
ನವದೆಹಲಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತರಿದ್ದರು
ಪಿಟಿಐ ಚಿತ್ರ
ನವದೆಹಲಿ: ‘ಉಕ್ರೇನ್ ಹಾಗೂ ರಷ್ಯಾ ನಡುವಿನ ಸಂಘರ್ಷ ವಿಚಾರದಲ್ಲಿ ಭಾರತ ತಟಸ್ಥ ನಿಲುವು ಹೊಂದಿಲ್ಲ. ಈ ಸಂಘರ್ಷ ಕೊನೆಗಾಣಿಸಿ, ಶಾಂತಿ ಸ್ಥಾಪಿಸುವುದರ ಪರ ಇದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
‘ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧವನ್ನು ನಿಲ್ಲಿಸುವ ಸಂಬಂಧ ನಡೆಯುತ್ತಿರುವ ಇತ್ತೀಚಿನ ಪ್ರಯತ್ನಗಳನ್ನು ಭಾರತ ಬೆಂಬಲಿಸುತ್ತದೆ. ಉಭಯ ದೇಶಗಳ ನಡುವಿನ ಸಂಘರ್ಷಕ್ಕೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಡೆಯುವ ಎಲ್ಲ ಪ್ರಯತ್ನಗಳಿಗೆ ಭಾರತ ಸಂಪೂರ್ಣ ಬೆಂಬಲ ನೀಡಲಿದೆ’ ಎಂದು ಅವರು ಪುಟಿನ್ ಅವರಿಗೆ ಹೇಳಿದರು.
ಭಾರತ ಮತ್ತು ರಷ್ಯಾ ನಡುವಿನ 23ನೇ ಶೃಂಗಸಭೆಯಲ್ಲಿ ಮಾತನಾಡಿದ ಮೋದಿ, ಈ ವಿಚಾರದಲ್ಲಿ ಭಾರತದ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದರು.
‘ಉಕ್ರೇನ್ ಜೊತೆಗೆ ಸಂಘರ್ಷ ಆರಂಭಗೊಂಡ ದಿನದಿಂದಲೂ ನಾವು ಚರ್ಚೆ ನಡೆಸುತ್ತಿದ್ದೇವೆ. ಆಪ್ತ ಸ್ನೇಹಿತನಾಗಿ ನೀವು ಅಲ್ಲಿನ ಪರಿಸ್ಥಿತಿ ಕುರಿತು ನಿಯಮಿತವಾಗಿ ಮಾಹಿತಿ ನೀಡುತ್ತಿರುವಿರಿ. ನಂಬಿಕೆಯೇ ನಮ್ಮ ದೊಡ್ಡ ಶಕ್ತಿಯಾಗಿದೆ’ ಎಂದು ಪುಟಿನ್ ಅವರನ್ನು ಉದ್ದೇಶಿಸಿ ಮೋದಿ ಹೇಳಿದರು.
ಮೋದಿ ಅವರ ಮಾತಿಗೆ ಪ್ರತಿಕ್ರಿಯಿಸಿದ ಪುಟಿನ್,‘ಉಕ್ರೇನ್ ಜೊತೆಗಿನ ಸಂಘರ್ಷಕ್ಕೆ ಶಾಂತಿಯುತ ಪರಿಹಾರ ಕಂಡುಕೊಳ್ಳಲು ರಷ್ಯಾ ಯತ್ನಿಸುತ್ತಿದೆ’ ಎಂದರು.
ಇಂಧನ ಸುರಕ್ಷತೆ ವಿಚಾರವು ಭಾರತ ಮತ್ತು ರಷ್ಯಾ ಸಂಬಂಧಕ್ಕೆ ಆಧಾರಸ್ತಂಭವಾಗಿದೆ. ಈ ಕ್ಷೇತ್ರದಲ್ಲಿನ ಸಹಕಾರವನ್ನು ನಾವು ಮುಂದುವರಿಸುತ್ತೇವೆ
ಭಯೋತ್ಪಾದನೆ ವಿರುದ್ಧ ಎರಡೂ ದೇಶಗಳು ಒಟ್ಟಾಗಿ ಹೋರಾಟ ನಡೆಸುತ್ತಿವೆ. ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಇರಬಹುದು ಇಲ್ಲವೇ ರಷ್ಯಾದಲ್ಲಿ ಕ್ರಾಕಸ್ ಸಿಟಿ ಹಾಲ್‌ನಲ್ಲಿ ನಡೆದ ದಾಳಿ ಇರಬಹುದು ಎಲ್ಲವೂ ಭಯೋತ್ಪಾದನೆಯೇ ದಾಳಿಗಳಿಗೆ ಮೂಲ
ಅಂತರರಾಷ್ಟ್ರೀಯ ಉತ್ತರ–ದಕ್ಷಿಣ ಸಾರಿಗೆ ಕಾರಿಡಾರ್(ಐಎನ್‌ಎಸ್‌ಟಿಸಿ), ಉತ್ತರ ಸಮುದ್ರ ಮಾರ್ಗ ಹಾಗೂ ಚೆನ್ನೈ–ವ್ಲಾಡಿವೊಸ್ಟಾಕ್ ಕಾರಿಡಾರ್ ವಿಚಾರದಲ್ಲಿ ರಷ್ಯಾದಿಂದ ಮತ್ತಷ್ಟು ಸಕಾರಾತ್ಮಕ ಪ್ರತಿಕ್ರಿಯೆ ನಿರೀಕ್ಷಿಸಲಾಗುತ್ತದೆ
ಧ್ರುವ ಪ್ರದೇಶಗಳ ಕಡಲಯಾನಕ್ಕೆ ಭಾರತೀಯ ನಾವಿಕರನ್ನು ಸಜ್ಜುಗೊಳಿಸುವ ಉದ್ದೇಶವಿದ್ದು, ನಾವಿಕರಿಗೆ ತರಬೇತಿ ನೀಡುವುದಕ್ಕೆ ರಷ್ಯಾದೊಂದಿಗೆ ಭಾರತ ಕೈಜೋಡಿಸಲಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.