ನವದೆಹಲಿ: ಅಮೆರಿಕ ಮತ್ತು ಭಾರತದ ಮಧ್ಯೆದ ವ್ಯಾಪಾರ ಒಪ್ಪಂದದ ಕುರಿತು ಮತ್ತೊಂದು ಸುತ್ತಿನ ಚರ್ಚೆ ನಡೆಸಲು ಭಾರತದ ವಾಣಿಜ್ಯ ಸಚಿವಾಲಯದ ತಂಡವು ಮುಂದಿನ ವಾರ ವಾಷಿಂಗ್ಟನ್‌ಗೆ ತೆರಳಲಿದೆ ಎನ್ನಲಾಗುತ್ತಿದೆ.
ಕೃಷಿ ಮತ್ತು ಆಟೊಮೊಬೈಲ್ ಕ್ಷೇತ್ರಗಳಿಗೆ ಸಂಬಂಧಿಸಿ ಎರಡು ದೇಶಗಳ ಮಧ್ಯೆ ಕೆಲವು ಭಿನ್ನಾಭಿಪ್ರಾಯ ಮೂಡಿವೆ. ಈ ಬಗ್ಗೆ ಚರ್ಚೆ ನಡೆಸಲು ತಂಡ ತೆರಳಲಿದೆ. ಜೂನ್ 26ರಿಂದ ಜುಲೈ 2ರ ಮಧ್ಯೆ ಒಂದು ಸುತ್ತಿನ ಮಾತುಕತೆ ನಡೆದಿತ್ತು.
ಕೃಷಿ ಮತ್ತು ಹೈನುಗಾರಿಕೆ ಉತ್ಪನ್ನಗಳ ಆಮದಿನ ಮೇಲೆ ಅಮೆರಿಕವು ವಿಧಿಸಲು ಇಚ್ಛಿಸಿರುವ ಸುಂಕದ ಪ್ರಮಾಣದ ವಿರುದ್ಧ ಭಾರತವು ಗಟ್ಟಿ ನಿಲುವು ತಳೆದಿದೆ. ಭಾರತವು ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡ ಯಾವ ದೇಶಗಳಿಗೂ ಹೈನುಗಾರಿಕೆ ಉತ್ಪನ್ನಗಳ ಮೇಲೆ ಇಲ್ಲಿಯವರೆಗೆ ಸುಂಕ ವಿನಾಯಿತಿ ನೀಡಿಲ್ಲ.
ಈ ವರ್ಷದ ಸೆಪ್ಟೆಂಬರ್–ಅಕ್ಟೋಬರ್ ಹೊತ್ತಿಗೆ ಅಮೆರಿಕದೊಂದಿಗಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮೊದಲ ಭಾಗವು ಸಿದ್ಧಗೊಳ್ಳಲಿದೆ. ಇದಕ್ಕೆ ಮೊದಲು ಮಧ್ಯಂತರ ಒಪ್ಪಂದ ಮಾಡಿಕೊಳ್ಳುವ ಯತ್ನವನ್ನು ಭಾರತ ನಡೆಸುತ್ತಿದೆ.
ಉಕ್ಕು ಮತ್ತು ಅಲ್ಯುಮೀನಿಯಂ ಮೇಲಿನ ಶೇ 50 ಮತ್ತು ಆಟೊಮೊಬೈಲ್ ಕ್ಷೇತ್ರದ ಮೇಲಿನ ಶೇ 25ರಷ್ಟು ಸುಂಕವನ್ನು ತೆರವು ಮಾಡಬೇಕು. ಇಲ್ಲವಾದಲ್ಲಿ, ವಿಶ್ವ ವ್ಯಾಪಾರ ಸಂಸ್ಥೆಯ ನಿಯಮಗಳ ಅನುಸಾರ ಪ್ರತಿಸುಂಕ ಹೇರುವ ಹಕ್ಕನ್ನು ಭಾರತ ಉಳಿಸಿಕೊಂಡಿದೆ
ಹೆಚ್ಚುವರಿ ಆಮದು ಸುಂಕ ವಿಧಿಸುವ ನಿರ್ಧಾರವನ್ನು (ಭಾರತಕ್ಕೆ ಶೇ 26ರಷ್ಟು) ಅಮೆರಿಕವು ಆಗಸ್ಟ್ 1ರವರೆಗೆ ವಿಸ್ತರಿಸಿದೆ. ಈ ಕಾರಣದಿಂದಲೂ ಭಾರತದ ತಂಡದ ಅಮೆರಿಕ ಭೇಟಿಯು ಮಹತ್ವ ಪಡೆದುಕೊಂಡಿದೆ. ಹೆಚ್ಚುವರಿ ಆಮದು ಸುಂಕ ವಿಧಿಸುವ ನಿರ್ಧಾರವನ್ನು ಹಿಂಪಡೆಯುವಂತೆ ಭಾರತವು ಮನವಿ ಮಾಡಿದೆ
ಭಾರತವು ಸದ್ಯ ಅಮೆರಿಕದೊಂದಿಗೆ 191 ಬಿಲಿಯನ್ ಡಾಲರ್‌ನಷ್ಟು (ಸುಮಾರು ₹16.36 ಲಕ್ಷ ಕೋಟಿ) ವ್ಯಾಪಾರ ನಡೆಸುತ್ತಿದೆ. 2030ರ ಹೊತ್ತಿಗೆ ಈ ಪ್ರಮಾಣವನ್ನು 500 ಬಿಲಿಯನ್ ಡಾಲರ್‌ಗೆ (ಸುಮಾರು ₹42.87 ಲಕ್ಷ ಕೋಟಿ) ಹೆಚ್ಚಿಸುವ ಗುರಿಯನ್ನು ಭಾರತ ಹೊಂದಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.