ನವದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಕುರಿತ ಮಧ್ಯಂತರ ಒಪ್ಪಂದ ಪ್ರಕ್ರಿಯೆಯು ಜೂನ್ 25ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಅಮೆರಿಕದ ಅಧಿಕಾರಿಗಳ ತಂಡವು ವ್ಯಾಪಾರ ಒಪ್ಪಂದ ಕುರಿತಂತೆ ಚರ್ಚಿಸಲು ಮುಂದಿನ ತಿಂಗಳು ಭಾರತಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಈಗಾಗಲೇ, ಒಪ್ಪಂದ ಕುರಿತ ಮಾತುಕತೆ ಪ್ರಗತಿಯಲ್ಲಿದೆ. ಹಾಗಾಗಿ, ಯಾವ ವಿಷಯಗಳ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂಬ ಹಾದಿಯೂ ಸುಗಮವಾಗಿದೆ ಎಂದು ಹೇಳಿವೆ.
ಕೇಂದ್ರ ವಾಣಿಜ್ಯ ಇಲಾಖೆಯ ವಿಶೇಷ ಕಾರ್ಯದರ್ಶಿ ರಾಜೇಶ್ ಅಗರವಾಲ್ ಅವರು ಭಾರತದ ಪರ ಮುಖ್ಯ ಸಮಾಲೋಚಕರಾಗಿದ್ದಾರೆ. ಕಳೆದ ವಾರ ವಾಷಿಂಗ್ಟನ್‌ಗೆ ಭೇಟಿ ನೀಡಿದ್ದ ವೇಳೆ ಪ್ರಸ್ತಾವಿತ ಒಪ್ಪಂದದ ಬಗ್ಗೆ ಅಲ್ಲಿನ ಅಧಿಕಾರಿಗಳ ಜೊತೆಗೆ ಚರ್ಚಿಸಿದ್ದಾರೆ.
ಅಲ್ಲದೆ, ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಕೂಡ ಕಳೆದ ವಾರ ಅಮೆರಿಕಕ್ಕೆ ಭೇಟಿ ನೀಡಿದ್ದರು. ಅಲ್ಲಿನ ವಾಣಿಜ್ಯ ಕಾರ್ಯದರ್ಶಿ ಜೊತೆಗೆ ಎರಡು ಬಾರಿ ಮಾತುಕತೆ ನಡೆಸಿದ್ದರು.
ಭಾರತದ ಮೇಲೆ ಅಮೆರಿಕವು ಶೇ 26ರಷ್ಟು ಪ್ರತಿ ಸುಂಕ ಹೇರಿದ್ದು, ಇದರ ಜಾರಿಗೆ ಜುಲೈ 9ರ ವರೆಗೆ ತಾತ್ಕಾಲಿಕ ವಿರಾಮ ನೀಡಿದೆ. ಈ ಗಡುವಿನೊಳಗೆ ಮಧ್ಯಂತರ ಒಪ್ಪಂದವನ್ನು ಅಂತಿಮಗೊಳಿಸುವುದು ಉಭಯ ರಾಷ್ಟ್ರಗಳ ಗುರಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.