ನವದೆಹಲಿ: ದೇಶದಲ್ಲಿ ಕಳೆದ ವರ್ಷ ಲೋಕಸಭೆ ಚುನಾವಣೆ ನಡೆದಾಗ 96.88 ಕೋಟಿಯಷ್ಟಿದ್ದ ಮತದಾರರ ಸಂಖ್ಯೆ ಈಗ 99.1 ಕೋಟಿಗೆ ಏರಿಕೆಯಾಗಿದೆ ಎಂದು ಚುನಾವಣಾ ಆಯೋಗ (EC) ಹೇಳಿದೆ.
ಮತದಾರರ ಪಟ್ಟಿಯಲ್ಲಿ 18-29 ವಯಸ್ಸಿನ 21.7 ಕೋಟಿ ಯುವ ಮತದಾರದಿದ್ದಾರೆ. ಅಲ್ಲದೇ ಲಿಂಗಾನುಪಾತದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ. 2024ರಲ್ಲಿ 1,000 ಪುರುಷರಿಗೆ 948 ಮಹಿಳೆಯರ ಸಂಖ್ಯೆ 2025ರಲ್ಲಿ 954ಕ್ಕೆ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಮತದಾರರ ದಿನಾಚರಣೆಗೆ ಮುನ್ನ ಹೊರಡಿಸಿದ ಪ್ರಕಟಣೆಯಲ್ಲಿ ಚುನಾವಣಾ ಆಯೋಗ ತಿಳಿಸಿದೆ.
ಭಾರತದಲ್ಲಿ ಮತದಾರರ ಸಂಖ್ಯೆ ಅತಿ ಶೀಘ್ರದಲ್ಲಿ 100 ಕೋಟಿಗೆ ತಲುಪಲಿದೆ ಎಂದು ಭಾರತೀಯ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಇತ್ತೀಚೆಗೆ ಹೇಳಿದ್ದರು.
ದೆಹಲಿ ವಿಧಾನಸಭಾ ಚುನಾವಣೆ ಘೋಷಣೆಗೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಅವರು, ಸದ್ಯ ಮತದಾರರ ಸಂಖ್ಯೆ 99 ಕೋಟಿ ದಾಟಿದೆ. ಇದು ಅತಿ ಶೀಘ್ರದಲ್ಲಿ ಶತಕೋಟಿ ದಾಟಲಿದೆ ಎಂದು ಹೇಳಿದ್ದರು.
1950ರಲ್ಲಿ ಸ್ಥಾಪನೆಯಾದ ಭಾರತದ ಚುನಾವಣಾ ಆಯೋಗದ ಸಂಸ್ಥಾಪನ ದಿನದ ನೆನಪಿಗಾಗಿ ಭಾರತದಲ್ಲಿ ಪ್ರತಿ ವರ್ಷ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.