ADVERTISEMENT

ದಾಳಿ ನಡೆಸುವ ಧೈರ್ಯ ಯುಪಿಎಗೆ ಇರಲಿಲ್ಲ: ವಿರೋಧ ಪಕ್ಷಗಳ ಮೇಲೆ ಪ್ರಧಾನಿ ವಾಗ್ದಾಳಿ

ದಾಳಿ ಸಾಕ್ಷ್ಯ ಕೇಳುತ್ತಿರುವುದಕ್ಕೆ ಕಿಡಿ

ಪಿಟಿಐ
Published 9 ಮಾರ್ಚ್ 2019, 16:55 IST
Last Updated 9 ಮಾರ್ಚ್ 2019, 16:55 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನೋಯಿಡಾ (ಉತ್ತರ ಪ್ರದೇಶ):‘ಮುಂಬೈ ಮೇಲಿನ ಉಗ್ರರ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ನಮ್ಮ ಸೇನಾಪಡೆಗಳು ಸಿದ್ಧವಿದ್ದವು. ಆದರೆ ಅಂದಿನ ಸರ್ಕಾರಕ್ಕೆ ಆ ಧೈರ್ಯವಿರಲಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಯುಪಿಎ–2 ಸರ್ಕಾರವನ್ನು ಲೇವಡಿ ಮಾಡಿದ್ದಾರೆ.

‘ಯಾವ ಕೆಲಸವನ್ನೂ ಮಾಡದ ಸರ್ಕಾರ (ಯುಪಿಎ) ಮತ್ತೆ ನಿಮಗೆ ಬೇಕೆ? ಸದಾ ನಿದ್ದೆ ಹೊಡೆಯುವ ಕಾವಲುಗಾರ ನಿಮಗೆ ಬೇಕೆ ಎಂಬುದನ್ನು ನೀವೇ ನಿರ್ಧರಿಸಿ’ ಎಂದು ಅವರು ಇಲ್ಲಿ ನಡೆದಇಲ್ಲಿ ಸಾರ್ವಜನಿಕ ಸಭೆಯಲ್ಲಿ ಕರೆ ನೀಡಿದರು.

‘ನಾವು ಅಧಿಕಾರಕ್ಕೆ ಬಂದಮೇಲೆ ಎಲ್ಲವೂ ಬದಲಾಗಿದೆ. ಭಾರತವು ಇಂದು ‘ಹೊಸ ರೀತಿ, ಹೊಸ ನೀತಿ’ಯಡಿ ಕೆಲಸ ಮಾಡುತ್ತಿದೆ. 2016ರಲ್ಲಿ ಉರಿ ದಾಳಿಗೆ ಪ್ರತೀಕಾರವಾಗಿ ನಿರ್ದಿಷ್ಟ ದಾಳಿ ನಡೆಸಲಾಯಿತು. ನಮ್ಮ ದೇಶವು, ಉಗ್ರರಿಗೆ ಅರ್ಥವಾಗುವ ಭಾಷೆಯಲ್ಲೇ ಪಾಠ ಕಲಿಸಿದ್ದು ಅದೇ ಮೊದಲು’ ಎಂದು ಮೋದಿ ಹೇಳಿದರು.

ADVERTISEMENT

‘ನಮ್ಮ ಸೈನಿಕರು ಈ ಹಿಂದೆ ಮಾಡದೇ ಇದ್ದಂತಹ ಕಾರ್ಯಾಚರಣೆ ಮಾಡಿದ್ದರು. ಉಗ್ರರನ್ನು ಅವರದ್ದೇ ನೆಲೆಯಲ್ಲಿ ಹೊಡೆದುರುಳಿಸಿದ್ದರು. ಉಗ್ರರಾಗಲಿ ಅವರ ಬೆಂಬಲಕ್ಕೆ ನಿಂತಿದ್ದವರಾಗಲಿ ಇಂತಹ ಹೊಡೆತವನ್ನು ನಿರೀಕ್ಷಿಸಿರಲಿಲ್ಲ. ಭಾರತ ಒಮ್ಮೆ ನಿರ್ದಿಷ್ಟ ದಾಳಿ ನಡೆಸಿದಂತೆ ಮತ್ತೆ ದಾಳಿ ನಡೆಸುತ್ತದೆ ಎಂಬು ಭ್ರಮಿಸಿ, ಈ ಬಾರಿ ಅವರು ತಮ್ಮ ಸೈನಿಕರನ್ನು ಗಡಿಯಲ್ಲಿ ನಿಲ್ಲಿಸಿದರು. ಆದರೆ ನಾವು ವಿಮಾನದಲ್ಲಿ ಹೋಗಿ ದಾಳಿ ನಡೆಸಿದೆವು’ ಎಂದು ಮೋದಿ ಬಣ್ಣಿಸಿದರು.

‘ತಾವು ಸದಾ ಚುಚ್ಚುತ್ತಿದ್ದರೂ, ದಾಳಿ ನಡೆಸುತ್ತಿದ್ದರೂ ಭಾರತ ಸುಮ್ಮನಿರುತ್ತದೆ ಎಂದು ಅವರು (ಉಗ್ರರು, ಉಗ್ರರ ಬೆಂಬಲಿಗರು) ಭಾವಿಸಿದ್ದರು. 2014ಕ್ಕೂ ಮೊದಲು ದೇಶವನ್ನು ಆಳಿದ್ದ ರಿಮೋಟ್ ನಿಯಂತ್ರಿತ ಸರ್ಕಾರದ ನಿಷ್ಕ್ರಿಯತೆಯೇ ಶತ್ರು ದೇಶವು ಹೀಗೆ ಭಾವಿಸಲು ಕಾರಣವಾಗಿತ್ತು. ಈಗ ಎಲ್ಲವೂ ಬದಲಾಗಿದೆ’ ಎಂದು ಮೋದಿ ಹೇಳಿದರು.

‘ಉರಿ ದಾಳಿ ನಡೆಸಿದಾಗಲೂ ವಿರೋಧ ಪಕ್ಷಗಳು ಸಾಕ್ಷ್ಯ ಕೇಳುತ್ತಿದ್ದವು. ಈಗ ವೈಮಾನಿಕ ದಾಳಿಗೂ ಸಾಕ್ಷ್ಯ ಕೇಳುತ್ತಿವೆ.ಮೋದಿಯನ್ನು ವಿರೋಧಿಸಿ– ವಿರೋಧಿಸಿ ಅವರು ರೋಸಿ ಹೋಗಿದ್ದಾರೆ. ಈಗ ದೇಶವನ್ನೇ ವಿರೋಧಿಸುತ್ತಿದ್ದಾರೆ. ಪ್ರತಿ ಭ್ರಷ್ಟಚಾರಿಗೂ ಮೋದಿಯಿಂದ ತೊಂದರೆ ಇದ್ದೇ ಇದೆ. ಈ ಕಾವಲುಗಾರನನ್ನು (ಮೋದಿ) ತೆಗಳಲು ಅವರ ಮಧ್ಯೆಯೇ ಪೈಪೋಟಿ ಇದೆ. ನನ್ನನ್ನು ತೆಗಳುತ್ತಿದ್ದರೆ ಅವರಿಗೆ ಮತ ಸಿಗಬಹುದು ಎಂದು ಅವರು ಭಾವಿಸಿದಂತಿದೆ’ ಎಂದು ಮೋದಿ ಲೇವಡಿ ಮಾಡಿದ್ದಾರೆ.

ಕಳ್ಳ ಕಡತ ಮರಳಿಸಿರಬಹುದು’

ರಕ್ಷಣಾ ಸಚಿವಾಲಯದಿಂದ ಏಕಾಏಕಿ ಕಳುವಾಗಿದ್ದ ರಫೇಲ್‌ ದಾಖಲೆಗಳನ್ನು ಬಹುಶಃ ಕಳ್ಳ ಈಗ ಹಿಂದಿರುಗಿಸಿರಬಹುದು ಎಂದು ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಲೇವಡಿ ಮಾಡಿದ್ದಾರೆ.

‘ದಾಖಲೆ ಕಳವಾಗಿವೆ ಎಂದು ಬುಧವಾರ ಹೇಳಲಾಗಿತ್ತು. ಶುಕ್ರವಾರದ ಹೊತ್ತಿಗೆ ಅವು ಜೆರಾಕ್ಸ್ ಪ್ರತಿಗಳಾಗಿ ಬದಲಾದವು. ಬಹುಶಃ ಕಳ್ಳನು ಗುರುವಾರ ಅವನ್ನು ರಕ್ಷಣಾ ಸಚಿವಾಲಯಕ್ಕೆ ವಾಪಸ್ ತಂದಿಟ್ಟಿರಬೇಕು’ ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.

ರಫೇಲ್ ದಾಖಲೆಗಳು ಕಳವಾಗಿವೆ ಎಂದು ಸುಪ್ರೀಂಕೋರ್ಟ್‌ಗೆ ಈ ಮೊದಲು ಮಾಹಿತಿ ನೀಡಿದ್ದ ಕೇಂದ್ರ ಸರ್ಕಾರ ಶುಕ್ರವಾರ ಏಕಾಏಕಿ ತನ್ನ ದಾಟಿಯನ್ನೇ ಬದಲಾಯಿಸಿದೆ.

‘ದಾಖಲೆಗಳು ಕಳವಾಗಿಲ್ಲ. ಆದರೆ ಮೂಲ ದಾಖಲೆಗಳ ಪ್ರತಿಗಳು (ಜೆರಾಕ್ಸ್) ಅರ್ಜಿದಾರರ ಕೈ ಸೇರಿವೆ’ ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟನೆ ನೀಡಿದ್ದರು.

‘ರಫೇಲ್ ದಾಖಲೆಗಳನ್ನು ಪ್ರಕಟಿಸಿದ್ದ ಪತ್ರಿಕೆ ಮೇಲೆ ಬುಧವಾರ ರಹಸ್ಯ ಕಾಯ್ದೆಯ ಅಸ್ತ್ರ ಪ್ರಯೋಗಿಸುವ ಬೆದರಿಕೆ ಒಡ್ಡಲಾಯಿತು. ಶುಕ್ರವಾರ ‘ಆಲಿವ್ ಬ್ರಾಂಚೆಸ್ ಕಾಯ್ದೆ’ಯ ಮಾತು ಬಂದಿತು. ಈ ಸಾಮಾನ್ಯಜ್ಞಾನಕ್ಕೆ ಸೆಲ್ಯೂಟ್’ ಎಂದು ಚಿದಂಬರಂ ಅವರು ಲೇವಡಿ ಮಾಡಿದ್ದಾರೆ.

‘ಉತ್ತರ ಪ್ರದೇಶ: ಕಾಂಗ್ರೆಸ್‌ ಸ್ವಂತ ಬಲದಿಂದ ಸ್ಪರ್ಧೆ’

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಲೋಕಸಭೆ ಚುನಾವಣೆಯಲ್ಲಿ ತನ್ನ ಸ್ವಂತ ಬಲದಿಂದ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜ್ಯೋತಿರಾದಿತ್ಯ ಸಿಂಧಿಯಾ ಶನಿವಾರ ಹೇಳಿದ್ದಾರೆ.

‘ಮೈತ್ರಿ ಬಗ್ಗೆ ಸಮಾನ ಮನಸ್ಕ ಪಕ್ಷಗಳು ಒಂದೇ ರೀತಿಯಲ್ಲಿ ಯೋಚಿಸುವುದು ಉತ್ತಮ. ನಮ್ಮದು ಮತ್ತು ಸಮಾಜವಾದಿ ಪಕ್ಷ (ಎಸ್‌ಪಿ) ಹಾಗೂ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ದಾರಿ ಭಿನ್ನವಾಗಿದ್ದರೂ ಉದ್ದೇಶ ಒಂದೇ ಆಗಿದೆ’ ಎಂದು ಉತ್ತರ ಪ್ರದೇಶದ ಪಶ್ಚಿಮ ಭಾಗದ ಉಸ್ತುವಾರಿಯನ್ನೂ ವಹಿಸಿಕೊಂಡಿರುವ ಸಿಂಧಿಯಾ ಹೇಳಿದ್ದಾರೆ.

ಕೇಂದ್ರದಲ್ಲಿ ಯುಪಿಎ ಸರ್ಕಾರ ರಚನೆಯಾಗಬೇಕು ಮತ್ತು 2022ರಲ್ಲಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರಬೇಕು ಎಂಬುದು ನಮ್ಮ ಮುಖ್ಯ ಉದ್ದೇಶಎಂದು ಅವರು ಹೇಳಿದ್ದಾರೆ.

ವಾಕ್ ಚತುರರು

ವಜ್ರಾಭರಣ ಉದ್ಯಮಿ ನೀರವ್‌ ಮೋದಿ ಮತ್ತು ಪ್ರಧಾನಿ ನರೇಂದ್ರ ಮೋದಿ ಮಧ್ಯೆ ಸಾಕಷ್ಟು ಸಾಮ್ಯತೆ ಕಾಣುತ್ತಿದೆ. ಈ ಇಬ್ಬರೂ ಕಾನೂನಿಗಿಂತ ತಾವು ದೊಡ್ಡವರು ಎಂದು ಭಾವಿಸಿದ್ದಾರೆ. ಪ್ರಧಾನಿ ಮೋದಿ ಅವರು ವಂಚಕರ ರಕ್ಷಣಾ ಯೋಜನೆ ಅಡಿ ನೀರವ್‌ ಮೋದಿ ಅವರಂತಹ ವಂಚಕರನ್ನು ರಕ್ಷಿಸುತ್ತಿದ್ದಾರೆ

– ಕಾಂಗ್ರೆಸ್‌

***

ನೀರವ್ ಮೋದಿ, ವಿಜಯ ಮಲ್ಯ ದೇಶ ಬಿಟ್ಟು ಪಲಾಯನ ಮಾಡಿದ್ದಾರೆ. ಇವರಿಬ್ಬರೂ ಓಡಿಹೋಗಲು ಮೋದಿ ಸರ್ಕಾರ ಏಕೆ ಅವಕಾಶ ನೀಡಿತು? ಇದೇನಾ ಮೋದಿ ಅವರ ದೇಶಭಕ್ತಿ?

ಅರವಿಂದ ಕೇಜ್ರಿವಾಲ್, ದೆಹಲಿ ಮುಖ್ಯಮಂತ್ರಿ

***

ಲಂಡನ್‌ನಲ್ಲಿ ನೀರವ್ ಮೋದಿ ಆರಾಮವಾಗಿರುವುದನ್ನು ಕಂಡು ಕಾಂಗ್ರೆಸ್‌ನವರಿಗೆ ಖುಷಿಯಾಗಿರುಬಹುದು. ಆದರೆ ಮೋದಿ ಸರ್ಕಾರ ಅವರನ್ನು ಭಾರತಕ್ಕೆ ಕರೆತರುತ್ತದೆ. ನೀರವ್‌ಗೆ ಸಹಾಯ ಮಾಡಿದ ಎಲ್ಲರನ್ನೂ ಶಿಕ್ಷೆಗೆ ಒಳಪಡಿಸುತ್ತದೆ

ಪ್ರಕಾಶ್ ಜಾವಡೇಕರ್, ಕೇಂದ್ರ ಸಚಿವ

***

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮೀನುಗಾರಿಕೆ ಮತ್ತು ಮೀನುಗಾರರ ಕಲ್ಯಾಣಕ್ಕಾಗಿ ಪ್ರತ್ಯೇಕ ಸಚಿವಾಲಯ ತೆರೆಯಲಿದೆ. ಕನಿಷ್ಠ ಆದಾಯ ಖಾತ್ರಿ ಯೋಜನೆ ಅಡಿ ಬಡವರ ಬ್ಯಾಂಕ್‌ ಖಾತೆಗಳಿಗೆ ನೇರ ಹಣ ವರ್ಗಾವಣೆ ಮಾಡಲಿದೆ

– ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

***

ಪುಲ್ವಾಮಾ ಆತ್ಮಹತ್ಯಾ ದಾಳಿ ಮತ್ತು ಬಾಲಾಕೋಟ್‌ ವಾಯುದಾಳಿಗಳನ್ನು ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳದಂತೆ ಚುನಾವಣಾ ಆಯೋಗ ತಡೆಯಬೇಕು

ಸಿಪಿಎಂ

***

ಬಾಲಾಕೋಟ್‌ ವಾಯುದಾಳಿ ಬಗ್ಗೆ ಪುರಾವೆ ಕೇಳುತ್ತಿರುವ ಕಾಂಗ್ರೆಸ್‌ ತನ್ನನ್ನು ತಾನೇ ಮೂರ್ಖ ಎಂದು ಬಿಂಬಿಸಿಕೊಳ್ಳುತ್ತಿದೆ

– ಹರ್‌ದೀಪ್‌ ಸಿಂಗ್‌ ಪುರಿ, ಕೇಂದ್ರ ಸಚಿವ

***

ಪುಲ್ವಾಮಾ ದಾಳಿಯ ಬಳಿಕ ನಡೆದ ನಿರ್ದಿಷ್ಟದಾಳಿ ಮತ್ತು ಆನಂತರದ ಕ್ರಮಗಳಿಂದಾಗಿ ಭಾರತದ ಒಂದು ಪ್ರಬಲ ದೇಶ ಎಂಬುದು ಇಡೀ ಜಗತ್ತಿಗೆ ಅರಿವಾಗಿದೆ. ಮೋದಿ ನೇತೃತ್ವದಲ್ಲಿ ಭಾರತ ಪರಿವರ್ತನೆಯಾಗಿದೆ. ಶತ್ರುಗಳಿಗೆ ತಕ್ಕ ಪ್ರತ್ಯುತ್ತರ ನೀಡವ ಶಕ್ತಿ ನಮಗಿದೆ.

ದೇವೇಂದ್ರ ಫಡಣವೀಸ್, ಮಹಾರಾಷ್ಟ್ರ ಮುಖ್ಯಮಂತ್ರಿ

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.