ಅನಿಲ್ ಚೌಹಾಣ್
–ಪಿಟಿಐ ಚಿತ್ರ
ಸಿಂಗಪುರ/ನವದೆಹಲಿ: ಪಾಕಿಸ್ತಾನದ ಜೊತೆ ಈಚೆಗೆ ನಡೆದ ಮಿಲಿಟರಿ ಸಂಘರ್ಷದ ಸಂದರ್ಭದಲ್ಲಿ ಭಾರತವು ಕೆಲವು ಯುದ್ಧವಿಮಾನಗಳನ್ನು ಕಳೆದುಕೊಂಡಿದೆ ಎಂಬುದನ್ನು ದೇಶದ ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಅನಿಲ್ ಚೌಹಾಣ್ ಶನಿವಾರ ಒಪ್ಪಿಕೊಂಡಿದ್ದಾರೆ.
ಆದರೆ, ಭಾರತದ ಆರು ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದು ಪಾಕಿಸ್ತಾನ ಹೇಳಿರುವುದು ‘ಸಂಪೂರ್ಣ ತಪ್ಪು’ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ‘ಬ್ಲೂಮ್‌ಬರ್ಗ್ ಟಿವಿ’ಗೆ ನೀಡಿರುವ ಸಂದರ್ಶನದಲ್ಲಿ ಚೌಹಾಣ್ ಅವರು, ‘ಯುದ್ಧ ವಿಮಾನ ಕಳೆದುಕೊಂಡಿದ್ದಕ್ಕಿಂತ ಅವುಗಳನ್ನು ಏಕೆ ಕಳೆದುಕೊಂಡೆವು ಎಂಬುದನ್ನು ಪತ್ತೆ ಮಾಡುವುದು ಮುಖ್ಯವಾಗುತ್ತದೆ’ ಎಂದು ಹೇಳಿದ್ದಾರೆ.
ಲೋಪಗಳನ್ನು ಸರಿಪಡಿಸಿಕೊಂಡ ಭಾರತೀಯ ಮಿಲಿಟರಿಯು ತಿರುಗೇಟು ನೀಡಿತು ಎಂದೂ ತಿಳಿಸಿದ್ದಾರೆ.
ಎಷ್ಟು ವಿಮಾನಗಳನ್ನು ಕಳೆದುಕೊಳ್ಳಲಾಯಿತು ಎಂಬುದನ್ನು ನಿರ್ದಿಷ್ಟವಾಗಿ ತಿಳಿಸಲು ಚೌಹಾಣ್ ನಿರಾಕರಿಸಿದ್ದಾರೆ. ಆದರೆ, ಪಾಕಿಸ್ತಾನದ ಗಡಿಯ ಒಳಗೆ ಹೆಚ್ಚು ನಿಖರವಾದ ದಾಳಿಯನ್ನು ಭಾರತ ನಡೆಸಿದೆ ಎಂಬುದನ್ನು ಅವರು ತಿಳಿಸಿದ್ದಾರೆ.
ಪಾಕಿಸ್ತಾನದ ಜೊತೆಗಿನ ನಾಲ್ಕು ದಿನಗಳ ಸಂಘರ್ಷದಲ್ಲಿ ಭಾರತಕ್ಕೆ ಆದ ಹಾನಿಯ ಬಗ್ಗೆ ದೇಶದ ಮಿಲಿಟರಿಯ ಅತ್ಯಂತ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟವಾಗಿ ಹೇಳಿರುವುದು ಇದೇ ಮೊದಲು. ಚೌಹಾಣ್ ಅವರು ಸಿಂಗಪುರ ಭೇಟಿಯಲ್ಲಿದ್ದಾರೆ.
ಪಾಕಿಸ್ತಾನದ ಜೊತೆಗಿನ ಸಂಘರ್ಷದಲ್ಲಿ ಭಾರತ ಯುದ್ಧ ವಿಮಾನಗಳನ್ನು ಕಳೆದುಕೊಂಡಿತೇ ಎಂಬ ಪ್ರಶ್ನೆಯನ್ನು ಚೌಹಾಣ್ ಅವರ ಮುಂದಿರಿಸಲಾಗಿತ್ತು.
‘ಒಳ್ಳೆಯ ಸಂಗತಿ ಎಂದರೆ, ಕಾರ್ಯತಂತ್ರದಲ್ಲಿ ಆದ ಲೋಪವನ್ನು ನಾವು ಅರ್ಥ ಮಾಡಿಕೊಂಡೆವು. ಅದನ್ನು ಸರಿಪಡಿಸಿಕೊಂಡೆವು. ಎರಡು ದಿನಗಳ ನಂತರ ಪರಿಷ್ಕೃತ ಕಾರ್ಯತಂತ್ರವನ್ನು ಅನುಷ್ಠಾನಕ್ಕೆ ತಂದೆವು. ನಮ್ಮ ಯುದ್ಧ ವಿಮಾನಗಳನ್ನು ಹಾರಿಸಿ, ಗುರಿಗಳ ಮೇಲೆ ದೂರದಿಂದಲೇ ದಾಳಿ ನಡೆಸಿದೆವು’ ಎಂದು ಚೌಹಾಣ್ ಮಾಹಿತಿ ನೀಡಿದ್ದಾರೆ.
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಗೆ ಪ್ರತೀಕಾರವಾಗಿ ಭಾರತವು ‘ಸಿಂಧೂರ ಕಾರ್ಯಾಚರಣೆ’ಯನ್ನು ಮೇ 7ರಂದು ಆರಂಭಿಸಿತ್ತು. ಬ್ರಹ್ಮೋಸ್‌ನಂತಹ ದೂರಗಾಮಿ ಅಸ್ತ್ರಗಳನ್ನು ಕಾರ್ಯಾಚರಣೆಯಲ್ಲಿ ಬಳಕೆ ಮಾಡಿಕೊಂಡಿತ್ತು.
ಮೇ 10ರಂದು ತಾನು ನಡೆಸಿದ ತೀಕ್ಷ್ಣ ದಾಳಿಯ ಕಾರಣದಿಂದಾಗಿ ಕದನ ವಿರಾಮಕ್ಕೆ ಒಪ್ಪಿಕೊಳ್ಳುವಂತೆ ಪಾಕಿಸ್ತಾನವು ದುಂಬಾಲು ಬಿದ್ದಿತ್ತು ಎಂದು ಭಾರತವು ಈಗಾಗಲೇ ಹೇಳಿದೆ.
‘ದಿ ಎಕನಾಮಿಸ್ಟ್’ ಪತ್ರಿಕೆಯ ರಕ್ಷಣಾ ವಿಷಯಗಳ ಸಂಪಾದಕರಲ್ಲಿ ಒಬ್ಬರಾದ ಶಶಾಂಕ್ ಜೋಷಿ ಅವರು, ‘ಸಂಘರ್ಷದ ಮೊದಲ ರಾತ್ರಿಯಂದು ಭಾರತವು ಯುದ್ಧ ವಿಮಾನಗಳನ್ನು ಕಳೆದುಕೊಂಡಿರಬಹುದು. ಸೂಕ್ತವಾದ ಶಸ್ತ್ರಾಸ್ತ್ರ ಇಲ್ಲದೆ ಹೀಗಾಗಿರಬಹುದು’ ಎಂದು ಹೇಳಿದ್ದಾರೆ.
ಪಾಶ್ಚಿಮಾತ್ಯ ದೇಶಗಳ ಅಧಿಕಾರಿಗಳ ಅಂದಾಜು ಆಧರಿಸಿ ಈ ಮಾತು ಆಡಿರುವುದಾಗಿ ಜೋಷಿ ತಿಳಿಸಿದ್ದಾರೆ.
ಯುದ್ಧ ವಿಮಾನ ಕಳೆದುಕೊಂಡಿದ್ದಕ್ಕಿಂತ ಅವುಗಳನ್ನು ಏಕೆ ಕಳೆದು ಕೊಂಡೆವು ಎಂಬುದು ಮುಖ್ಯ. ಕಾರ್ಯತಂತ್ರದಲ್ಲಿ ಆದ ಲೋಪ ಸರಿಪಡಿಸಿಕೊಂಡು ತಿರುಗೇಟು ನೀಡಿದೆವುಅನಿಲ್ ಚೌಹಾಣ್, ಸಿಡಿಎಸ್
ನವದೆಹಲಿ: ‘ಸಿಂಧೂರ ಕಾರ್ಯಾಚರಣೆ’ ವೇಳೆ ಭಾರತದ ಮಿಲಿಟರಿಗೆ ಆಗಿರುವ ನಷ್ಟದ ಬಗ್ಗೆ ಸ್ಪಷ್ಟ ಮಾಹಿತಿ ಒದಗಿಸುವಂತೆ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ಒತ್ತಾಯಿಸಿದೆ. ಕಾರ್ಗಿಲ್ ಯುದ್ಧದ ನಂತರದಲ್ಲಿ ರಚಿಸಲಾಗಿದ್ದ ‘ಕಾರ್ಗಿಲ್ ಪರಿಶೀಲನಾ ಸಮಿತಿ’ಯ ಮಾದರಿಯಲ್ಲಿಯೇ ಸಮಿತಿಯೊಂದನ್ನು ರಚಿಸಲಾಗುತ್ತದೆಯೇ ಎಂದು ಕೂಡ ಕಾಂಗ್ರೆಸ್ ಪ್ರಶ್ನಿಸಿದೆ.
ನರೇಂದ್ರ ಮೋದಿ ನೇತೃತ್ವದ ಸರ್ಕಾರವು ‘ಪಾರದರ್ಶಕವಾಗಿ’ ನಡೆದುಕೊಂಡಿಲ್ಲ ಎಂಬುದನ್ನು ಇಡೀ ದೇಶ ಈಗ ಅರ್ಥ ಮಾಡಿಕೊಂಡಿದೆ. ಕಾರ್ಯಾಚರಣೆ ಸಂದರ್ಭದಲ್ಲಿ ಭಾರತವು ವಿಮಾನಗಳನ್ನು ಕಳೆದುಕೊಂಡಿರುವ ಕಾರಣಕ್ಕೆ ಮಿಲಿಟರಿ ತಂತ್ರಜ್ಞಾನದ ಪುನರ್ ಪರಿಶೀಲನೆ ಆಗಬೇಕಿದೆ ಎಂದು ವಿರೋಧ ಪಕ್ಷವು ಹೇಳಿದೆ. ಕಾರ್ಗಿಲ್ ಯುದ್ಧ ಕೊನೆಗೊಂಡ ಮೂರೇ ದಿನಗಳ ನಂತರ ಸಮಿತಿಯನ್ನು ರಚಿಸಲಾಗಿತ್ತು. ಅದು ಸಿದ್ಧಪಡಿಸಿದ ವರದಿಯನ್ನು ಅಗತ್ಯ ಪರಿಷ್ಕರಣೆಗಳೊಂದಿಗೆ 2000ನೇ ಇಸವಿಯ ಫೆಬ್ರುವರಿಯಲ್ಲಿ ಸಂಸತ್ತಿನಲ್ಲಿ ಮಂಡಿಸಲಾಯಿತು. ಈಗ ಸಿಡಿಎಸ್ ಅನಿಲ್ ಚೌಹಾಣ್ ಅವರು ಕೆಲವು ವಿಚಾರಗಳನ್ನು ಹೇಳಿರುವ ಹಿನ್ನೆಲೆಯಲ್ಲಿ ಮೋದಿ ನೇತೃತ್ವದ ಸರ್ಕಾರವು ಅದೇ ಬಗೆಯಲ್ಲಿ ಕ್ರಮ ತೆಗೆದುಕೊಳ್ಳುವುದೇ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ತೆಲಂಗಾಣ ಸಚಿವ ಎನ್. ಉತ್ತಮ್ ಕುಮಾರ್ ರೆಡ್ಡಿ ಅವರು ‘ನಡೆದಿದ್ದು ಏನು ಎಂಬ ವಿಚಾರದಲ್ಲಿ ಮೋದಿ ನೇತೃತ್ವದ ಸರ್ಕಾರವು ಹೆಚ್ಚು ಪಾರದರ್ಶಕವಾಗಿ ಇರಬೇಕು’ ಎಂದು ಒತ್ತಾಯಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉತ್ತರದಾಯಿತ್ವ ಇರಬೇಕಿರುವುದು ಸಹಜ ಇದಕ್ಕೂ ದೇಶಭಕ್ತಿಗೂ ಸಂಬಂಧ ಇಲ್ಲ. ಪ್ರಶ್ನೆಗಳನ್ನು ಕೇಳಿದ್ದಕ್ಕೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಲಾಯಿತು ಎಂದು ರೆಡ್ಡಿ ಹೇಳಿದ್ದಾರೆ. ‘ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂಬುದನ್ನು ಅಲ್ಲಗಳೆಯುವುದನ್ನು ಸರ್ಕಾರವು ನಿಲ್ಲಿಸಬೇಕು’ ಎಂದು ರೆಡ್ಡಿ ಹೇಳಿದ್ದಾರೆ. ರೆಡ್ಡಿ ಅವರು ಯುದ್ಧ ವಿಮಾನ ಪೈಲಟ್ ಆಗಿ ಕರ್ತವ್ಯ ನಿರ್ವಹಿಸಿದ್ದರು.
ನವದೆಹಲಿ (ಪಿಟಿಐ): ಭಾರತ–ಪಾಕಿಸ್ತಾನ ಸಂಘರ್ಷದ ವಿಚಾರದಲ್ಲಿ ಕೇಂದ್ರ ಸರ್ಕಾರವು ದೇಶಕ್ಕೆ ತಪ್ಪು ಮಾಹಿತಿ ನೀಡಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಭಾರತದ ರಕ್ಷಣಾ ಸನ್ನದ್ಧತೆಯ ಬಗ್ಗೆ ಸ್ವತಂತ್ರವಾದ ತಜ್ಞರ ಸಮಿತಿಯಿಂದ ಸಮಗ್ರ ಪರಿಶೀಲನೆ ಆಗಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತಿದೆ. ‘ಕಾರ್ಗಿಲ್ ಪುನರ್‌ಪರಿಶೀಲನಾ ಸಮಿತಿ’ಯ ಮಾದರಿಯಲ್ಲೇ ಈ ಕೆಲಸ ಆಗಬೇಕು ಎಂದು ಖರ್ಗೆ ಒತ್ತಾಯಿಸಿದ್ದಾರೆ.
‘ರಕ್ಷಣಾ ಪಡೆಗಳ ಮುಖ್ಯಸ್ಥರು (ಸಿಡಿಎಸ್) ಸಿಂಗಪುರದಲ್ಲಿ ಸಂದರ್ಶನ
ವೊಂದರಲ್ಲಿ ಆಡಿರುವ ಮಾತುಗಳ ಹಿನ್ನೆಲೆಯಲ್ಲಿ, ಬಹಳ ಪ್ರಮುಖವಾದ ಕೆಲವು ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಸಂಸತ್ತಿನ ವಿಶೇಷ ಅಧಿವೇಶನ
ವೊಂದನ್ನು ತಕ್ಷಣವೇ ಕರೆದರೆ ಇದು ಸಾಧ್ಯವಾಗುತ್ತದೆ’ ಎಂದು ಖರ್ಗೆ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.