ADVERTISEMENT

ಪೂರ್ವ ಲಡಾಖ್‌ನ ಅತಿ ಎತ್ತರದ ಪ್ರದೇಶದಲ್ಲಿ ಟ್ಯಾಂಕ್‌ಗಳನ್ನು ನಿಯೋಜಿಸಿದ ಭಾರತ

ಏಜೆನ್ಸೀಸ್
Published 28 ಸೆಪ್ಟೆಂಬರ್ 2020, 11:35 IST
Last Updated 28 ಸೆಪ್ಟೆಂಬರ್ 2020, 11:35 IST
 ಪೂರ್ವ ಲಡಾಕ್‌ನ ವಾಸ್ತವ ಗಡಿ ರೇಖೆಯ 14,500 ಅಡಿಗಳಿಗಿಂತಲೂ ಹೆಚ್ಚು ಎತ್ತರದ ಪ್ರದೇಶದಲ್ಲಿ ನಿಯೋಜನೆಗೊಂಡಿರುವ ಭಾರತೀಯ ಸೇನೆಯ ಟ್ಯಾಂಕರ್‌ಗಳು
ಪೂರ್ವ ಲಡಾಕ್‌ನ ವಾಸ್ತವ ಗಡಿ ರೇಖೆಯ 14,500 ಅಡಿಗಳಿಗಿಂತಲೂ ಹೆಚ್ಚು ಎತ್ತರದ ಪ್ರದೇಶದಲ್ಲಿ ನಿಯೋಜನೆಗೊಂಡಿರುವ ಭಾರತೀಯ ಸೇನೆಯ ಟ್ಯಾಂಕರ್‌ಗಳು    

ಲಡಾಖ್‌: ಸುಮಾರು ಐದು ತಿಂಗಳಿಂದ ಚೀನಾದೊಂದಿಗೆ ಸಂಘರ್ಷದಲ್ಲಿ ತೊಡಗಿರುವ ಭಾರತೀಯ ಸೇನೆಯ ಶಸ್ತ್ರಸಜ್ಜಿತ ರಕ್ಷಣಾ ಪಡೆಗಳು ಪೂರ್ವ ಲಡಾಕ್‌ನ ವಾಸ್ತವ ಗಡಿ ರೇಖೆಯ 14,500 ಅಡಿಗಳಿಗಿಂತಲೂ ಹೆಚ್ಚು ಎತ್ತರದ ಪ್ರದೇಶದಲ್ಲಿ ಟ್ಯಾಂಕರ್‌ಗಳನ್ನು ನಿಯೋಜಿಸಿದೆ. ಈ ಮೂಲಕ ಚೀನಾದಿಂದ ಯಾವುದೇ ಸಂದರ್ಭದಲ್ಲಿ ಎದುರಾಗಬಹುದಾದ ಯಾವುದೇ ಬೆದರಿಕೆಯನ್ನು ಹಿಮ್ಮೆಟ್ಟಿಸಲು ಸನ್ನದ್ಧು ಸ್ಥಿತಿಯಲ್ಲಿ ನಿಂತಿವೆ.

ಇದಿಷ್ಟೇ ಅಲ್ಲದೆ, ಭಾರತೀಯ ಸೈನ್ಯವು ಸೈನಿಕರಿಗೆ ಗಡಿಯ ಗುಂಟಾ ಹೊಸ ಆಶ್ರಯ ಮತ್ತು ಪೂರ್ವನಿರ್ಮಿತ ರಚನೆಗಳನ್ನು ನಿರ್ಮಿಸುತ್ತಿದೆ. ಈ ಮೂಲಕ ಅತ್ಯಂತ ಕಠಿಣ ಚಳಿಗಾಲದಲ್ಲೂ ಹೋರಾಡುವ ವ್ಯವಸ್ಥೆಗೆ ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದೆ.

ಪೂರ್ವ ಲಡಾಕ್‌ನ ವಾಸ್ತವ ಗಡಿ ನಿಯಂತ್ರಣಾ ರೇಖೆಯ ಚುಮಾರ್-ಡೆಮ್‌ಚೋಕ್‌ನ ಎತ್ತರದ ಪ್ರದೇಶದಲ್ಲಿ ಟಿ -90 ಮತ್ತು ಟಿ -72 ಟ್ಯಾಂಕ್‌ಗಳು ಮತ್ತು ಬಿಎಂಪಿ -2 ಕಾಲಾಳುಪಡೆಯ ವಾಹನಗಳನ್ನು ನಿಯೋಜಿಸಲಾಗಿದೆ. ಇವು –40 ಡಿಗ್ರಿ ಕನಿಷ್ಠ ತಾಪಮಾನದಲ್ಲೂ ಕಾರ್ಯನಿರ್ವಹಿಸಬಲ್ಲವು. ಕಠಿಣ ಚಳಿಗಾಲದಲ್ಲೂ ಯುದ್ಧ ಟ್ಯಾಂಕರ್‌ಗಳನ್ನು ಬಳಸಲು ಸೇನೆಯು ಅವುಗಳಿಗೆ 3 ರೀತಿಯ ವಿವಿಧ ಇಂಧನಗಳನ್ನು ಬಳಸುತ್ತದೆ. ಈ ಬಗ್ಗೆ ಸೇನೆ ಮಾಹಿತಿ ನೀಡಿದೆ.

ADVERTISEMENT

ಸಿಬ್ಬಂದಿ ಮತ್ತು ಸಲಕರಣೆಗಳ ಸನ್ನದ್ಧು ಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ಸಾಕಷ್ಟು ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಮೇಜರ್ ಜನರಲ್ ಅರವಿಂದ ಕಪೂರ್ ತಿಳಿಸಿದರು.

ಲಡಾಖ್‌ನಲ್ಲಿ ಚಳಿಗಾಲವು ಕಠಿಣವಾಗಲಿದೆ. ಚಳಿಗಾಲಕ್ಕೆ ಅಗತ್ಯವಿರುವ ಸುಧಾರಿತ ದಾಸ್ತಾನು ಇರುವ ವರೆಗೆ ಪರಿಸ್ಥಿತಿ ನಮ್ಮ ನಿಯಂತ್ರಣದಲ್ಲಿರುತ್ತದೆ. ಹೆಚ್ಚಿನ ಪೌಷ್ಟಿಕ ಪಡಿತರ, ಇಂಧನ ಮತ್ತು ತೈಲ, ಚಳಿಗಾಲದ ಉಡುಗೆ ಮತ್ತು ತಾಪನ ವಸ್ತುಗಳು ಎಲ್ಲವೂ ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಿದೆ. ಜಗತ್ತಿನ ಅತಿ ಎತ್ತರದ ಪ್ರದೇಶದಲ್ಲಿ, ಕಠಿಣ ಚಳಿಗಾಲದಲ್ಲಿ ಯುದ್ಧೋಪಕರಣಗಳನ್ನು ಮತ್ತು ಸೇನೆಯನ್ನು ನಿಭಾಯಿಸುವುದು ದೊಡ್ಡ ಸವಾಲಿನ ಕೆಲಸ ಎಂದು ಕಪೂರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.