ನವದೆಹಲಿ: ಅಂತರರಾಷ್ಟ್ರೀಯ ಬಾಹ್ಯಾಕಾಶದಿಂದ ಮರಳಿರುವ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಈ ವಾರಾಂತ್ಯದಲ್ಲಿ ಭಾರತಕ್ಕೆ ಆಗಮಿಸಲಿದ್ದಾರೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಗುರುವಾರ ಹೇಳಿದರು.
ದೆಹಲಿಗೆ ಬಂದ ಕೂಡಲೇ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ. ನಂತರ ತಮ್ಮ ಕುಟುಂಬದವರನ್ನು ಭೇಟಿಯಾಗಲು ಲಖನೌಗೆ ತೆರಳಲಿದ್ದಾರೆ. ಆಗಸ್ಟ್ 23ರಂದು ನಡೆಯಲಿರುವ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯಲ್ಲಿ ಭಾಗಿಯಾಗಲು ಅವರು ದೆಹಲಿಗೆ ಬರಲಿದ್ದಾರೆ ಎಂದು ಜಿತೇಂದ್ರ ಸಿಂಗ್ ಮಾಹಿತಿ ನೀಡಿದರು.
ಶುಭಾಂಶು ಶುಕ್ಲಾ ಅವರು ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಎರಡನೇ ಭಾರತೀಯ ಹಾಗೂ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಿದ ಮೊದಲ ಭಾರತೀಯರಾಗಿದ್ದಾರೆ.
ವಾಣಿಜ್ಯ ಉದ್ದೇಶಿತ ಆಕ್ಸಿಯಂ -4 ಮಿಷನ್‌ನ ಭಾಗವಾಗಿ ಗ್ರೂಪ್ ಕ್ಯಾಪ್ಟನ್ ಆಗಿ ಶುಭಾಂಶು ಶುಕ್ಲಾ ಗಗನಯಾನ ಕೈಗೊಂಡಿದ್ದರು. ಅವರು ಜುಲೈ 15ರಂದು ಡ್ರಾಗನ್ ಗ್ರೇಸ್ ನೌಕೆಯಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾ ಬಳಿಯ ಸ್ಯಾನ್ ಡಿಯಾಗೊ ಕಡಲ ತೀರದಲ್ಲಿ ಬಂದಿಳಿದಿದ್ದರು. ಅಲ್ಲಿ ಅವರು ನಾಸಾ ಹಾಗೂ ಇಸ್ರೊದ 60 ಪ್ರಯೋಗಗಳನ್ನು ನಡೆಸಿದ್ದರು.
ಈ ಬಾಹ್ಯಾಕಾಶ ಯಾನ ಭಾರತದ ಗಗನಯಾನ್ ಮಿಷನ್‌ಗೆ ಮಹತ್ವದ ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.