ADVERTISEMENT

Ind-Pak ಕದನ ವಿರಾಮ | ಪಾಕ್ ಭವಿಷ್ಯ ಅದರ ವರ್ತನೆ ಮೇಲಿದೆ: ಮೋದಿ ಖಡಕ್ ಎಚ್ಚರಿಕೆ

ಪಿಟಿಐ
Published 12 ಮೇ 2025, 16:09 IST
Last Updated 12 ಮೇ 2025, 16:09 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ</p></div>

ಪ್ರಧಾನಿ ನರೇಂದ್ರ ಮೋದಿ

   

ಪಿಟಿಐ ಚಿತ್ರ

ನವದೆಹಲಿ: ‘ಭಯೋತ್ಪಾದನೆ ಮತ್ತು ವ್ಯಾಪಾರ ಹಾಗೂ ಭಯೋತ್ಪಾದನೆ ಮತ್ತು ಮಾತುಕತೆ ಎಂದಿಗೂ ಜತೆಜತೆಯಾಗಿ ಸಾಗಲು ಸಾಧ್ಯವಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಖಡಕ್ ಸಂದೇಶ ರವಾನಿಸಿದ್ದಾರೆ.

ADVERTISEMENT

ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ‘ಭಯೋತ್ಪಾದನೆ ವಿರುದ್ಧ ‘ಆಪರೇಷನ್ ಸಿಂಧೂರ್’ ಎಂಬುದು ಭಾರತದ ಹೊಸ ನೀತಿಯಾಗಿದೆ. ಸದ್ಯಕ್ಕೆ ನಾವು ಪಾಕಿಸ್ತಾನ ವಿರುದ್ಧದ ಸೇನಾ ಕಾರ್ಯಾಚರಣೆಗೆ ಅಲ್ಪ ವಿರಾಮ ನೀಡಿದ್ದೇವೆ. ಆದರೆ ಭವಿಷ್ಯವು ಅವರ ವರ್ತನೆಯನ್ನು ಅವಲಂಬಿಸಿರಲಿದೆ’ ಎಂದು ತಮ್ಮ 22 ನಿಮಿಷಗಳ ಭಾಷಣದಲ್ಲಿ ಗುಡುಗಿದ್ದಾರೆ. 

‘ಇಷ್ಟು ವರ್ಷಗಳ ಕಾಲ ಪಾಕಿಸ್ತಾನವು ಸಾಕಿ, ಸಲುಹಿರುವ ಭಯೋತ್ಪಾದನೆ ಅವರನ್ನೇ ನುಂಗಲಿದೆ. ಪಾಕಿಸ್ತಾನ ಒಂದೊಮ್ಮೆ ಉಳಿಯಬೇಕೆಂದರೆ, ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತೊಗೆಯಬೇಕು. ಇದು ಯುದ್ಧದ ಯುಗವಲ್ಲ. ಹಾಗೆಯೇ ಇದು ಭಯೋತ್ಪಾದನೆಯ ಯುಗವೂ ಅಲ್ಲ’ ಎಂದರು.

‘ಪಾಕಿಸ್ತಾನ ಜತೆಗಿನ ಯಾವುದೇ ಮಾತುಕತೆಯು ಭಯೋತ್ಪಾದನೆ ಮತ್ತು ಪಾಕ್ ಆಕ್ರಮಿತ ಕಾಶ್ಮೀರ ಕುರಿತಾಗಿ ಮಾತ್ರ ಇರಲಿದೆ. ಪಾಕಿಸ್ತಾನದೊಂದಿಗೆ ಯಾವುದೇ ವ್ಯಾಪಾರವನ್ನು ಭಾರತ ನಡೆಸದು. ತನ್ನ ದುಸ್ಸಾಹಸವನ್ನು ನಿಲ್ಲಿಸುವ ವಾಗ್ದಾನ ಮಾಡಿದರಷ್ಟೇ ಸೇನಾ ಕಾರ್ಯಾಚರಣೆಯನ್ನು ನಿಲ್ಲಿಸುವ ಪಾಕಿಸ್ತಾನದ ಮೊರೆಯನ್ನು ನವದೆಹಲಿ ಪರಿಗಣಿಸಲಿದೆ’ ಎಂದಿದ್ದಾರೆ.

‘ಪಾಕಿಸ್ತಾನವು ತನ್ನ ನೆಲದಲ್ಲಿರುವ ಭಯೋತ್ಪಾದಕರ ನೆಲೆಗಳನ್ನು ನಾಶಪಡಿಸದ ಹೊರತೂ, ಶಾಂತಿಗೆ ಯಾವುದೇ ಸ್ಥಾನವಿರದು. ನಮ್ಮ ದೇಶದ ಮಹಿಳೆಯರ ಸಿಂಧೂರ ಅಳಿಸಿದ್ದರ ಪರಿಣಾಮ ಏನು ಎಂಬುದು ನಮ್ಮ ಶತ್ರುಗಳಿಗೆ ಈಗ ಅರಿವಾಗಿದೆ. ಮೇ 7ರ ಆಪರೇಷನ್ ಸಿಂಧೂರ ಕೇವಲ ಒಂದು ಹೆಸರಷ್ಟೇ ಅಲ್ಲ, ನಮ್ಮ ಸಂಕಲ್ಪ ಕಾರ್ಯರೂಪಕ್ಕೆ ತಂದ ಪರಿಣಾಮವನ್ನು ಇಡೀ ಜಗತ್ತೇ ನೋಡಿದೆ. ನಮ್ಮ ಕ್ಷಿಪಣಿ, ಡ್ರೋನ್‌ಗಳು ಪಾಕಿಸ್ತಾನದಲ್ಲಿರುವ ಭಯೋತ್ಪಾದಕರನ್ನು ಧ್ವಂಸಗೊಳಿಸಿವೆ. ಅವರ ಕಟ್ಟಡಗಳನ್ನಷ್ಟೇ ಅಲ್ಲ, ಅವರ ಆತ್ಮಬಲವನ್ನೇ ಅಡಗಿಸಿದೆ’ ಎಂದು ಮೋದಿ ಹೇಳಿದ್ದಾರೆ.

‘ಭಯೋತ್ಪಾದನೆ ವಿರುದ್ಧ ಹೋರಾಡುವುದನ್ನು ಬಿಟ್ಟು, ಭಯೋತ್ಪಾದಕರ ನೆಲೆ ಧ್ವಂಸಗೊಳಿಸಿದ ಭಾರತದ ವಿರುದ್ಧ ಪಾಕಿಸ್ತಾನ ಸಮರ ಸಾರಿತು. ನಮ್ಮ ಕಾರ್ಯಾಚರಣೆಯಲ್ಲಿ ಸುಮಾರು ನೂರಕ್ಕೂ ಹೆಚ್ಚು ಭಯೋತ್ಪಾದಕರು ಹತರಾಗಿದ್ದಾರೆ. ಪಾಕಿಸ್ತಾನದ ಡ್ರೋನ್‌ಗಳನ್ನು ನಮ್ಮ ಸೇನೆ ನೆಲಕ್ಕುರುಳಿಸಿದೆ. ನಮ್ಮ ಕ್ಷಿಪಣಿಗಳು ಪಾಕಿಸ್ತಾನದ ವಾಯುನೆಲೆಯನ್ನು ಧ್ವಂಸಗೊಳಿಸಿವೆ’ ಎಂದು ಪ್ರಧಾನಿ ಹೇಳಿದ್ದಾರೆ.

‘ದೇಶದ ಸೇನೆಯಲ್ಲಿರುವ ಸೈನಿಕರ ಧೈರ್ಯವಂತ ತಾಯಂದಿರು, ಸೋದರಿಯರು ಹಾಗೂ ಹೆಣ್ಣುಮಕ್ಕಳಿಗೆ ನನ್ನ ನಮನಗಳು. ಪಾಕಿಸ್ತಾನದ ಎಂಟು ವಾಯು ನೆಲೆಗೆ ಭಾರೀ ಹಾನಿಯುಂಟು ಮಾಡಿದ ಸಶಸ್ತ್ರ ಪಡೆಯ ಯೋಧರಿಗೆ ಪ್ರಧಾನಿ ಮೋದಿ ಗೌರವ ಸಮರ್ಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.