ADVERTISEMENT

ದೇಶದಲ್ಲಿ ಪತ್ತೆಯಾಗಿದ್ದಕ್ಕಿಂತಲೂ 20 ಪಟ್ಟು ಹೆಚ್ಚು ಮಂದಿಗೆ ಕೋವಿಡ್: ಅಧ್ಯಯನ

​ಪ್ರಜಾವಾಣಿ ವಾರ್ತೆ
Published 30 ಮೇ 2021, 8:16 IST
Last Updated 30 ಮೇ 2021, 8:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದಲ್ಲಿ ಮೇ 15ರ ವೇಳೆಗೆ ಅಧಿಕೃತವಾಗಿ ವರದಿಯಾಗಿರುವುದಕ್ಕಿಂತಲೂ 20 ಪಟ್ಟು ಹೆಚ್ಚು ಮಂದಿಗೆ ಕೋವಿಡ್ ಸೋಂಕು ತಗುಲಿದೆ. ಅಧಿಕೃತ ಅಂಕಿಅಂಶಗಳಿಗಿಂತ ನಾಲ್ಕೂವರೆ ಪಟ್ಟು ಹೆಚ್ಚು ಜನ ಕೋವಿಡ್‌ನಿಂದ ಮೃತಪಟ್ಟಿರಬಹುದು ಎಂದು ಅಧ್ಯಯನದಲ್ಲಿ ಕಂಡುಕೊಂಡಿರುವುದಾಗಿ ವಿಜ್ಞಾನಿಗಳು ಹೇಳಿದ್ದಾರೆ.

ಮೇ 15ರ ವೇಳೆಗೆ ದೇಶದಲ್ಲಿ ಅಧಿಕೃತ ಅಂಕಿಅಂಶಗಳ ಪ್ರಕಾರ, 2.47 ಕೋಟಿ ಮಂದಿ ಸೋಂಕಿತರಾಗಿದ್ದಾರೆ. ಆದರೆ 49.2 ಕೋಟಿ ಮಂದಿಗೆ ಸೋಂಕು ತಗುಲಿರುವ ಬಗ್ಗೆ ಅಂದಾಜಿಸಲಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಅಂದರೆ, ಸೋಂಕು ಮೊದಲು ಪತ್ತೆಯಾದ ಬಳಿಕ ಈವರೆಗೆ ದೇಶದ ಒಟ್ಟು ಜನಸಂಖ್ಯೆಯ ಶೇ 36ರಷ್ಟು ಮಂದಿಗೆ ಸೋಂಕು ತಗುಲಿದಂತಾಗಿದೆ.

ಮೇ 15ರ ವೇಳೆಗೆ ದೇಶದಲ್ಲಿ ಅಧಿಕೃತ ಅಂಕಿಅಂಶಗಳ ಪ್ರಕಾರ, 2,69,700 ಕೋವಿಡ್‌ ಸಾವು ಸಂಭವಿಸಿದೆ. ಆದರೆ ಅಧ್ಯಯನದಲ್ಲಿ ಕಂಡುಕೊಂಡಿರುವ ಪ್ರಕಾರ, 12.1 ಲಕ್ಷ ಸಾವು ಸಂಭವಿಸಿದೆ ಎಂದಿದ್ದಾರೆ ವಿಜ್ಞಾನಿಗಳು.

ಮಿಷಿಗನ್ ವಿಶ್ವವಿದ್ಯಾಲಯ, ಕೋಲ್ಕತ್ತದಲ್ಲಿರುವ ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆ, ‘ಜಾನ್ಸ್‌ ಹಾಪ್ಕಿನ್ಸ್ ಬ್ಲೂಮ್‌ಬರ್ಗ್ ಸ್ಕೂಲ್ ಆಫ್‌ ಪಬ್ಲಿಕ್ ಹೆಲ್ತ್’ ತಜ್ಞರು ಜತೆಗೂಡಿ ಅತ್ಯಾಧುನಿಕ ಸಾಂಕ್ರಾಮಿಕ ರೋಗ ಮಾದರಿ ಬಳಸಿಕೊಂಡು ಅಧ್ಯಯನ ನಡೆಸಿದ್ದಾರೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಬಿಡುಗಡೆ ಮಾಡಿರುವ ಅಂಕಿಅಂಶಗಳನ್ನೂ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.