
ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್
ಕೃಪೆ: ಪಿಟಿಐ
ನವದೆಹಲಿ: ಲಡಾಖ್‌ನಲ್ಲಿ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಿಂದಾಗಿ ಮೃತಪಟ್ಟವರಲ್ಲಿ ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ದ ಯೋಧ, ಮಾಜಿ ಸೈನಿಕ ತ್ಸೆವಾಂಗ್ ಥಾರ್ಚಿನ್ ಕೂಡ ಸೇರಿದ್ದಾರೆ ಎಂದು ಕಾಂಗ್ರೆಸ್ ಸೋಮವಾರ ಹೇಳಿದೆ.
ಮೃತ ಯೋಧ ಥಾರ್ಚಿನ್ ಅವರು ಸಿಯಾಚಿನ್ ಯುದ್ಧಭೂಮಿಯಲ್ಲಿ ಸೇವೆ ಸಲ್ಲಿಸಿದ್ದು, 1999ರ ಕಾರ್ಗಿಲ್ ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿದ್ದರು ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ‘ಎಕ್ಸ್’ನಲ್ಲಿ ಹೇಳಿದ್ದಾರೆ. ಅಲ್ಲದೆ, ಅವರ ತಂದೆ ಕೂಡ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು ಎಂದು ಅವರು ತಿಳಿಸಿದ್ದಾರೆ.
‘ಲಡಾಖ್‌ಗೆ 6ನೇ ಪರಿಚ್ಛೇದದಡಿ ಸ್ಥಾನಮಾನಕ್ಕಾಗಿ ಆಗ್ರಹಿಸಿ ಥಾರ್ಚಿನ್ ಅವರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಐದು ದಿನಗಳ ಹಿಂದೆ ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟ ಮೂವರಲ್ಲಿ ಅವರು ಕೂಡ ಒಬ್ಬರು ಎಂಬುವುದು ದುಃಖದ ವಿಚಾರವಾಗಿದೆ’ ಎಂದು ರಮೇಶ್ ಹೇಳಿದ್ದಾರೆ.
ಲಡಾಖ್‌ಗೆ 6ನೇ ಪರಿಚ್ಛೇದದ ಮತ್ತು ರಾಜ್ಯದ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ನಡೆಸಲಾದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಈ ವೇಳೆ 80 ಪೊಲೀಸರು ಸೇರಿದಂತೆ 150ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಹಿಂಸಾಚಾಕ್ಕೆ ಸಂಬಂಧಿಸಿ ಇಬ್ಬರು ಕೌನ್ಸಿಲರ್‌ಗಳು ಸೇರಿದಂತೆ ಸುಮಾರು 60 ಜನರನ್ನು ಪೊಲೀಸರು ಈವರೆಗೆ ವಶಕ್ಕೆ ಪಡೆದಿದ್ದಾರೆ. ಜೊತೆಗೆ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರನ್ನು ಕೂಡ ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದೆ.
ಹಿಂಸಾಚಾರ ಪೀಡಿತ ಲೇಹ್‌ನಲ್ಲಿ ವಿಧಿಸಲಾಗಿದ್ದ ಕರ್ಫ್ಯೂ 6ನೇ ದಿನವೂ ಮುಂದುವರೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.