ADVERTISEMENT

India-Pakistan Tensions: ಗಡಿಯಲ್ಲಿ ಸೇನಾ ಸಂಘರ್ಷ ತೀವ್ರ

​ಪ್ರಜಾವಾಣಿ ವಾರ್ತೆ
Published 8 ಮೇ 2025, 16:27 IST
Last Updated 8 ಮೇ 2025, 16:27 IST
   

ನವದೆಹಲಿ: ಭಾರತದ ಸಶಸ್ತ್ರ ಪಡೆಗಳು ‘ಆಪರೇಷನ್‌ ಸಿಂಧೂರ’ದ ಮೂಲಕ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ಗುರುವಾರ ಗಡಿಯಲ್ಲಿ ಎರಡೂ ದೇಶಗಳ ನಡುವೆ ಸೇನಾ ಸಂಘರ್ಷ ತೀವ್ರಗೊಂಡಿದೆ.

‘ದೇಶದ ‍ಪಶ್ಚಿಮ ಭಾಗದಲ್ಲಿರುವ ಭಾರತೀಯ ವಾಯುಪಡೆಯ 13 ಸೇರಿದಂತೆ ಒಟ್ಟು 15 ಸೇನಾ ನೆಲೆಗಳ ಮೇಲೆ ಡ್ರೋನ್‌ ಹಾಗೂ ಕ್ಷಿಪಣಿಗಳ ಮೂಲಕ ದಾಳಿ ನಡೆಸಿ ಧ್ವಂಸಗೊಳಿಸುವ ಪಾಕಿಸ್ತಾನದ ಪ್ರಯತ್ನವನ್ನು ಭಾರತೀಯ ಸಶಸ್ತ್ರ ಪಡೆಗಳು ವಿಫಲಗೊಳಿಸಿವೆ. ಪಾಕ್‌ ಕ್ರಿಯೆಗೆ ಪ್ರತಿ ದಾಳಿಯ ಮೂಲಕ ಲಾಹೋರ್‌ನಲ್ಲಿರುವ ವಾಯು ರಕ್ಷಣಾ ವ್ಯವಸ್ಥೆಯನ್ನು ನಾಶಗೊಳಿಸಲಾಗಿದೆ’ ಎಂದು ಭಾರತೀಯ ಅಧಿಕಾರಿಗಳು ಹೇಳಿದರು. 

ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ, ಭಾರತೀಯ ಸೇನೆಯ ಕರ್ನಲ್‌ ಸೋಫಿಯಾ ಖುರೇಷಿ ಮತ್ತು ಭಾರತೀಯ ವಾಯುಪಡೆಯ ವಿಂಗ್‌ ಕಮಾಂಡರ್ ವ್ಯೋಮಿಕಾ ಸಿಂಗ್‌ ಅವರು ಗುರುವಾರದ ‘ಸಿಂಧೂರ’ ಕಾರ್ಯಾಚರಣೆಯ ವಿವರಗಳನ್ನು ನೀಡಿದರು.

ADVERTISEMENT

‘ಅವಂತಿಪುರ, ಶ್ರೀನಗರ, ಜಮ್ಮು, ಪಠಾಣ್‌ಕೋಟ್, ಅಮೃತಸರ, ಕಪೂರ್ಥಲಾ, ಜಲಂಧರ್, ಲುಧಿಯಾನಾ, ಅದಂಪುರ, ಬಠಿಂಡಾ, ಚಂಡೀಗಢ, ನಾಲ್, ಫಲೋಡಿ, ಉತ್ತರಲಾಯಿ ಮತ್ತು ಭುಜ್ ಸೇರಿದಂತೆ ಉತ್ತರ ಮತ್ತು ಪಶ್ಚಿಮ ಭಾರತದ ಹಲವಾರು ಮಿಲಿಟರಿ ನೆಲೆಗಳ ಮೇಲೆ ಪಾಕಿಸ್ತಾನವು ಬುಧವಾರ ರಾತ್ರಿ ದಾಳಿ ನಡೆಸಲು ಪ್ರಯತ್ನಿಸಿತು. ಇದನ್ನು ನಮ್ಮ ಸಶಸ್ತ್ರ ಪಡೆಗಳು ವಿಫಲಗೊಳಿಸಿದವು. ಹಲವಾರು ಸ್ಥಳಗಳಿಂದ ದಾಳಿಯ ಅವಶೇಷಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಇದು ಪಾಕ್‌ ನಡೆಸಿದ ಕೃತ್ಯಕ್ಕೆ ಸಾಕ್ಷಿ’ ಎಂದು ಸೋಫಿಯಾ ಖುರೇಷಿ ತಿಳಿಸಿದರು. 

‘ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ(ಎಲ್‌ಒಸಿ) ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನ ನಡೆಸಿರುವ ದಾಳಿಯಿಂದಾಗಿ ಪೂಂಛ್‌ ವಲಯದಲ್ಲಿ 16 ನಾಗರಿಕರು ಸಾವಿಗೀಡಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಈ ದಾಳಿಯಲ್ಲಿ ಮೂವರು ಮಹಿಳೆಯರು ಮತ್ತು ಐವರು ಮಕ್ಕಳು ಬಲಿಯಾಗಿದ್ದಾರೆ. ಇಲ್ಲಿಯೂ ಪಾಕಿಸ್ತಾನದ ದಾಳಿ ನಿಲ್ಲಿಸಲು ಭಾರತ ಪ್ರತಿಕ್ರಿಯಿಸಬೇಕಾಯಿತು’ ಎಂದು ಸ್ಪಷ್ಟಪಡಿಸಿದರು. 

‘ಧಾರ್ಮಿಕ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಪಾಕಿಸ್ತಾನ ಅಪಪ್ರಚಾರ ನಡೆಸುತ್ತಿದೆ. ನಾವು ಉಗ್ರರ ತಾಣಗಳ ಮೇಲಷ್ಟೇ ಕಾರ್ಯಾಚರಣೆ ನಡೆಸಿದ್ದೇವೆ. ಆದರೆ, ಪಾಕಿಸ್ತಾನ ಸೇನೆಯು ಗುರುದ್ವಾರವನ್ನೂ ಗುರಿಯಾಗಿಸಿ ಸಿಖ್ ಸಮುದಾಯದವರ ಮೇಲೆ ದಾಳಿ ನಡೆಸಿದ್ದು, ಇದರಲ್ಲಿ ಮೂವರು ನಾಗರಿಕರು ಮೃತಪಟ್ಟಿದ್ದಾರೆ’ ಎಂದು ಮಾಹಿತಿ ನೀಡಿದರು. 

‘ಪಾಕ್‌ ಪ್ರೇರಿತ ಉಗ್ರರ ಕೃತ್ಯಕ್ಕೆ ಆಪರೇಷನ್‌ ಸಿಂಧೂರ ಮೂಲಕ ನಾವು ಪ್ರತಿಕ್ರಿಯೆ ನೀಡಿದ್ದೆವು. ನಮ್ಮ ಪ್ರತಿಕ್ರಿಯೆ ನಿರ್ದಿಷ್ಟ, ವಿವೇಚನಾಭರಿತ ಹಾಗೂ ಉದ್ವಿಗ್ನರಹಿತ ಎಂದು ಸ್ಪಷ್ಟಪಡಿಸಿದ್ದೆವು. ಪಾಕಿಸ್ತಾನಿ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡಿಲ್ಲ ಎಂದು ನಿರ್ದಿಷ್ಟವಾಗಿ ಉಲ್ಲೇಖಿಸಿದ್ದೆವು. ನಮ್ಮ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದರೆ ಸೂಕ್ತ ಪ್ರತಿಕ್ರಿಯೆ ನೀಡುತ್ತೇವೆ ಎಂದೂ ಎಚ್ಚರಿಸಿದ್ದೆವು’ ಎಂದು ಹೇಳಿದರು. 

‘ಪಹಲ್ಗಾಮ್ ಭಯೋತ್ಪಾದಕ ದಾಳಿಯೊಂದಿಗೆ ಪರಿಸ್ಥಿತಿ ಉಲ್ಬಣಗೊಂಡ ಕಾರಣ, ಭಾರತವು ‘ಆಪರೇಷನ್ ಸಿಂಧೂರ’ ಮೂಲಕ ಅದಕ್ಕೆ ಪ್ರತಿಕ್ರಿಯಿಸಿತು. ನಮ್ಮದು ಕ್ರಿಯೆಗೆ ಪ್ರತಿಕ್ರಿಯೆ ಅಷ್ಟೆ. ಉದ್ವಿಗ್ನ ಶಮನಗೊಳಿಸುವ ಆಯ್ಕೆ ಪಾಕಿಸ್ತಾನದ ಕೈಯಲ್ಲಿದೆ’ ಎಂದು ತಿಳಿಸಿದರು. 

‘ಪಾಕಿಸ್ತಾನವು ಜಾಗತಿಕ ಭಯೋತ್ಪಾದಕ ಕೇಂದ್ರವಾಗಿ ಪರಿವರ್ತನೆಗೊಂಡಿದೆ. ಜಗತ್ತಿನ ವಿವಿಧ ಕಡೆಗಳಲ್ಲಿ ನಡೆದ ಭಯೋತ್ಪಾದಕ ಕೃತ್ಯಗಳೇ ಇದಕ್ಕೆ ಸಾಕ್ಷಿ. ಪಾಕಿಸ್ತಾನವು ಉಗ್ರರ ಸುರಕ್ಷಿತ ಅಡಗುತಾಣವಾಗಿದೆ. ಭಾರತದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಪಾಕಿಸ್ತಾನವು ದಶಕಗಳಿಂದ ಪ್ರಚೋದನೆ ನೀಡುತ್ತಿದೆ’ ಎಂದು ಅವರು ದೂರಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.