ADVERTISEMENT

ಜಾಕೀರ್ ಹುಸೇನ್ ನಿಧನ: ರಾಜಕೀಯ ನಾಯಕರು, ಚಿತ್ರರಂಗದ ಗಣ್ಯರಿಂದ ಸಂತಾಪ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2024, 6:02 IST
Last Updated 16 ಡಿಸೆಂಬರ್ 2024, 6:02 IST
<div class="paragraphs"><p>ಜಾಕೀರ್ ಹುಸೇನ್ </p></div>

ಜಾಕೀರ್ ಹುಸೇನ್

   

ಪಿಟಿಐ ಚಿತ್ರ

ನವದೆಹಲಿ: ತಬಲಾ ಮಾಂತ್ರಿಕ ಜಾಕೀರ್ ಹುಸೇನ್ (73) ಅವರು ಇಂದು (ಸೋಮವಾರ) ರಕ್ತದ ಒತ್ತಡ ಮತ್ತು ಹೃದಯ ಸಂಬಂಧಿ ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ.

ADVERTISEMENT

ಜಾಕೀರ್ ಹುಸೇನ್ ಅವರ ನಿಧನಕ್ಕೆ ರಾಜಕೀಯ ನಾಯಕರು, ಚಿತ್ರರಂಗದ ಗಣ್ಯರು ಸೇರಿದಂತೆ ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ ಸಂತಾಪ ಸೂಚಿಸಿದ್ದಾರೆ.

‘ತಬಲಾ ಮಾಂತ್ರಿಕ ಉಸ್ತಾದ್ ಜಾಕೀರ್ ಹುಸೇನ್ ಅವರ ನಿಧನದಿಂದ ಭಾರತ ಮತ್ತು ವಿಶ್ವದ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರಾದ ಜಾಕೀರ್ ಹುಸೇನ್ ಅವರು ತಾಳವಾದ್ಯ, ಅಸಾಧಾರಣ ಪ್ರತಿಭೆಯೊಂದಿಗೆ ತಮ್ಮ ತಂದೆಯ ಪರಂಪರೆಯನ್ನು ವೈಭವಯುತವಾಗಿ ಮುನ್ನಡೆಸಿದ್ದಾರೆ. ಅವರ ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಗೌರವಗಳು ಇದಕ್ಕೆ ಸಾಕ್ಷಿಯಾಗಿದೆ. ಅವರ ಕುಟುಂಬ, ಸ್ನೇಹಿತರು ಮತ್ತು ಪ್ರಪಂಚದಾದ್ಯಂತದ ಅಭಿಮಾನಿಗಳಿಗೆ ನಮ್ಮ ಆಳವಾದ ಸಂತಾಪಗಳು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

'ವಿಶ್ವವಿಖ್ಯಾತ ತಬಲಾ ವಾದಕ ಜಾಕೀರ್ ಹುಸೇನ್ ಅವರ ನಿಧನದ ಸುದ್ದಿ ತಿಳಿದು ದುಃಖವಾಯಿತು. ವರ್ಷಗಳ ಕಾಲ ತಬಲಾ ವಾದನದ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುತ್ತಿದ್ದ ನೈಜ ಕಲಾಸಾಧಕನ ನಿಧನದಿಂದ ಸಂಗೀತಲೋಕ ಬಡವಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬವರ್ಗ ಮತ್ತು ಅಭಿಮಾನಿಗಳಿಗೆ ಈ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲೆಂದು ಪ್ರಾರ್ಥಿಸುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಲೆಜೆಂಡರಿ ತಬಲಾ ಮಾಂತ್ರಿಕ ಉಸ್ತಾದ್ ಜಾಕೀರ್ ಹುಸೇನ್ ಅವರ ನಿಧನ ನಿಜಕ್ಕೂ ದುಃಖ ತಂದಿದೆ. ಅಗಾಧ ಪ್ರತಿಭೆ ಮೂಲಕ ಹುಸೇನ್ ವಿಶ್ವದಾದ್ಯಂತ ಮನ್ನಣೆ ಗಳಿಸಿದ್ದರು. ಹಾಗೆಯೇ ಅವರು ಸಾರ್ವಕಾಲಿಕ ಶ್ರೇಷ್ಠ ಸಂಗೀತಗಾರರಲ್ಲಿ ಒಬ್ಬರಾಗಿದ್ದರು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಉಸ್ತಾದ್ ಜಾಕೀರ್ ಹುಸೇನ್ ಅವರು ಭಾರತೀಯ ಸಂಗೀತವನ್ನು ಜಗತ್ತಿನಾದ್ಯಂತ ಜನಪ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಭಾರತದ ಶ್ರೀಮಂತ ಸಂಗೀತ ಪರಂಪರೆಯ ದಾರಿದೀಪವಾಗಿ ಸೇವೆ ಸಲ್ಲಿಸಿದ್ದಾರೆ. ಶಾಸ್ತ್ರೀಯ ಸಂಪ್ರದಾಯಗಳ ನಿಜವಾದ ಪಾಲಕರಾಗಿದ್ದು, ಕಲೆಗಳಿಗೆ ಅವರು ನೀಡಿರುವ ಕೊಡುಗೆ ಅಪ್ರತಿಮವಾಗಿದೆ. ಅವರ ಅಗಲುವಿಕೆ ಸಂಸ್ಕೃತಿ ಮತ್ತು ಮಾನವೀಯತೆಗೆ ಅಪಾರ ನಷ್ಟವಾಗಿದೆ. ಅವರ ಪ್ರೀತಿಪಾತ್ರರಿಗೆ ಹೃತ್ಪೂರ್ವಕ ಸಂತಾಪಗಳು’ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

ತಬಲಾ ಮಾಂತ್ರಿಕ ಉಸ್ತಾದ್ ಜಾಕೀರ್ ಹುಸೇನ್ ಅವರನ್ನು ಕಳೆದುಕೊಂಡು ಸಂಗೀತ ಕ್ಷೇತ್ರ ಬಡವಾಗಿದೆ. ದಂತಕಥೆಗೆ ನನ್ನ ಶ್ರದ್ಧಾಂಜಲಿ. ಹುಸೇನ್ ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಹೃತ್ಪೂರ್ವಕ ಸಂತಾಪಗಳು ಎಂದು ಶಿವಸೇನೆ (ಉದ್ಧವ್ ಠಾಕ್ರೆ ಬಣ) ರಾಜ್ಯಸಭೆ ಸದಸ್ಯೆ ಪ್ರಿಯಾಂಕಾ ಚತುರ್ವೇದಿ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಉದ್ಯಮಿ ಆನಂದ್‌ ಮಹೀಂದ್ರಾ ಅವರು ಜಾಕೀರ್ ಹುಸೇನ್ ಅವರ ಸೇವೆಯನ್ನು ಸ್ಮರಿಸಿದ್ದಾರೆ.

‘ಇದು ಬಹಳ ದುಃಖದ ದಿನ’ ಎಂದು ಬಾಲಿವುಡ್‌ ನಟ ಅಮಿತಾಭ್ ಬಚ್ಚನ್ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಜಾಕೀರ್ ಭಾಯ್ ಅವರು ಬೇಗನೆ ಹೊರಟು ಹೋಗಿದ್ದಾರೆ. ಆದರೂ ಅವರು ನಮಗೆ ನೀಡಿದ ಸಮಯ ಮತ್ತು ಅವರ ಕಲಾ ಸೇವೆಗೆ ಕೃತಜ್ಞರಾಗಿರುತ್ತೇವೆ. ವಿದಾಯ ಮತ್ತು ಧನ್ಯವಾದಗಳು’ ಎಂದು ಬಹುಭಾಷಾ ನಟ ಕಮಲ್ ಹಾಸನ್ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಜಾಕೀರ್ ಹುಸೇನ್ ಅವರ ನಿಧನದಿಂದ ಭಾರತ ಮತ್ತು ಜಾಗತಿಕ ಸಂಗೀತ ಕ್ಷೇತ್ರಕ್ಕೆ ಭರಿಸಲಾಗದ ನಷ್ಟವಾಗಿದೆ. ಜಾಕೀರ್ ಸರ್, ನಿಮ್ಮ ಸಂಗೀತವು ಒಂದು ಕೊಡುಗೆಯಾಗಿದ್ದು, ಇದು ಮುಂದಿನ ಪೀಳಿಗೆಗೆ ಸ್ಫೂರ್ತಿಯ ನಿಧಿಯಾಗಿದೆ. ನಿಮ್ಮ ಪರಂಪರೆ ಜೀವಂತವಾಗಿರುತ್ತದೆ. ಜಾಕೀರ್ ಹುಸೇನ್ ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ಸಂತಾಪಗಳು’ ಎಂದು ಬಾಲಿವುಡ್‌ ನಟ ರಿತೇಶ್‌ ದೇಶಮುಖ್‌ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.