ADVERTISEMENT

ಭಾರತ–ಅಮೆರಿಕ: ಭಿನ್ನ ಸ್ವರ ತಾರಕ!

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 23:47 IST
Last Updated 9 ಜನವರಿ 2026, 23:47 IST
ಡೊನಾಲ್ಡ್‌ ಟ್ರಂಪ್‌– ನರೇಂದ್ರ ಮೋದಿ
ಡೊನಾಲ್ಡ್‌ ಟ್ರಂಪ್‌– ನರೇಂದ್ರ ಮೋದಿ   

ಭಾರತವು ರಷ್ಯಾದಿಂದ ಕಚ್ಚಾ ತೈಲ ಖರೀದಿಸಲು ಆರಂಭಿಸಿದ ಬಳಿಕ ಅಮೆರಿಕದ ಜೊತೆಗಿನ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿದೆ. ಅಮೆರಿಕದ ಅಧ್ಯಕ್ಷ ಟ್ರಂಪ್‌ ಅವರು ಭಾರತದಿಂದ ರಫ್ತಾಗುವ ಸರಕುಗಳ ಮೇಲೆ ಶೇ 50ರಷ್ಟು ಸುಂಕ ಹೇರಿದ್ದಾರೆ. ಶೇ 500ರಷ್ಟು ಸುಂಕ ಹೇರುವ ಮಸೂದೆಗೂ ಒಪ್ಪಿಗೆ ನೀಡಿದ್ದಾರೆ. ಇದರಿಂದಾಗಿ, ಹಲವು ಸುತ್ತಿನ ಮಾತುಕತೆ ನಡೆದರೂ ವ್ಯಾಪಾರ ಒಪ್ಪಂದ ಅಂತಿಮಗೊಂಡಿಲ್ಲ. ಈಗ ಈ ಕುರಿತು ಅಮೆರಿಕ ಮತ್ತು ಭಾರತ ಭಿನ್ನ ಸ್ವರದಲ್ಲಿ ಹೇಳಿಕೆ ನೀಡಿವೆ.

***

‘ಕರೆ ಮಾಡದ ಮೋದಿ; ಆಗದ ಒಪ್ಪಂದ’

ADVERTISEMENT

ನವದೆಹಲಿ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ  ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡದ ಕಾರಣಕ್ಕೆ ಎರಡೂ ದೇಶಗಳ ನಡುವಣ ವ್ಯಾಪಾರ ಒಪ್ಪಂದ ವಿಳಂಬವಾಗಿದೆ ಎಂದು ಅಮೆರಿಕದ  ವಾಣಿಜ್ಯ ಕಾರ್ಯದರ್ಶಿ ಹವಾರ್ಡ್‌ ಲಟ್ನಿಕ್‌ ಶುಕ್ರವಾರ ಹೇಳಿದ್ದಾರೆ. 

ಕಳೆದ ವರ್ಷ ಹಲವು ಸುತ್ತು ಮಾತುಕತೆಗಳು ನಡೆದರೂ ಒಪ್ಪಂದ ಅಂತಿಮಗೊಳಿಸಲು ಸಾಧ್ಯವಾಗಲಿಲ್ಲ. ಜೊತೆಗೆ, ಭಾರತದಿಂದ ರಫ್ತಾಗುವ ಸರಕುಗಳ ಮೇಲೆ ಶೇ 50ರಷ್ಟು ಸುಂಕವನ್ನು ಟ್ರಂಪ್‌ ಹೇರಿದರು. 

‘ಎಲ್ಲವೂ ತೀರ್ಮಾನವಾಗಿತ್ತು. ಮೋದಿ ಅವರು ಅಧ್ಯಕ್ಷರಿಗೆ ಕರೆ ಮಾಡಬೇಕಿತ್ತು. ಆದರೆ ಅವರು ಅದನ್ನು ಮಾಡಲಿಲ್ಲ’ ಎಂದು ಲಟ್ನಿಕ್‌ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. 

ರಷ್ಯಾದಿಂದ ಕಚ್ಚಾ ತೈಲ ಖರೀದಿಯನ್ನು ಕಡಿತಗೊಳಿಸದೇ ಇದ್ದರೆ ಇನ್ನಷ್ಟು ಹೆಚ್ಚು ಸುಂಕ ಹೇರಲಾಗುವುದು ಎಂದು ಟ್ರಂಪ್‌ ಈ ವಾರ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಒಪ್ಪಂದವನ್ನು ಆದಷ್ಟು ಬೇಗ ಅಂತಿಮಗೊಳಿಸುವ ಒತ್ತಡ ಸೃಷ್ಟಿಯಾಗಿದೆ. ಇದರಿಂದಾಗಿ  ಡಾಲರ್‌ ಎದುರು ರೂಪಾಯಿ ಮೌಲ್ಯ ದಾಖಲೆ ಮಟ್ಟಕ್ಕೆ ಕುಸಿದಿದೆ. ಬಹು ಕಾಲದಿಂದ ಅಪೂರ್ಣವಾಗಿಯೇ ಉಳಿದಿರುವ ವ್ಯಾಪಾರ ಒಪ್ಪಂದವು ಪೂರ್ಣಗೊಳ್ಳಲು ಹೂಡಿಕೆದಾರರು ಕಾಯುತ್ತಿದ್ದಾರೆ.

ಬ್ರಿಟನ್‌ ಮತ್ತು ವಿಯೆಟ್ನಾಂಗೆ ನೀಡಿದಂತಹ ಸುಂಕದ ದರವನ್ನೇ ತನಗೂ ವಿಧಿಸುವಂತೆ ಭಾರತ ಒತ್ತಾಯಿಸುತ್ತಿದೆ. ಈ ಹಿಂದೆ ಈ  ವಿಚಾರದಲ್ಲಿ ಒಮ್ಮತಕ್ಕೂ ಬರಲಾಗಿತ್ತು. ಆದರೆ, ಈಗ ಅದರ ಅವಧಿ ಮುಗಿದಿದೆ ಎಂದು ಲಟ್ನಿಕ್‌ ಹೇಳಿದ್ದಾರೆ. 

ಒಪ್ಪಂದವು ಕಳೆದ ವರ್ಷ ಏರ್ಪಡುವ ಹಂತಕ್ಕೆ ಬಂದಿತ್ತು. ಆದರೆ, ಸಂವಹನ ಸಮಸ್ಯೆಯಿಂದಾಗಿ ಅದು ಮುರಿದುಬಿತ್ತು ಎಂದು  ಮಾಧ್ಯಮಗಳಲ್ಲಿ ವರದಿಯಾಗಿತ್ತು. 

ಬೇರೆ ದೇಶಗಳು ಒಪ್ಪಂದಗಳನ್ನು ಕಾರ್ಯಗತಗೊಳಿಸುತ್ತಿದ್ದವು. ಭಾರತ ಮಾತ್ರ ಸರತಿಯಲ್ಲಿ ಹಿಂದುಳಿಯಿತು. ವ್ಯಾಪಾರ ಒಪ್ಪಂದವೆಂಬುದು ಉಭಯ ರಾಷ್ಟ್ರಗಳಿಗೆ ಅನುಕೂಲಕರವಾಗಿ ಏರ್ಪಡುತ್ತದೆ
ಹವಾರ್ಡ್‌ ಲಟ್ನಿಕ್‌ ಅಮೆರಿಕದ ವಾಣಿಜ್ಯ ಕಾರ್ಯದರ್ಶಿ
ಹೊವಾರ್ಡ್‌ ಲುಟ್ನಿಕ್‌
ರಣ್‌ಧೀರ್‌ ಜೈಸ್ವಾಲ್‌
Quote - ಲಟ್ನಿಕ್‌ ಅವರು ಈಗ ನೀಡಿರುವ ಮಾಹಿತಿಯೇ ತಪ್ಪು. ನಾವು ಈಗಲೂ ಉಭಯ ರಾಷ್ಟ್ರಗಳಿಗೆ ಅನುಕೂಲಕರವಾಗುವ ವ್ಯಾಪಾರ ಒಪ್ಪಂದ ಮಾಡಲು ಆಸಕ್ತಿ ಹೊಂದಿದ್ದು ಶೀಘ್ರದಲ್ಲಿ ಮತುಕತೆ ಮುಗಿಸಲು ಎದುರುನೋಡುತ್ತಿದ್ದೇವೆ
ರಣಧೀರ್‌ ಜೈಸ್ವಾಲ್‌ ವಿದೇಶಾಂಗ ಸಚಿವಾಲಯದ ವಕ್ತಾರ
ಜೈರಾಮ್‌ ರಮೇಶ್‌

ತಪ್ಪು ಮಾಹಿತಿ– ಭಾರತ ತಿರುಗೇಟು

ಲಟ್ನಿಕ್‌ ಅವರ ಹೇಳಿಕೆಯು ‘ನಿಖರವಲ್ಲ’ ಎಂದು ಭಾರತ ಪ್ರತಿಕ್ರಿಯೆ ನೀಡಿದೆ. ಎರಡು ಪರಸ್ಪರ ಪೂರಕ ಅರ್ಥ ವ್ಯವಸ್ಥೆಗಳ ನಡುವೆ ‘ಪರಸ್ಪರ ಪ್ರಯೋಜನಕಾರಿ’ಯಾದ ವ್ಯಾಪಾರ ಒಪ್ಪಂದ ಏರ್ಪಡಲಿ ಎಂಬುದನ್ನು ಭಾರತವು ಎದುರು ನೋಡುತ್ತಿದೆ ಎಂದು ಹೇಳಲಾಗಿದೆ. ಮೋದಿ ಅವರು ಟ್ರಂಪ್‌ ಅವರ ಜೊತೆಗೆ ದೂರವಾಣಿ ಕರೆ ಮಾಡಿ ಮಾತನಾಡಿಲ್ಲ ಎಂಬುದೂ ಸರಿಯಲ್ಲ. 2025ರಲ್ಲಿ ಇಬ್ಬರು ನಾಯಕರು ಎಂಟು ಬಾರಿ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ ಎಂದು ಭಾರತ ಹೇಳಿದೆ.  ಭಾರತದಿಂದ ರಫ್ತಾಗುವ ಸರಕುಗಳ ಮೇಲೆ ಟ್ರಂಪ್‌ ಅವರು ಶೇ 50ರಷ್ಟು ಸುಂಕ ಹೇರಿದ ನಂತರ ಎರಡೂ ದೇಶಗಳ ನಡುವೆ ಮನಸ್ತಾಪ ಕಾಣಿಸಿಕೊಂಡಿದೆ. ಟ್ರಂಪ್‌ ಅವರನ್ನು ಮೋದಿ ಅವರು 2025ರ ಫೆಬ್ರುವರಿ 13ರಂದು ಶ್ವೇತಭವನದದಲ್ಲಿ ಭೇಟಿಯಾದ ಸಂದರ್ಭದಲ್ಲಿ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ನಿರ್ಧಾರಕ್ಕೆ ಬರಲಾಗಿತ್ತು.  ‘ಲಟ್ನಿಕ್‌ ಅವರ ಹೇಳಿಕೆಯನ್ನು ಗಮನಿಸಿದ್ದೇವೆ. ಕಳೆದ ಫೆ. 13ರ ಬಳಿಕ ಹಲವು ಸುತ್ತಿನ ಮಾತುಕತೆ ನಡೆದಿದೆ. ಹಲವು ಬಾರಿ ಒಪ್ಪಂದ ಪೂರ್ಣಗೊಳ್ಳುವ ಹಂತಕ್ಕೂ ಬರಲಾಗಿತ್ತು. ಈ ಮಾತುಕತೆಗಳ ಸ್ವರೂಪದ ಕುರಿತು ಬಂದಿರುವ ಹೇಳಿಕೆಯು ನಿಖರವಾಗಿಲ್ಲ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣದೀರ್‌ ಜೈಸ್ವಾಲ್‌ ಹೇಳಿದ್ದಾರೆ.  ಬ್ರಿಟನ್‌ ಜೊತೆಗೆ ವ್ಯಾಪಾರ ಒಪ್ಪಂದ ಮಾಡಿಕೊಂಡ ನಂತರ ಮುಂದಿನ ದೇಶ ಯಾವುದು ಎಂದು ಟ್ರಂಪ್‌ ಅವರನ್ನು ಕೇಳಲಾಗಿತ್ತು. ಅವರು ಹಲವು ದೇಶಗಳ ಹೆಸರು ಹೇಳಿದ್ದರು. ಒಂದೆರಡು ಬಾರಿ ಭಾರತದ ಹೆಸರನ್ನೂ ಬಹಿರಂಗವಾಗಿ ಹೇಳಿದ್ದಾರೆ ಎಂದು ಲಟ್ನಿಕ್‌ ನೆನಪಿಸಿಕೊಂಡಿದ್ದಾರೆ. 

ಆಲಿಂಗಿಸಿದರೂ ಸಿಗದ ಫಲ– ಕಾಂಗ್ರೆಸ್‌ ಟೀಕೆ

ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರ ಒಪ್ಪಂದದ ಕುರಿತು ಹವಾರ್ಡ್‌ ಲಟ್ನಿಕ್‌ ಹೇಳಿಕೆ  ನೀಡಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್‌ ಸಿನಿಮಾ ಸಂಭಾಷಣೆ ಶೈಲಿಯಲ್ಲಿ ಟೀಕಿಸಿದೆ.  ಲಟ್ನಿಕ್‌ ಅವರ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್‌ ಮಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ(ಸಂವಹನ ವಿಭಾಗ ಉಸ್ತುವಾರಿ) ಜೈರಾಮ್‌ ರಮೇಶ್‌ ‘ಆಲಿಂಗನ ಮಾಡಿದ್ರಿ.. ಏನಾಯ್ತು... ಏನಾಯ್ತು ನಿಮ್ಮ ಗೆಳೆತನದಿಂದ ಏನೂ ಆಗಿಲ್ಲ. ನಿಮಗೆ ಮೋಸ ಮಾಡಿಬಿಟ್ಟರು’ ಎಂದು ಮೋದಿ ಅವರನ್ನು ಉಲ್ಲೇಖಿಸಿ ಟಾಂಗ್‌ ನೀಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.