ಪ್ರಾತಿನಿಧಿಕ ಚಿತ್ರ
ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಏರ್ಪಟ್ಟಿದ್ದು, ಪಾಕಿಸ್ತಾನಕ್ಕೆ ಭಾರತ ಸೇನೆ ತಕ್ಕ ಪ್ರತ್ಯುತ್ತರ ನೀಡುತ್ತಿದೆ. ಹೀಗಾಗಿ ದೇಶದ ಭದ್ರತಾ ದೃಷ್ಟಿಯಿಂದ ರಕ್ಷಣಾ ಕಾರ್ಯಾಚರಣೆಗಳು ಮತ್ತು ಭದ್ರತಾ ಪಡೆಗಳ ಚಲನವಲನಗಳ ನೇರ ಪ್ರಸಾರವನ್ನು ತೋರಿಸದಂತೆ ಎಲ್ಲಾ ಮಾಧ್ಯಮಗಳಿಗೆ ಕೇಂದ್ರ ರಕ್ಷಣಾ ಸಚಿವಾಲಯ ಎಚ್ಚರಿಕೆ ನೀಡಿದೆ.
ಮಾಧ್ಯಮಗಳು, ಸುದ್ದಿ ವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮಗಳಿಗೆ ಸೂಚನೆ ನೀಡಿರುವ ಸಚಿವಾಲಯ, ಮುಖ್ಯವಾಗಿ ನೇರ ಪ್ರಸಾರ, ರಕ್ಷಣಾ ಕಾರ್ಯಾಚರಣೆಗೆ ಸಂಬಂಧಿಸಿದ ಮೂಲಗಳನ್ನು ಆಧರಿಸಿದ ವರದಿಗಳನ್ನು ಪ್ರಸಾರ ಮಾಡುವಂತಿಲ್ಲ. ಜತೆಗೆ ಸೂಕ್ಷ್ಮ ಮಾಹಿತಿಯನ್ನು ಬಹಿರಂಗಪಡಿಸಕೂಡದು, ಇದರಿಂದ ಕಾರ್ಯಾಚರಣೆಗೆ ಅಡ್ಡಿಯಾಗಿ ಅಪಾಯಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಇದಕ್ಕೆ ಈ ಹಿಂದಿನ ಘಟನೆಗಳೇ ಕಾರಣ. ಉದಾಹರಣೆಗೆ ಕಾರ್ಗಿಲ್ ಯುದ್ಧ, ಮುಂಬೈ ದಾಳಿ (26/11), ಕಂದಹಾರ್ ಹೈಜಾಕ್ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ ಅನಿಯಂತ್ರಿತ ಪ್ರಸಾರವು ರಾಷ್ಟ್ರೀಯ ಹಿತಾಸಕ್ತಿಗಳ ಮೇಲೆ ನಿರೀಕ್ಷಿಸದ ಪ್ರತಿಕೂಲ ಪರಿಣಾಮಗಳನ್ನು ಬೀರಿದೆ.
ಮಾಧ್ಯಮ, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಅಥವಾ ಒಬ್ಬ ವ್ಯಕ್ತಿ ದೇಶದ ಭದ್ರತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಕಾನೂನಾತ್ಮಕ ಕಟ್ಟುಪಾಡುಗಳನ್ನು ಹೊರತುಪಡಿಸಿ ನಮ್ಮ ಕ್ರಮಗಳು, ಕಾರ್ಯಾಚರಣೆಗಳು ಅಥವಾ ನಮ್ಮ ಪಡೆಗಳ ಭದ್ರತೆಗೆ ಧಕ್ಕೆ ತರದಂತೆ ನೋಡಿಕೊಳ್ಳುವುದು ನೈತಿಕ ಜವಾಬ್ದಾರಿಯಾಗಿದೆ ಎಂದು ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.