ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಸೇನೆಗಳ ಕಾರ್ಯಾಚರಣೆ ಮಹಾನಿರ್ದೇಶಕರು ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ನಿಯಂತ್ರಣ ರೇಖೆಯಲ್ಲಿ ನಡೆಸುತ್ತಿರುವ ಅಪ್ರಚೋದಿತ ಗುಂಡಿನ ದಾಳಿ ವಿಚಾರವಾಗಿ ಭಾರತದ ಮಿಲಿಟರಿ ಕಾರ್ಯಾಚರಣೆ ಮಹಾನಿರ್ದೇಶಕರು ಈ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.
ಪಾಕಿಸ್ತಾನದ ಸೇನೆಯು ನಿಯಂತ್ರಣ ರೇಖೆಯ ಉದ್ದಕ್ಕೂ ಶುಕ್ರವಾರ ರಾತ್ರಿಯಿಂದ ಗುಂಡಿನ ದಾಳಿ ನಡೆಸುತ್ತಿದೆ, ಇದು ಕದನ ವಿರಾಮ ಒಪ್ಪಂದದ ಉಲ್ಲಂಘನೆ ಎಂದು ಮೂಲಗಳು ಹೇಳಿವೆ. ಪಾಕಿಸ್ತಾನದ ದಾಳಿಗೆ ಭಾರತದ ಯೋಧರು ತಕ್ಕ ಪ್ರತ್ಯುತ್ತರ ನೀಡುತ್ತಿದ್ದಾರೆ.
ಕಾರ್ಯಾಚರಣೆ ಮಹಾನಿರ್ದೇಶಕರ ನಡುವೆ ಮಂಗಳವಾರ ಮಾತುಕತೆ ನಡೆದಿದೆ. ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತ್ಯುತ್ತರ ಹೇಗಿರಬೇಕು ಎಂಬ ಬಗ್ಗೆ ಕೇಂದ್ರ ಸರ್ಕಾರವು ಸಭೆಗಳನ್ನು ನಡೆಸುತ್ತಿರುವ ಹೊತ್ತಿನಲ್ಲೇ ಈ ಮಾತುಕತೆ ನಡೆದಿದೆ.
ಮಾತುಕತೆಯು ಎಂದಿನ ಪ್ರಕ್ರಿಯೆಯ ಒಂದು ಭಾಗ, ಇದು ಪ್ರತಿವಾರ ನಡೆಯುವ ಮಾತುಕತೆ ಎಂದು ಮೂಲಗಳು ಹೇಳಿವೆ. ಪಾಕಿಸ್ತಾನ ಮಿಲಿಟರಿಯು ಕದನ ವಿರಾಮ ಉಲ್ಲಂಘಿಸುತ್ತಿರುವುದನ್ನು ಭಾರತದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು ಪ್ರಮುಖವಾಗಿ ಪ್ರಸ್ತಾಪಿಸಿದರು ಎಂದು ಗೊತ್ತಾಗಿದೆ.
ಬಿಕ್ಕಟ್ಟು ಶಮನದ ಭಾಗವಾಗಿ ಭಾರತ ಮತ್ತು ಪಾಕಿಸ್ತಾನದ ಸೇನಾಪಡೆಗಳು, ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಗುಂಡಿನ ದಾಳಿಯನ್ನು ನಿಲ್ಲಿಸುವುದಾಗಿ 2021ರ ಫೆಬ್ರುವರಿ 25ರಂದು ಘೋಷಿಸಿದ್ದವು. 2003ರಲ್ಲಿ ಆದ ಕದನ ವಿರಾಮ ಒಪ್ಪಂದಕ್ಕೆ ತಮ್ಮ ಬದ್ಧತೆಯನ್ನು ಮತ್ತೊಮ್ಮೆ ವ್ಯಕ್ತಪಡಿಸಿದ್ದವು. ಗುಂಡಿನ ದಾಳಿ ನಡೆಸದೆ ಇರುವ ಒಪ್ಪಂದವನ್ನು ಕಳೆದ ವಾರದವರೆಗೂ ಬಹುಮಟ್ಟಿಗೆ ಪಾಲಿಸಲಾಗುತ್ತಿತ್ತು.
ಪಾಕಿಸ್ತಾನದ ಮಿಲಿಟರಿಯು ಬಾರಾಮುಲ್ಲಾ ಮತ್ತು ಕುಪ್ವಾರಾ ಜಿಲ್ಲೆಗಳಲ್ಲಿನ ನಿಯಂತ್ರಣ ರೇಖೆಯಲ್ಲಿ, ಪರ್ಗವಾಲ್ ವಲಯದಲ್ಲಿ ಅಂತರರಾಷ್ಟ್ರೀಯ ಗಡಿಯಲ್ಲಿ ಮಂಗಳವಾರ ರಾತ್ರಿಯೂ ಅಪ್ರಚೋದಿತವಾಗಿ ಗುಂಡಿನ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಿ ನರೇಂದ್ರ ಮೋದಿ ಅವರು ಈ ನಡುವೆ, ಭದ್ರತೆ ಕುರಿತ ಸಂಪುಟ ಸಮಿತಿಯ ಸಭೆ ನಡೆಸಿದರು. ಪ್ರಧಾನಿ ನಿವಾಸದಲ್ಲಿ ನಡೆದ ಈ ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಭದ್ರತೆಯ ಸ್ಥಿತಿ ಬಗ್ಗೆ ಚರ್ಚೆ ಆಯಿತು ಎಂದು ಮೂಲಗಳು ಹೇಳಿವೆ. ರಕ್ಷಣಾ ಸಚಿವ ರಾಜನಾಥ ಸಿಂಗ್, ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಈ ಸಭೆಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.
ರಾಷ್ಟ್ರೀಯ ಭದ್ರತಾ ಸಲಹೆಮಂಡಳಿಯ ಪುನರ್‌ರಚನೆ
ನವದೆಹಲಿ: ಸರ್ಕಾರವು ರಾಷ್ಟ್ರೀಯ ಭದ್ರತಾ ಸಲಹೆ ಮಂಡಳಿಯನ್ನು (ಎನ್‌ಎಸ್‌ಎಬಿ) ಪುನರ್‌ರಚಿಸಿದೆ. ಪಹಲ್ಗಾಮ್ ದಾಳಿಗೆ ಭಾರತ ಪ್ರತೀಕಾರ ತೀರಿಸುವ ಊಹಾಪೋಹಗಳು ಎದ್ದಿರುವ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿದೆ.
ದೇಶದ ಗುಪ್ತಚರ ಸಂಸ್ಥೆ ‘ರಿಸರ್ಚ್ ಆ್ಯಂಡ್ ಅನಲಿಸಿಸ್ ವಿಂಗ್’ನ (ರಾ) ಮಾಜಿ ಮುಖ್ಯಸ್ಥ ಅಲೋಕ್ ಜೋಶಿ ಅವರನ್ನು ಎನ್‌ಎಸ್‌ಎಬಿ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ನೌಕಾಪಡೆಯ ಪಶ್ಚಿಮ ಕಮಾಂಡ್‌ನ ಮಾಜಿ ಏರ್ ಕಮಾಂಡರ್ ಏರ್ ಮಾರ್ಷಲ್ ಪಿ.ಎಂ. ಸಿನ್ಹಾ ಮಾಜಿ ಸದರ್ನ್ ಆರ್ಮಿ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಎ.ಕೆ.ಸಿಂಗ್ ಮತ್ತು ನೌಕಾಪಡೆಯ ನಿವೃತ್ತ ರಿಯರ್ ಅಡ್ಮಿರಲ್ ಮಾಂಟಿ ಖನ್ನಾ ಅವರನ್ನು ನೂತನ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಮಾಜಿ ರಾಜತಾಂತ್ರಿಕ ಅಧಿಕಾರಿ ಬಿ.ವೆಂಕಟೇಶ್ ವರ್ಮಾ ಮತ್ತು ನಿವೃತ್ತ ಐಪಿಎಸ್ ಅಧಿಕಾರಿ ರಾಜೀವ್ ರಂಜನ್ ವರ್ಮಾ ಅವರನ್ನೂ ಸದಸ್ಯರನ್ನಾಗಿ ನೇಮಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.