ADVERTISEMENT

ಅಭಿವೃದ್ಧಿ ಯೋಜನೆಗಳಿಗೆ ನೀಡಿದ ನೆರವನ್ನು ನೇಪಾಳ ಮರೆಯದಿರಲಿ: ಭಾರತ

​ಪ್ರಜಾವಾಣಿ ವಾರ್ತೆ
Published 12 ಜೂನ್ 2020, 6:33 IST
Last Updated 12 ಜೂನ್ 2020, 6:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೋವಿಡ್‌–19 ಎದುರಿಸಲು ಔಷಧಗಳ ನೆರವು ಸೇರಿ ಭಾರತವು ಮಾನವೀಯ ನೆಲೆಯಿಂದ ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಪೂರಕವಾಗಿ ನೀಡಿದ ನೆರವುಗಳನ್ನು ನೇಪಾಳ ಸರ್ಕಾರ ಮರೆಯಬಾರದು ಎಂದು ಭಾರತ ಗುರುವಾರ ಪ್ರತಿಪಾದಿಸಿದೆ.

ನೇಪಾಳದ ಪ್ರಧಾನಿ ಕೆ.ಪಿ.ಶರ್ಮಾ ಒಲಿ, ‘ನೇಪಾಳದ ಗಡಿಯನ್ನು ಭಾರತ ಆಕ್ರಮಿಸುತ್ತಿದೆ’ ಎಂದು ಟೀಕಿಸಿದ್ದ ಹಿಂದೆಯೇ ಭಾರತ ಈ ಮಾತು ನೆನಪಿಸಿದೆ. ಅಲ್ಲದೆ, ನೇಪಾಳದ ಜೊತೆಗೆ ಭಾರತವು ನಾಗರಿಕ ಮತ್ತು ಸಾಂಸ್ಕೃತಿಕ ಬಾಂಧವ್ಯ ಹೊಂದಿದೆ ಎಂಬುದನ್ನು ಮರೆಯಬಾರದು ಎಂದಿದೆ.

‘ಉಭಯ ದೇಶಗಳ ನಡುವಿನ ವಿವಿಧ ದ್ವಿಪಕ್ಷೀಯ ಪಾಲುದಾರಿಕೆ ನಮ್ಮ ನಡುವಿನ ಬಾಂಧವ್ಯವನ್ನು ಪುಷ್ಟಿಕರಿಸುತ್ತದೆ. ಅಲ್ಲದೆ, ಸಂಪರ್ಕ ಯೋಜನೆಗೂ ನೆರವು ನೀಡುವ ಮೂಲಕ ಭಾರತ ಅಭಿವೃದ್ಧಿಗೂ ನೆರವಾಗುತ್ತಿದೆ’ ಎಂದು ವಿದೇಶಾಂಗ ಸಚಿವಾಲಯ ವಕ್ತಾರ ಅನುರಾಗ್ ಶ್ರೀವಾತ್ಸವ ಹೇಳಿದರು.

ADVERTISEMENT

ಒಲಿ ಅವರು, ‘ಕಾಲಾಪಾನಿ, ಲಿಂಪುಲೇಖ್, ಲಿಂಪಿಯಾದುರ ಅನ್ನು ಆಕ್ರಮಿಸುವ ದೃಷ್ಟಿಯಿಂದ ಭಾರತವು ಕಾಳಿ ದೇಗುಲ ನಿರ್ಮಿಸಿ, ಕೃತಕ ಕಾಳಿ ನದಿಯನ್ನು ರೂಪಿಸಿದೆ. ಅಲ್ಲದೆ, ಸೇನೆಯನ್ನು ನಿಯೋಜಿಸಿದೆ’ ಎಂದು ಬುಧವಾರ ದೂರಿದ್ದರು. ಈ ಭಾಗಗಳು ನೇಪಾಳದ ಭಾಗ ಎಂದು ಪ್ರತಿಪಾದಿಸಿದ್ದರು.

ಭಾರತದ ಜೊತೆಗೆ ಗಡಿ ವಿವಾದ ಕೆಣಕುವ ಪ್ರಮಾದ ಎಸಗಬಾರದು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಈಚೆಗೆ ನೀಡಿದ್ದ ಹೇಳಿಕೆಯನ್ನು ನೇಪಾಳ ಪ್ರಧಾನಿ ಖಂಡಿಸಿದ್ದರು.

ನೇಪಾಳ ಸರ್ಕಾರ ಮೇ 20ರಂದು ನೂತನ ನಕ್ಷೆಯನ್ನು ಪ್ರಕಟಿಸಿದ್ದು, ಲಿಂಪುಲೇಖ್ ಪಾಸ್‌, ಕಾಲಾಪಾನಿ ಮತ್ತು ಲಿಂಪಿಯಾದುರ ನೇಪಾಳದ ಭಾಗ ಎಂದು ತೋರಿಸಿತ್ತು. ಈ ಸ್ಥಳಗಳು ಭಾರತದ ಭೌಗೋಳಿಕ ಭಾಗ ಎಂಬುದು ಭಾರತ ಸರ್ಕಾರದ ಪ್ರತಿಪಾದನೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.