ನವದೆಹಲಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಫಾದಕರು ನಡೆಸಿದ ಗುಂಡಿನ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನಿಯರಿಗೆ ನೀಡಿದ್ದ ವಿಸಾ ರದ್ದುಗೊಳಿಸಿದ ಪ್ರಕರಣದಲ್ಲಿ, ಬೆಂಗಳೂರಿನಲ್ಲಿ ನೆಲೆಸಿದ್ದ ಐಟಿ ಉದ್ಯೋಗಿ ಹಾಗೂ ಕುಟುಂಬದ ಗಡೀಪಾರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದೆ.
ಕುಟುಂಬದ ಆರು ಸದಸ್ಯರು ಹೊಂದಿರುವ ಭಾರತದ ಪಾಸ್‌ಪೋರ್ಟ್ ಮತ್ತು ಆಧಾರ್ ಗುರುತಿನ ಚೀಟಿಯನ್ನು ಸರ್ಕಾರದ ವಶಕ್ಕೆ ನೀಡಿ ದೇಶ ತೊರೆಯುವಂತೆ ಆದೇಶಿಸಲಾಗಿದೆ. ಇದಕ್ಕೆ ತಡೆ ನೀಡಬೇಕು ಎಂದು ಅಹ್ಮದ್ ತಾರೀಕ್ ಭಟ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ತಾರೀಕ್ ಭಟ್ ಅವರು ಕೇರಳದ ಕೊಯಿಕ್ಕೋಡ್‌ನ ಐಐಎಂನಿಂದ ಎಂಬಿಎ ಪದವಿ ಪಡೆದಿದ್ದಾರೆ. ಇವರು ಸಲ್ಲಿಸಿರುವ ದಾಖಲೆ ಪರಿಶಿಲಿಸಿ, ಮುಂದಿನ ಆದೇಶದವರೆಗೂ ಯಾವುದೇ ಕ್ರಮ ಜರುಗಿಸದಂತೆ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ನಿರ್ದೇಶಿಸಿದ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಈ ಅರ್ಜಿಯನ್ನು ಹೈಕೋರ್ಟ್‌ನಲ್ಲಿ ಸಲ್ಲಿಸುವಂತೆ ತಾರೀಕ್ ಭಟ್ ಅವರಿಗೆ ಹೇಳಿದ ಸುಪ್ರೀಂ ಕೋರ್ಟ್, ಇದೊಂದು ಮಾನವೀಯ ಪ್ರಕರಣ ಎಂದಿದೆ. ಸುಪ್ರೀಂ ಕೋರ್ಟ್ ಆದೇಶವನ್ನು ಸರ್ಕಾರ ಪ್ರಶ್ನಿಸಿದೆ. ಸರ್ಕಾರ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು.
ಈ ಪ್ರಕರಣದಲ್ಲಿನ ತನ್ನ ಆದೇಶವು ಬೇರೆ ಯಾವುದೇ ಪ್ರಕರಣಗಳಿಗೆ ಅನ್ವಯಿಸಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಪಾಕಿಸ್ತಾನದ ಮೀರ್‌ಪುರ್‌ನಲ್ಲಿ ಜನಿಸಿದ ನೀವು ಭಾರತಕ್ಕೆ ಬಂದಿದ್ದು ಹೇಗೆ? ಎಂದು ಪೀಠದಲ್ಲಿದ್ದ ನ್ಯಾ. ಸೂರ್ಯ ಕಾಂತ್ ಅವರು ತಾರೀಕ್ ಭಟ್ ಅವರನ್ನು ಪ್ರಶ್ನಿಸಿದರು.
1997ರಲ್ಲಿ ತಂದೆಯೊಂದಿಗೆ ಭಾರತಕ್ಕೆ ಬಂದ್ ತಾರೀಕ್ ಭಟ್, ಶ್ರೀನಗರದಲ್ಲಿ ನೆಲೆಸಿದರು. ಪಾಕಿಸ್ತಾನ ಪಾಸ್‌ಪೋರ್ಟ್ ಅನ್ನು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ಗೆ ಒಪ್ಪಿಸಿದರು. 2000ದಲ್ಲಿ ಇವರು ಮತ್ತು ಇವರ ಕುಟುಂಬದ ಸದಸ್ಯರು ಭಾರತದ ಪಾಸ್‌ಪೋರ್ಟ್ ಮತ್ತು ಪೌರತ್ವಕ್ಕೆ ಅರ್ಜಿ ಸಲ್ಲಿಸಿದ್ದರು. ಕುಟುಂಬದ ಎಲ್ಲಾ ಸದಸ್ಯರು ಉತ್ತಮ ಶಿಕ್ಷಣ ಪಡೆದಿದ್ದಾರೆ ಎಂಬ ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡಿದ್ದಾರೆ.
‘ಭಾರತೀಯರು ಎನ್ನುವುದಕ್ಕೆ ಎಲ್ಲಾ ದಾಖಲಾತಿ ಇದ್ದರೂ, ಕುಟುಂಬದ ಎಲ್ಲಾ ಸದಸ್ಯರೂ ಆಧಾರ್ ಕಾರ್ಡ್ ಹೊಂದಿದ್ದರೂ ಭಾರತ ತೊರೆಯುವಂತೆ ಗೃಹ ಸಚಿವಾಲಯ ಕಳೆದವಾರ ನೋಟಿಸ್ ಕಳುಹಿಸಿದೆ. ‘ಭಾರತದ ವಿಸಾ ಪಡೆದು ದೇಶ ಪ್ರವೇಶಿಸಿ, ಅವಧಿ ಮೀರಿ ನೆಲೆಸಿದ್ದಾರೆ’ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ’ ಎಂದು ತಾರೀಕ್ ಭಟ್ ನ್ಯಾಯಾಲಯದ ಗಮನಕ್ಕೆ ತಂದರು.
ಏ.22 ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನದ ನಂಟಿರುವ ಉಗ್ರರು ನಡೆಸಿದ ದಾಳಿಯಲ್ಲಿ 26 ಮಂದಿ ಅಮಾಯಕರು ಉಸಿರು ಚೆಲ್ಲಿದ್ದರು. ಘಟನೆಯ ಬಳಿಕ ಕೇಂದ್ರ ಸರ್ಕಾರ ಪಾಕಿಸ್ತಾನ ನಾಗರಿಕರಿಗೆ ‘ಭಾರತದಿಂದ ತೊಲಗಿ’ ಎಂದಿತ್ತು.
ಸಾರ್ಕ್ ವೀಸಾ ಹೊಂದಿದ್ದವರಿಗೆ ಏ.25, ವೈದ್ಯಕೀಯ ಚಿಕಿತ್ಸೆಗಾಗಿ ವೀಸಾ ಪಡೆದು ಬಂದಿದ್ದವರಿಗೆ ಏ.29 ಹಾಗೂ ಉದ್ಯಮ, ಪತ್ರಕರ್ತರು, ಪ್ರವಾಸಿಗರು, ವಿದ್ಯಾರ್ಥಿಗಳು ಸೇರಿ 12 ರೀತಿಯ ವೀಸಾ ಪಡೆದಿದ್ದವರಿಗೆ ದೇಶ ತೊರೆಯಲು ಏ.27ರವರೆಗೆ ಕಾಲಾವಕಾಶ ನೀಡಲಾಗಿತ್ತು.
ಭಾರತ ಕೂಡ ಇಸ್ಲಾಮಾಬಾದ್‌ನಲ್ಲಿನ ಭಾರತ ಹೈಕೈಮಿಷನ್ ಅನ್ನು ವಾಪಸ್ ಕರೆಸಿಕೊಂಡಿದೆ. ಆದರೆ ದೀರ್ಘಾವಧಿ ವೀಸಾ, ಅಧಿಕೃತ ವೀಸಾ ಇರುವವರನ್ನು ಈ ಪ್ರಕ್ರಿಯೆಯಿಂದ ಹೊರಗುಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.