾಗಿದೆ’ ಎಂದು ಅಧ್ಯಯನ ವರದಿಯೊಂದು ಹೇಳಿದೆ.

ADVERTISEMENT

ಓಪನ್‌ ಟೆಕ್ಸ್ಟ್‌ ಮತ್ತು ಪೊನೆಮಾನ್‌ ಸಂಸ್ಥೆಯು ನಡೆಸಿದ ಅಧ್ಯಯನದ ಪ್ರಕಾರ, ‘ಡಿಜಿಟಲ್ ಪರಿವರ್ತನೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರೂ ದುರ್ಬಲ ಡಾಟಾ ನೆಲೆಗಳು ಮತ್ತು ಸೈಬರ್ ಅಪಾಯಗಳು ಕೃತಕ ಬುದ್ಧಿಮತ್ತೆಯ ಮೂಲಕ ಪ್ರಯೋಜನ ಪಡೆದುಕೊಳ್ಳಲು ಅಡ್ಡಿಯಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದೆ.

‘ಕೃತಕ ಬುದ್ಧಿಮತ್ತೆಯನ್ನು ಅಳವಡಿಸಿಕೊಳ್ಳುವಲ್ಲಿ ಭಾರತೀಯ ಕಂಪನಿಗಳು ಜಗತ್ತಿನಲ್ಲೇ ಮುಂಚೂಣಿಯಲ್ಲಿವೆ. ಆದರೆ ಮಾಹಿತಿ ಸಿದ್ಧತೆ, ಆಡಳಿತ ವ್ಯವಸ್ಥೆ ಮತ್ತು ಅಪಾಯ ನಿರ್ವಹಣೆಗಳನ್ನು ಬಲಪಡಿಸುವುದು ಅತ್ಯವಶ್ಯಕ’ ಎಂದು ಈ ಅಧ್ಯಯನ ಅಭಿಪ್ರಾಯಪಟ್ಟಿದೆ.

‘ಭಾರತೀಯ ಸಂಸ್ಥೆಗಳು ಮಾಹಿತಿ ತಂತ್ರಜ್ಞಾನ ಮತ್ತು ವ್ಯವಹಾರ ಕ್ಷೇತ್ರಗಳಲ್ಲಿ ಈಗಾಗಲೇ ಕೃತಕ ಬುದ್ಧಿಮತ್ತೆಯನ್ನು ಅಳವಡಿಸಿದ್ದು ಅದರ ಪ್ರಮಾಣ ಶೇ 48ರಷ್ಟಿದೆ. ಇದು ಇಡೀ ಜಗತ್ತಿನಲ್ಲೇ ಅತ್ಯಧಿಕ. ಆದರೆ ಕೃತಕ ಬುದ್ಧಿಮತ್ತೆಯಲ್ಲಿ ಹೂಡಿಕೆ ಮಾಡಿರುವ ಕಂಪನಿಗಳಲ್ಲಿ ಲಾಭಾಂಶ ನಿರೀಕ್ಷಿಸುತ್ತಿರುವ ಕಂಪನಿಗಳ ಸಂಖ್ಯೆ ಶೇ 15 ಮಾತ್ರ’ ಎಂದಿದೆ.

ಈ ಸಮೀಕ್ಷೆಯಲ್ಲಿ ಐಟಿ ಕಂಪನಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 1,900ಕ್ಕೂ ಅಧಿಕ ಹಿರಿಯರು ಮತ್ತು ಜಾಗತಿಕ ಮಟ್ಟದ ಸೈಬರ್ ಭದ್ರತೆ ವಿಭಾಗದ ತಜ್ಞರು ಪಾಲ್ಗೊಂಡಿದ್ದರು. ಇದರಲ್ಲಿ ಭಾರತದ 337 ಜನರು ಇದ್ದರು.

ಕೃತಕ ಬುದ್ಧಿಮತ್ತೆಯನ್ನು ಅಳವಡಿಸುವಲ್ಲಿ ಮತ್ತು ಭವಿಷ್ಯದ ತಂತ್ರಜ್ಞಾನಕ್ಕೆ ಮುಖ ಮಾಡುವಲ್ಲಿ ಹಾಗೂ ಡಿಜಿಟಿಲ್ ಪರಿವರ್ತನೆಗೆ ಆದ್ಯತೆ ನೀಡುವಲ್ಲಿ ಜಾಗತಿಕ (ಶೇ 44) ಮಟ್ಟದ ಕಂಪನಿಗಳಿಗಿಂತ ಭಾರತದ (ಶೇ 54) ಕಂಪನಿಗಳು ಮುಂಚೂಣಿಯಲ್ಲಿವೆ. 

ಹೀಗಿದ್ದರೂ ದುರ್ಬಲ ಡೇಟಾ ನೆಲಗಳು, ಅಸಂಘಟಿತ ಮಾಹಿತಿಯ ಜಟಿಲತೆ, ಭದ್ರತಾ ಅಪಾಯಗಳು ಹಾಗೂ ಆಡಳಿತ ಮಾರ್ಗಸೂಚಿಗಳ ಕೊರತೆ ಈಗಲೂ ಕೃತಕ ಬುದ್ಧಿಮತ್ತೆ ಕ್ಷೇತ್ರದ ಬೆಳವಣಿಗೆಯ ಹಾದಿಯಲ್ಲಿ ಅಡ್ಡಗಲ್ಲುಗಳಾಗಿವೆ ಎಂಬುದು ಈ ವರದಿಯ ಅಭಿಪ್ರಾಯ.

‘ಎಐ ಅಳವಡಿಸಿಕೊಳ್ಳುವುದರಲ್ಲಿ ಅತ್ಯಂತ ಆತ್ಮವಿಶ್ವಾಸ ಮತ್ತು ನಿರೀಕ್ಷೆಗಳೊಂದಿಗೆ ಭಾರತವು ವೇಗವಾಗಿ ಜಾಗತಿಕ ನಾಯಕನಾಗಿ ಮುನ್ನುಗ್ಗುತ್ತಿದೆ’ ಎಂದು ಓಪನ್‌ಟೆಕ್ಸ್ಟ್‌ನ ಪ್ರಾದೇಶಿಕ ಉಪಾಧ್ಯಕ್ಷ ಸೌರಭ್ ಸೆಕ್ಸೆನಾ ಹೇಳಿದ್ದಾರೆ.

‘ಕೃತಕ ಬುದ್ಧಿಮತ್ತೆಯು ಅತಿ ಮುಖ್ಯ ಎಂದು ಶೇ 59ರಷ್ಟು ಕಂಪನಿಯ ನಿರ್ದೇಶಕರು ಮತ್ತು ಸಿಇಒಗಳು ಅಭಿಪ್ರಾಯಪಟ್ಟಿದ್ದಾರೆ. ಬ್ರಿಟನ್ ಮತ್ತು ಫ್ರಾನ್ಸ್‌ಗೆ ಹೋಲಿಸಿದರೂ ಇದು ಹೆಚ್ಚು. ಮಾಹಿತಿ ಸಿದ್ಧತೆಯಲ್ಲಿ ಇರುವ ಅಂತರವನ್ನು ಸರಿಪಡಿಸಿಕೊಳ್ಳುವಲ್ಲಿ ಈಗ ಜಾಗತಿಕ ಕಂಪನಿಗಳು ತಮ್ಮ ಪಾತ್ರ ನಿರ್ವಹಿಸಬೇಕಾಗಿದೆ’ ಎಂದಿದ್ದಾರೆ.

‘ಅದಕ್ಕಿಂತಲೂ ಮುಖ್ಯವಾಗಿ, ಕೃತಕ ಬುದ್ಧಿಮತ್ತೆಯ ಅಪಾಯಗಳನ್ನು ಜಾಗತಿಕ ಸಂಸ್ಥೆಗಳಿಗಿಂತ ಭಾರತೀಯ ಕಂಪನಿಗಳೇ ಅತಿ ಹೆಚ್ಚು ಅರ್ಥ ಮಾಡಿಕೊಂಡಿವೆ. ಇದರಲ್ಲೂ ಎಐ ಅಪಾಯಗಳ ಕುರಿತು ಶೇ 46ರಷ್ಟು ಕಂಪನಿಗಳು ತಮ್ಮ ಕಳವಳ ವ್ಯಕ್ತಪಡಿಸಿದರೆ, ಜಾಗತಿಕ ಮಟ್ಟದ ಈ ಸಂಖ್ಯೆ ಶೇ 32ರಷ್ಟು ಮಾತ್ರ’ ಎಂದೂ ಈ ವರದಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.