ADVERTISEMENT

ಜಲ ಯಾನದಲ್ಲಿ ಸೂಪರ್ ಪವರ್ ಆಗಲಿದೆ ಭಾರತ: ಸಚಿವ ಸರ್ಬಾನಂದ ಸೋನೊವಾಲ್

ನವ ಮಂಗಳೂರು ಬಂದರು ಪ್ರಾಧಿಕಾರದ ಸುವರ್ಣ ಮಹೋತ್ಸವ ಕಾರ್ಯಕ್ರಮಗಳಿಗೆ ಚಾಲನೆ

ಪ್ರವೀಣ್‌ ಕುಮಾರ್‌ ಪಿ.ವಿ
Published 16 ಅಕ್ಟೋಬರ್ 2025, 0:08 IST
Last Updated 16 ಅಕ್ಟೋಬರ್ 2025, 0:08 IST
ನವಮಂಗಳೂರು ಬಂದರಿನ ಸುವರ್ಣ ಮಹೋತ್ಸವದ ಅಂಗವಾಗಿ ₹50 ಮುಖಬೆಲೆಯ ಹೊಸ ನಾಣ್ಯವನ್ನು ಸಚಿವ ಸರ್ಬಾನಂದ ಸೋನೊವಾಲ್  ಬಿಡುಗಡೆ ಮಾಡಿದರು. ಎಸ್.ಶಾಂತಿ, ಎಚ್.ಎನ್.ಅಶ್ವತ್ಥ್,  ಅರ್.ಲಕ್ಷ್ಮಣನ್, ವೆಂಕಟರಮಣ ಅಕ್ಕರಾಜು, ರಾಜೀವ ಜಲೋಟ, ಬಾಲಚಂದ್ರ ಎಚ್.ಸಿ ಭಾಗವಹಿಸಿದ್ದರು
ನವಮಂಗಳೂರು ಬಂದರಿನ ಸುವರ್ಣ ಮಹೋತ್ಸವದ ಅಂಗವಾಗಿ ₹50 ಮುಖಬೆಲೆಯ ಹೊಸ ನಾಣ್ಯವನ್ನು ಸಚಿವ ಸರ್ಬಾನಂದ ಸೋನೊವಾಲ್  ಬಿಡುಗಡೆ ಮಾಡಿದರು. ಎಸ್.ಶಾಂತಿ, ಎಚ್.ಎನ್.ಅಶ್ವತ್ಥ್,  ಅರ್.ಲಕ್ಷ್ಮಣನ್, ವೆಂಕಟರಮಣ ಅಕ್ಕರಾಜು, ರಾಜೀವ ಜಲೋಟ, ಬಾಲಚಂದ್ರ ಎಚ್.ಸಿ ಭಾಗವಹಿಸಿದ್ದರು   

ನವದೆಹಲಿ: ‘ಜಲಯಾನ ಕ್ಷೇತ್ರದಲ್ಲಿ ಭಾರತವನ್ನು ಜಗತ್ತಿನ ಸೂಪರ್ ಪವರ್ ದೇಶವಾಗಿಸಲು ಸರ್ಕಾರ ಅನೇಕ ಯೋಜನೆ ರೂಪಿಸಿದ್ದು, ಬಂದರುಗಳ ಸರಕು ನಿರ್ವಹಣೆಯ ವಾರ್ಷಿಕ ಸಾಮರ್ಥ್ಯವನ್ನು ಸಾವಿರ ಕೋಟಿ ಟನ್‌ಗೆ ಹೆಚ್ಚಿಸಲಾಗುವುದು' ಎಂದು ಕೇಂದ್ರ ಬಂದರು ಸಚಿವ ಸರ್ಬಾನಂದ ಸೋನೊವಾಲ್ ಹೇಳಿದರು.

ನವ ಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ)ದ ಸುವರ್ಣ ಮಹೋತ್ಸವ ಕಾರ್ಯಕ್ರಮಗಳಿಗೆ ಇಲ್ಲಿನ ಭಾರತ್ ಮಂಡಪಮ್ ಸಭಾಂಗಣದಲ್ಲಿ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಮುಂದಿನ 22 ವರ್ಷಗಳ ಅಮೃತ ಕಾಲದ ಅವಧಿಯಲ್ಲಿ ದೇಶದ ಬಂದರುಗಳ ಅಭಿವೃದ್ಧಿಗೆ ₹80 ಲಕ್ಷ ಕೋಟಿ ಹೂಡಿಕೆ ಆಗಲಿದೆ. ಎಲ್ಲ ಬಂದರುಗಳಿಗೆ ತಂತ್ರಜ್ಞಾನ ಆಧರಿತ ಅತ್ಯಾಧುನಿಕ ಸೌಕರ್ಯ ಒದಗಿಸಲಿದ್ದೇವೆ. ಹೊಸ ಅವಿಷ್ಕಾರ ಅಳವಡಿಸಿಕೊಳ್ಳಲು ಉತ್ತೇಜನ ನೀಡಲಿದ್ದೇವೆ. ಮಹಾರಾಷ್ಟ್ರದ ವಾರ್ಧವಾನ್ ಬಂದರನ್ನು ಸರಕು ನಿರ್ವಹಣೆಯಲ್ಲಿ ಜಗತ್ತಿನ ಅಗ್ರ 10 ಬಂದರುಗಳಲ್ಲಿ ಒಂದನ್ನಾಗಿ ಅಭಿವೃದ್ಧಿಪಡಿಸಲು ₹76 ಸಾವಿರ ಕೋಟಿ ಹೂಡಿಕೆ ಮಾಡಲಿದ್ದೇವೆ. ಈ ಬಂದರು 12 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಸಲಿದೆ' ಎಂದರು.

ADVERTISEMENT

ಸ್ಮಾರ್ಟ್‌ ಬಂದರು ಆಗಿ ಅಭಿವೃದ್ಧಿ: ಎನ್ಎಂಪಿಎ ಅಧ್ಯಕ್ಷ ವೆಂಕಟರಮಣ ಅಕ್ಕರಾಜು ಮಾತನಾಡಿ, ‘2030ರ ಒಳಗೆ ನವ ಮಂಗಳೂರು ಬಂದರನ್ನು ಸ್ಮಾರ್ಟ್ ಬಂದರನ್ನಾಗಿ ಅಭಿವೃದ್ಧಿಪಡಿಸಲಾಗುತ್ತದೆ’ ಎಂದರು.

‘ಬಂದರು ಪ್ರವೇಶಿಸುವ ವಾಹನಗಳ ಸಮಗ್ರ ತಪಾಸಣೆ ವ್ಯವಸ್ಥೆ, ದಕ್ಕೆಗಳಲ್ಲಿ ಅಟೊ ಪೈಲಟ್ ವ್ಯವಸ್ಥೆ ಜಾರಿಗೊಳಿಸಲಾಗುತ್ತದೆ. ಬ್ರೇಕ್ ವಾಟರ್ ವಿಸ್ತರಣೆ, ಎರಡು ಹೊಸ ದಕ್ಕೆಗಳ ಸೇರ್ಪಡೆ ಸೇರಿ ವಿವಿಧ ಯೋಜನೆಗಳನ್ನು ₹12 ಸಾವಿರ ಕೋಟಿ ವೆಚ್ಚದಲ್ಲಿ 2030ರ ಒಳಗೆ ಜಾರಿಗೊಳಿಸಲಿದ್ದೇವೆ’ ಎಂದರು.

‘ಎನ್‌ಎಂಪಿಎ 2024-25ನೇ ಸಾಲಿನಲ್ಲಿ 4.6 ಕೋಟಿ ಟನ್ ಸರಕು ನಿರ್ವಹಿಸಿದೆ. 2025-26ನೇ ಸಾಲಿನಲ್ಲಿ 5 ಕೋಟಿ ಟನ್ ಸರಕು ನಿರ್ವಹಿಸುವ ಗುರಿ ಇದೆ. 2047ರ ವೇಳೆಗೆ ವಾರ್ಷಿಕ ಸರಕು ನಿರ್ವಹಣೆ ಸಾಮರ್ಥ್ಯವನ್ನು 15ಕೋಟಿ ಟನ್ ಹೆಚ್ಚಿಸುವ ಗುರಿ ಇದೆ' ಎಂದರು.

ಬಂದರು, ನೌಕಾ ಮತ್ತು ಜಲಯಾನ ಸಚಿವಾಲಯದ ಜಂಟಿ ಕಾರ್ಯದರ್ಶಿ ಆರ್.ಲಕ್ಷ್ಮಣನ್, ಅಭಿವೃದ್ಧಿ ಸಲಹೆಗಾರ ಎಚ್.ಎನ್.ಅಶ್ವತ್ಥ್ , ಕರ್ನಾಟಕ ಜಲಯಾನ ಮಂಡಳಿ ಸಿಇಒ ಬಾಲಚಂದ್ರ ಎಚ್.ಸಿ., ಡ್ರೆಜ್ಜಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾದ ಸಲಹೆಗಾರ ರಾಜೀವ್ ಜಲೋಟಾ ಭಾಗವಹಿಸಿದ್ದರು.

ಎನ್ಎಂಪಿಎ ಉಪಾಧ್ಯಕ್ಷೆ ‌ಎಸ್.ಶಾಂತಿ ವಂದಿಸಿದರು.

ಸುವರ್ಣ ಸಂಭ್ರಮದ ಸ್ಮರಣಾರ್ಥ ಅಂಚೆ ಚೀಟಿ, ₹ 50 ಮುಖಬೆಲೆಯ ನಾಣ್ಯ ಬಿಡುಗಡೆ ಸುವರ್ಣ ಮಹೋತ್ಸವ ಲಾಂಛನ, ಸುವರ್ಣ ಮಹೋತ್ಸವ ಗೀತೆ ಅನಾವರಣ ಮಾಡಲಾಯಿತು.

ಎನ್‌ಎಂಪಿಎದಿಂದ  ಸ್ಯಾಟಲೈಟ್ ಬಂದರು ನಿರ್ಮಾಣ ಸೇರಿದಂತೆ 2047 ವೇಳೆಗೆ ಒಟ್ಟು ₹ 55 ಸಾವಿರ ಕೊಟಿ ವೆಚ್ಚದ ಯೋಜನೆಗಳನ್ನು ರೂಪಿಸಲಾಗಿದೆ. 
ವೆಂಕಟರಮಣ ಅಕ್ಕರಾಜು ಎನ್ಎಂಪಿಎ ಅಧ್ಯಕ್ಷ 

ಸುವರ್ಣ ಸಂಭ್ರಮ ಸ್ಮರಣಾರ್ಥ 8 ಯೋಜನೆ

ನವ ಮಂಗಳೂರು ಬಂದರಿನ ಸುವರ್ಣ ಸಂಭ್ರಮದ ಸ್ಮರಣಾರ್ಥ ಕ್ರೂಸ್ ಹಡಗುಗಳಿಗೆ ಮೀಸಲಾದ ಟರ್ಮಿನಲ್ ಗೇಟ್ ಪಣಂಬೂರು ಕಿನಾರೆ ಬಳಿ ನಿರ್ಮಿಸಿರುವ ನೂತನ ಪ್ರವೇಶದ್ವಾರ -ಕೆ.ಕೆ ಗೇಟ್ ಒಟ್ಟು 14 ಸಾವಿರ ಟನ್ ಸಾಮರ್ಥ್ಯದ ಎರಡು ಆಧುನಿಕ ಉಗ್ರಾಣಗಳು ಮತ್ತು 150 ಹಾಸಿಗೆಗಳ ಸಾಮರ್ಥ್ಯದ ಬಂದರು ಆಸ್ಪತ್ರೆ ಹಾಗೂ ಪ್ರಾಧಿಕಾರದ ಸಿಬ್ಬಂದಿ ಮತ್ತು ಪಿಂಚಣಿದಾರರಿಗಾಗಿ ರೂಪಿಸಿದ ಎನ್ಎಂಪಿಎ ಚಿಕಿತ್ಸಾ ಮಿತ್ರ ಆ್ಯಪ್ ಅನ್ನು ಸಚಿವ ಸರ್ಬಾನಂದ ಸೊನೊವಾಲ್ ಲೋಕಾರ್ಪಣೆಗೊಳಿಸಿದರು. ಬೈಕಂಪಾಡಿಯಲ್ಲಿ ಟ್ರಕ್ ನಿಲುಗಡೆ ತಾಣ ಎಂಡಿಎಲ್ ಯಾರ್ಡ್‌ಗೆ ಹೊಸ ಕಾಂಕ್ರೀಟ್ ರಸ್ತೆ ಕಸ್ಟಮ್ಸ್ ಹೌಸ್ ಬಳಿ ಟ್ರಕ್ ನಿಲುಗಡೆ ತಾಣ ವಿಸ್ತರಣೆಗೆ ಶಂಕು ಸ್ಥಾಪನೆ ನೆರವೇರಿಸಿದರು. 

(ವರದಿಗಾರರು ಸಂಸ್ಥೆಯ ಆಹ್ವಾನದ ಮೇರೆಗೆ ನವದೆಹಲಿಗೆ ತೆರಳಿದ್ದರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.