ADVERTISEMENT

‘ಬಲಿದಾನ ದಿವಸ್‌’: ಭಗತ್‌ ಸಿಂಗ್‌, ರಾಜಗುರು, ಸುಖದೇವ್‌ ಸ್ಮರಣೆ

ಪಿಟಿಐ
Published 23 ಮಾರ್ಚ್ 2023, 7:09 IST
Last Updated 23 ಮಾರ್ಚ್ 2023, 7:09 IST
ಭಗತ್‌ ಸಿಂಗ್‌, ರಾಜಗುರು, ಸುಖದೇವ್‌
ಭಗತ್‌ ಸಿಂಗ್‌, ರಾಜಗುರು, ಸುಖದೇವ್‌   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಗುರುವಾರ ಹುತಾತ್ಮರ ದಿನದಂದು ಕ್ರಾಂತಿಕಾರಿಗಳಾದ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ದೇಶಭಕ್ತರಾದ ಭಗತ್ ಸಿಂಗ್, ರಾಜಗುರು, ಸುಖದೇವ್ ಅವರನ್ನು ಬ್ರಿಟಿಷರು ನೇಣಿಗೇರಿಸಿದ ದಿನವಾದ ಇಂದು (ಮಾ.23) ಅವರ ತ್ಯಾಗ ಬಲಿದಾನದ ಸ್ಮರಣೆಗಾಗಿ ‘ಬಲಿದಾನ ದಿವಸ್‌’ (ಹುತ್ಮಾತರ ದಿನ) ಎಂದು ಆಚರಿಸಲಾಗುತ್ತದೆ.

ಮೂವರು ಸ್ವಾತಂತ್ರ್ಯ ಹೋರಾಟಗಾರರನ್ನು ಬ್ರಿಟಿಷರು 1931 ಮಾರ್ಚ್ 23 ರಂದು ಗಲ್ಲಿಗೇರಿಸಿದ್ದರು. ಅವರ ತ್ಯಾಗ ಮತ್ತು ಶೌರ್ಯದ ಕಥೆಯನ್ನು ಭಾರತೀಯ ಸ್ವಾತಂತ್ರ್ಯ ಚಳವಳಿಯ ಅತ್ಯಂತ ಸ್ಪೂರ್ತಿದಾಯಕ ಅಧ್ಯಾಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

ADVERTISEMENT

ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರ ತ್ಯಾಗವನ್ನು ಭಾರತ ಸದಾ ಸ್ಮರಿಸುತ್ತದೆ. ನಮ್ಮ ಸ್ವಾತಂತ್ರ್ಯ ಹೋರಾಟಕ್ಕೆ ಅಪ್ರತಿಮ ಕೊಡುಗೆ ನೀಡಿದ ಮಹಾನ್ ವ್ಯಕ್ತಿಗಳು ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಈ ನೆಲದ ವೀರ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಅಮರ ಸೇನಾನಿಗಳಾದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ರವರ ಬಲಿದಾನ ದಿನದಂದು, ಅವರಿಗೆ ಶತ ಶತ ನಮನಗಳು.

ಭಾರತಾಂಬೆಯ ಈ ಪರಾಕ್ರಮಿ ಸುಪುತ್ರರ ತ್ಯಾಗ, ಹೋರಾಟ ಮತ್ತು ಆದರ್ಶಗಳು ನಮ್ಮೆಲ್ಲರಿಗೂ ಸ್ಪೂರ್ತಿದಾಯಕ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್‌ ಮಾಡಿದ್ದಾರೆ.

ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು, ತಮ್ಮ ಆಲೋಚನೆಗಳು ಮತ್ತು ಜೀವನದಿಂದ ಸ್ವಾತಂತ್ರ್ಯ ಚಳವಳಿಯ ಚಿಲುಮೆಯಾಗಿದ್ದು, ಇತಿಹಾಸದಲ್ಲಿ ಅಪರೂಪವಾಗಿ ಕಂಡುಬರುವ ಕ್ರಾಂತಿಯ ಮನೋಭಾವವನ್ನು ಸಂವಹಿಸಿದ್ದಾರೆ.

ಅವರ ಶೌರ್ಯ ಮತ್ತು ದೇಶಭಕ್ತಿ ಯುಗಯುಗಾಂತರಗಳಿಗೂ ಸ್ಫೂರ್ತಿಯಾಗಿ ಉಳಿಯುತ್ತದೆ.

ಇಂದು ಹುತಾತ್ಮರ ದಿನದಂದು ನಾನು ಕೋಟ್ಯಂತರ ದೇಶವಾಸಿಗಳೊಂದಿಗೆ ಅವರಿಗೆ ನಮಸ್ಕರಿಸುತ್ತೇನೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅಮರ ಸೇನಾನಿಗಳನ್ನು ಸ್ಮರಿಸಿದ್ದಾರೆ.

ಇಂಕ್ವಿಲಾಬ್ ಜಿಂದಾಬಾದ್, ಭಾರತ್‌ ಮಾತಾ ಕೀ ಜಯ್‌, ವಂದೇ ಮಾತರಂ ಎಂಬ ಉದ್ಘೋಷ ಕೂಗುತ್ತಾ ತಾಯಿ ಭಾರತಿಗೆ ತಮ್ಮ ಜೀವವನ್ನೇ ಸಮರ್ಪಿಸಿದ ಭಾರತಮಾತೆಯ ವೀರಪುತ್ರರಾದ ಭಗತ್‌ಸಿಂಗ್, ರಾಜಗುರು, ಸುಖದೇವ್‌ ಅವರು ಬಲಿದಾನಗೈದ ದಿನವಿಂದು. ಶತ ಶತ ನಮನಗಳು ಎಂದು ರಾಜ್ಯ ಬಿಜೆಪಿ ಟ್ವೀಟ್‌ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.