ADVERTISEMENT

ಅಮೆರಿಕದಿಂದ ಗಡಿಪಾರು: ಕೈಕೋಳದೊಂದಿಗೆ ಬಂದ 35 ಜನರು

ಪಿಟಿಐ
Published 26 ಅಕ್ಟೋಬರ್ 2025, 23:30 IST
Last Updated 26 ಅಕ್ಟೋಬರ್ 2025, 23:30 IST
–ಸಾಂದರ್ಭಿಕ ಚಿತ್ರ
–ಸಾಂದರ್ಭಿಕ ಚಿತ್ರ   

ಕೈಥಾಲ್‌ (ಹರಿಯಾಣ): ಅಮೆರಿಕದಿಂದ ಗಡಿಪಾರಾಗಿ ಭಾರತಕ್ಕೆ ಮರಳಿರುವ ತಂಡದಲ್ಲಿ ಹರಿಯಾಣದ ಕೈಥಲ್‌, ಕರ್ನಾಲ್‌ ಮತ್ತು ಕುರುಕ್ಷೇತ್ರ ಜಿಲ್ಲೆಗಳಿಗೆ ಸೇರಿದ 35 ಜನರಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. 

ಅಕ್ರಮವಾಗಿ ಅಮೆರಿಕ ಪ್ರವೇಶಿಸಿದ ಭಾರತೀಯರನ್ನು ಹೊಂದಿದ್ದ ವಿಮಾನವು ಶನಿವಾರ ತಡರಾತ್ರಿ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಅಮೆರಿಕದಿಂದ ಗಡಿಪಾರಾಗಿ ಬಂದವರಲ್ಲಿ ಕರ್ನಾಲ್‌ನ 16, ಕೈಥಲ್‌ನ 14 ಮತ್ತು ಕುರುಕ್ಷೇತ್ರ ಜಿಲ್ಲೆಯ ಐದು ಮಂದಿ ಸೇರಿದ್ದಾರೆ. ಅವರನ್ನು ಆಯಾ ಜಿಲ್ಲೆಗಳಲ್ಲಿನ ಅವರ ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ADVERTISEMENT

‘ವಿಮಾನದಲ್ಲಿದ್ದ ಬಹುತೇಕರಿಗೆ ಕೈಕೋಳ ಹಾಕಲಾಗಿತ್ತು’ ಎಂದು ಅಮೆರಿಕದಿಂದ ಗಡಿಪಾರಾಗಿರುವ ಕೈಥಲ್‌ ಮೂಲದ ನರೇಶ್‌ ಕುಮಾರ್‌ ಪ್ರತಿಕ್ರಿಯಿಸಿದ್ದಾರೆ.

‘ಇವರೆಲ್ಲ ಅಕ್ರಮ ಮಾರ್ಗದ ಮೂಲಕ ಅಮೆರಿಕ ಪ್ರವೇಶಿಸಿದ್ದರು. ಇದಕ್ಕಾಗಿ ಏಜೆಂಟರಿಗೆ ಲಕ್ಷಾಂತರ ರೂಪಾಯಿ ಪಾವತಿಸಿದ್ದಾರೆ ಎಂಬುದು ಗೊತ್ತಾಗಿದೆ. ಆದರೆ ಈ ಬಗ್ಗೆ ಇಲ್ಲಿಯವರೆಗೆ ಯಾರೂ ಅಧಿಕೃತವಾಗಿ ದೂರು ದಾಖಲಿಸಿಲ್ಲ’ ಎಂದು ಡಿಎಸ್‌ಪಿ ಲಲಿತ್‌ ಕುಮಾರ್‌ ತಿಳಿಸಿದ್ದಾರೆ.  

ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ ಮತ್ತೆ ಅಧಿಕಾರಕ್ಕೆ ಬಂದ ಬಳಿಕ, ಅಲ್ಲಿನ ಕಾನೂನು ಜಾರಿ ಸಂಸ್ಥೆಗಳು ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಇದರ ಭಾಗವಾಗಿ ಈ ವರ್ಷದ ಆರಂಭದಲ್ಲಿ ಪಂಜಾಬ್‌, ಹರಿಯಾಣ ಮತ್ತು ಗುಜರಾತಿನ ಹಲವು ಯುವಕರನ್ನು ಅಮೆರಿಕ ಗಡಿಪಾರು ಮಾಡಿತ್ತು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.