ಕರ್ನಲ್ ಸೋಫಿಯಾ ಖುರೇಷಿ
ಪಪಿಟಿಐ ಚಿತ್ರ
ಶ್ರೀನಗರ/ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಣ ಸಂಘರ್ಷ ಉದ್ವಿಗ್ನಗೊಂಡಿದೆ. ಪಾಕ್ ಪಡೆಗಳು ಸತತ ಎರಡನೇ ದಿನವೂ ಡ್ರೋನ್ ದಾಳಿಯನ್ನು ಮುಂದುವರಿಸಿದ್ದು, ಇದರ ಪರಿಣಾಮವಾಗಿ ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬ್‌ನಲ್ಲಿರುವ ಅಂತರರಾಷ್ಟ್ರೀಯ ಗಡಿ ಹಾಗೂ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಭಾರಿ ಸ್ಫೋಟಗಳು ವರದಿಯಾಗಿವೆ.
ಪಹಲ್ಗಾಮ್‌ನಲ್ಲಿ (ಏಪ್ರಿಲ್ 22ರಂದು) ನಡೆದ ದಾಳಿಗೆ ಪ್ರತಿಯಾಗಿ ಭಾರತೀಯ ಸೇನಾ ಪಡೆಗಳು ಉಗ್ರರ ನೆಲೆಗಳನ್ನು ಗುರಿಯಾಗಿಸಿ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶಗಳಲ್ಲಿ (ಮೇ 7ರಂದು) 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ನಡೆಸಿದ್ದವು. ಇದರ ಬೆನ್ನಲ್ಲೇ, ಪಾಕಿಸ್ತಾನ ಪಡೆಗಳು ಭಾರತದ ನಾಗರಿಕರು ಮತ್ತು ಸೇನಾ ನೆಲೆಗಳನ್ನು ಗರಿಯಾಗಿಸಿ ಗಡಿಯುದ್ದಕ್ಕೂ ದಾಳಿ ಮಾಡುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾರಾಮುಲ್ಲಾ, ಶ್ರೀನಗರ, ಅವಂತಿಪುರ, ನಾಗ್ರೋಟಾ, ಜಮ್ಮು, ಫಿರೋಜ್‌ಪುರ, ಪಠಾಣ್‌ಕೋಟ್, ಫಜಿಲ್ಕಾ, ಲಾಲ್‌ಗಢ್ ಜಟ್ಟಾ, ಜೈಸಲ್ಮೇರ್, ಬಾರ್ಮರ್, ಭುಜ್, ಕುವಾರ್ಬೆಟ್ ಮತ್ತು ಲಖಿ ನಲಾ ಪ್ರದೇಶಗಳಲ್ಲಿ ಡ್ರೋನ್‌ಗಳು ಪತ್ತೆಯಾಗಿವೆ.
ಶ್ರೀನಗರ ವಿಮಾಣ ನಿಲ್ದಾಣದ ಸಮೀಪ ಭಾರಿ ಸ್ಫೋಟಗಳು ಕೇಳುತ್ತಿದ್ದಂತೆ, ಪಂಜಾಬ್‌ನ ಪಠಾಣ್‌ಕೋಟ್, ಅಮೃತಸರ ಮತ್ತು ಪಿರೋಜ್‌ಪುರ ಜಿಲ್ಲೆಗಳಲ್ಲಿ ಗುರುವಾರ ರಾತ್ರಿ 9ರ ಸುಮಾರಿಗೆ ಬ್ಲಾಕ್‌ಔಟ್ ಮಾಡಲಾಯಿತು. ಆದರೂ, ಪಾಕಿಸ್ತಾನ ಕತಲ್ಲಿನಲ್ಲೇ ಹಲವು ಡ್ರೋನ್‌ಗಳನ್ನು ಹಾರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್, ಸೇನಾಪಡೆಗಳ ಮುಖ್ಯಸ್ಥ ಲೆ. ಜನರಲ್ ಅನಿಲ್ ಚೌಹಾಣ್ ಹಾಗೂ ಮೂರು ಸೇನಾ ಪಡೆಗಳ ಮುಖ್ಯಸ್ಥರೊಂದಿಗೆ ಶುಕ್ರವಾರ ಸಭೆ ನಡೆಸಿ ಪರಿಸ್ಥಿತಿ ಕುರಿತು ಆವಲೋಕನ ನಡೆಸಿದ್ದಾರೆ.
ವೈಮಾನಿಕ ದಾಳಿಗಳನ್ನು ಹಿಮ್ಮೆಟ್ಟಿಸಲಾಗುತ್ತಿದೆ. ಸಶಸ್ತ್ರ ಪಡೆಗಳು ನಿಕಟ ಹಾಗೂ ನಿರಂತರವಾಗಿ ಕಟ್ಟೆಚ್ಚರ ವಹಿಸಿವೆ. ಅಗತ್ಯಾನುಸಾರ ತ್ವರಿತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ನಾಗರಿಕರಿಗೆ, ಅದರಲ್ಲೂ ಗಡಿ ಪ್ರದೇಶಗಳಲ್ಲಿ ವಾಸಿಸುತ್ತಿರುವವರಿಗೆ ಮನೆಗಳಲ್ಲೇ ಇರುವಂತೆ, ಅನಗತ್ಯವಾಗಿ ಹೊರಬರದಂತೆ ಹಾಗೂ ಸ್ಥಳೀಯ ಅಧಿಕಾರಿಗಳ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಆತಂಕಕ್ಕೊಳಗಾಗುವ ಅಗತ್ಯವಿಲ್ಲ. ಜಾಗರೂಕರಾಗಿರುವುದು ಮತ್ತು ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ' ಎಂದು ಅವರು ಹೇಳಿದ್ದಾರೆ.
‘ಪಾಕಿಸ್ತಾನ ಸೇನೆಯು ಲೇಹ್‌ನಿಂದ ಸರ್ ಕ್ರೀಕ್‌ವರೆಗಿನ ಪಶ್ಚಿಮ ಗಡಿಯುದ್ದಕ್ಕೂ ಭಾರತೀಯ ಪಡೆಗಳ ಮೇಲೆ ಬುಧವಾರ ಹಾಗೂ ಗುರುವಾರ ರಾತ್ರಿ ಹಲವು ಬಾರಿ ದಾಳಿ ನಡೆಸಿದೆ. 36 ಪ್ರದೇಶಗಳ ಮೇಲೆ ದಾಳಿ ಮಾಡಲು ಸುಮಾರು 300-400 ಡ್ರೋನ್‌ಗಳನ್ನು ಸಹ ಬಳಸಿದೆ. ಅವುಗಳನ್ನು ಭಾರತೀಯ ಪಡೆಗಳು ಹೊಡೆದುರುಳಿಸಿವೆ. ಡ್ರೋನ್‌ಗಳ ಮೂಲದ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಇವು ಟರ್ಕಿಯ ಡ್ರೋನ್‌ಗಳು ಎಂಬುದು ಆರಂಭಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ಕರ್ನಲ್ ಸೋಫಿಯಾ ಖುರೇಷಿ ಶುಕ್ರವಾರ ಮಾಹಿತಿ ನೀಡಿದ್ದರು. ಆದಾಗ್ಯೂ, ಪಾಕ್ ದಾಳಿ ಮುಂದುವರಿಸಿದೆ. ಇದರಿಂದ, ಗಡಿ ಭಾಗದ ಗ್ರಾಮಗಳಲ್ಲಿ ಭಾರಿ ಹಾನಿಯಾಗಿದೆ.
ಭಾರತವು ಪ್ರತಿದಾಳಿ ನಡೆಸುತ್ತಿದ್ದರೂ, 'ವೈಮಾನಿಕ ಗುರಾಣಿ'ಗಳನ್ನಾಗಿ ಬಳಸುವ ಸಲುವಾಗಿ ನಾಗರಿಕ ವಿಮಾನಗಳಿಗೆ ಅಂತರರಾಷ್ಟ್ರೀಯ ಗಡಿ ಸಮೀಪ ಹಾರಾಟ ನಡೆಸಲು ಅನುಮತಿಸುವ ಮೂಲಕ ಪಾಕಿಸ್ತಾನ ಬೇಜವಾಬ್ದಾರಿ ವರ್ತನೆ ಪ್ರದರ್ಶಿಸಿದೆ ಎಂದು ಖುರೇಷಿ ಟೀಕಿಸಿದ್ದಾರೆ.
ಪಾಕಿಸ್ತಾನ ಪಡೆಗಳು, ಭಾರತದ ಸೇನಾ ಸೌಕರ್ಯಗಳನ್ನು ಗುರಿಯಾಗಿಸುವ ಉದ್ದೇಶದಿಂದ ಪಶ್ಚಿಮ ಗಡಿಯಲ್ಲಿ ಹಲವು ಬಾರಿ ಭಾರತದ ವಾಯು ಗಡಿ ಉಲ್ಲಂಘಿಸಿವೆ. ಈ ಪ್ರಯತ್ನಗಳನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿರುವ ಭಾರತೀಯ ಸೇನೆ, ಡ್ರೋನ್‌ಗಳನ್ನು ಹೊಡೆದುರುಳಿಸಿದೆ.
ಡ್ರೋನ್‌ಗಳ ಅವಶೇಷಗಳ ಬಗ್ಗೆ ವಿಧಿವಿಜ್ಞಾನ ತನಿಖೆ ನಡೆಸಲಾಗುತ್ತಿದೆ. ಅವು ಟರ್ಕಿ ನಿರ್ಮಾಣದವು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಖುರೇಷಿ ಹೇಳಿದ್ದಾರೆ.
ಪಾಕ್ ಪಡೆಗಳು ಗಡಿಯುದ್ದಕ್ಕೂ ನಡೆಸಿದ ದಾಳಿಯಲ್ಲಿ ತಂಗ್‌ಧರ್, ಉರಿ, ಪೂಂಚ್, ಮೆಂಧರ್, ರಜೌರಿ, ಅಖ್ನೂರ್ ಮತ್ತು ಉಧಮ್‌ಪುರ್ ಪ್ರದೇಶಗಳಲ್ಲಿನ ಹಲವು ಗ್ರಾಮಗಳಲ್ಲಿ ಭಾರಿ ಹಾನಿಯುಂಟಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.