ADVERTISEMENT

ದೇಶದ ಆರ್ಥಿಕತೆ ಸತ್ತಿರುವುದು ಸತ್ಯ: ರಾಹುಲ್ ಗಾಂಧಿ

ಪಿಟಿಐ
Published 31 ಜುಲೈ 2025, 15:39 IST
Last Updated 31 ಜುಲೈ 2025, 15:39 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ನವದೆಹಲಿ:  ‘ಮೋದಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಹೊರತುಪಡಿಸಿ ಮಿಕ್ಕವರೆಲ್ಲರಿಗೂ ಭಾರತದ ಆರ್ಥಿಕತೆ ನಿರ್ಜೀವಗೊಂಡಿದೆ ಎಂಬುದು ತಿಳಿದಿದೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಗುರುವಾರ ಚಾಟಿ ಬೀಸಿದ್ದಾರೆ.

ಭಾರತದ ಮೇಲೆ ಶೇ 25ರಷ್ಟು ಸುಂಕ ವಿಧಿಸಿ, ಅತ್ತ ಪಾಕಿಸ್ತಾನದ ಜತೆಗೆ ತೈಲ ಒಪ್ಪಂದ ಮಾಡಿಕೊಂಡಿರುವ ಅಮೆರಿಕದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತುಟಿ ಬಿಚ್ಚುತ್ತಿಲ್ಲ ಎಂದು ವಿಪಕ್ಷಗಳು ಕಿಡಿ ಕಾರಿರುವ ನಡುವೆಯೇ ರಾಹುಲ್‌ ಈ ಹೇಳಿಕೆ ನೀಡಿದ್ದಾರೆ.

ಸುಂಕ ವಿಧಿಸುವುದು ಮಾತ್ರವಲ್ಲದೆ ಭಾರತದ್ದು ನಿರ್ಜೀವಗೊಂಡ ಆರ್ಥಿಕತೆ ಎಂದೂ ಅಮೆರಿಕ ಅಧ್ಯಕ್ಷ ಟ್ರಂಪ್‌ ಟೀಕಿಸಿದ್ದರು. ಈ ಬಗ್ಗೆ ಮಾಧ್ಯಮಗಳೊಂದಿಗೆ ರಾಹುಲ್‌ ಮಾತನಾಡಿ, ‘ ಟ್ರಂಪ್‌ ಸತ್ಯವನ್ನೇ ಹೇಳಿದ್ದಾರೆ. ಮೋದಿ, ಸಚಿವೆ ನಿರ್ಮಲಾ ಅವರನ್ನು ಬಿಟ್ಟು ಮಿಕ್ಕೆಲ್ಲರಿಗೂ ಈ ವಿಚಾರ ತಿಳಿದಿದೆ’ ಎಂದಿದ್ದಾರೆ. 

ADVERTISEMENT

‘ಭಾರತದ ಆರ್ಥಿಕತೆ ನಿರ್ಜೀವಗೊಂಡಿದೆ ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ಅದಾನಿಗೆ ಸಹಾಯ ಮಾಡಲು ಬಿಜೆಪಿ ದೇಶದ ಆರ್ಥಿಕತೆಯನ್ನೇ ಕೊಂದಿದೆ. ಈ ಬಗ್ಗೆ ಆಶ್ಚರ್ಯಪಡುವಂಥದ್ದು ಏನೂ ಇಲ್ಲ. ಬದಲಾಗಿ, ಈ ಬಗ್ಗೆ ಮೋದಿ ಏಕೆ ಮಾತನಾಡುತ್ತಿಲ್ಲ ಎಂದು ಅವರನ್ನೇ ಕೇಳಿ’ ಎಂದೂ ರಾಹುಲ್‌ ಹೇಳಿದ್ದಾರೆ. 

ಬಿಜೆಪಿ ನೇತೃತ್ವದ ಸರ್ಕಾರವು ದೇಶದ ಆರ್ಥಿಕ, ರಕ್ಷಣಾ ಹಾಗೂ ವಿದೇಶಾಂಗ ನೀತಿಯನ್ನು ನಾಶಗೊಳಿಸಿದೆ ಎಂದೂ ದೂರಿದ್ದಾರೆ. 

ನಿರ್ಜೀವ ಆರ್ಥಿಕತೆಯ ಹೇಳಿಕೆಯನ್ನೇ ಸಮರ್ಥಿಸಿ ಪುನರುಚ್ಚರಿಸುವ ಮೂಲಕ ರಾಹುಲ್‌ ಮತ್ತಷ್ಟು ಕೆಳಮಟ್ಟಕ್ಕೆ ಇಳಿದಿದ್ದಾರೆ. ಭಾರತೀಯರ ಸಾಧನೆ ಮಹತ್ವಾಕಾಂಕ್ಷೆಗಳನ್ನು ಅವಮಾನಿಸಿದ್ದಾರೆ.
ಅಮಿತ್ ಮಾಳವೀಯ ಬಿಜೆಪಿ ಐಟಿ ಮುಖ್ಯಸ್ಥ

ವಿಪಕ್ಷ ನಾಯಕರ ಆಕ್ಷೇಪ

‘ಕದನವಿರಾಮ ಕುರಿತಂತೆ ಟ್ರಂಪ್‌ ಅವರ ಹೇಳಿಕೆ ಬಗ್ಗೆ ಸಂಸತ್ತಿನಲ್ಲಿ ಮಾತನಾಡುವುದಿಲ್ಲ ಎಂದು ಮೋದಿ ಶಪಥ ಮಾಡಿದಂತಿದೆ. ಈಗ ಭಾರತದ ವಿರುದ್ಧ ಟ್ರಂಪ್‌ ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ. ಈಗಲೂ ಮೋದಿ ಸುಮ್ಮನಿರುವರೇ’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.  ‘11 ವರ್ಷಗಳಿಂದ ಅಮೆರಿಕದೊಂದಿಗೆ ನಮಗೆ ಉತ್ತಮ ಸ್ನೇಹವಿದೆ ಎಂದು ಸರ್ಕಾರ ಹೇಳುತ್ತಿದೆ. ‘ಅಚ್ಛೇ ದಿನ್‌’ನ ಭರವಸೆಯನ್ನೂ ನೀಡಿತ್ತು. ಆದರೆ ಈಗ ಕರಾಳ ದಿನಗಳ ಆರಂಭ ಶುರುವಾಗಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಹೇಳಿದ್ದಾರೆ.  ‘ಈ ಹಿಂದೆ ಚೀನಾದ ಅಧ್ಯಕ್ಷ ಕ್ಸಿ ಜತೆಗೆ ವೈಯಕ್ತಿಕ ಸ್ನೇಹ ಹೊಂದಲು ಮಾಡಿದ ಕಸರತ್ತನ್ನೇ ಅಮೆರಿಕ ಅಧ್ಯಕ್ಷ ಟ್ರಂಪ್‌ ಜತೆಗೂ ಮೋದಿ ಮಾಡಿದ್ದರು. ಆದರೆ ಈಗ ಅಹಂಕಾರ ಮತ್ತು ಸ್ವಯಂ ಪ್ರತಿಷ್ಠೆಯಗೀಳನ್ನು ಹೊಂದಿರುವ ವ್ಯಕ್ತಿಯನ್ನು ಹೇಗೆ ಅದರಿಂದಲೇ ಆಟವಾಡಿಸಬಹುದು ಎಂಬುದನ್ನು ಆ ಇಬ್ಬರೂ ಅರಿತಿದ್ದಾರೆ’ ಎಂದು ಕಾಂಗ್ರೆಸ್‌ ‍ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್ ಹೇಳಿದ್ದಾರೆ.

‘ಆರ್ಥಿಕತೆ: 11ನೇ ಸ್ಥಾನದಿಂದ 5ನೇ ಸ್ಥಾನಕ್ಕೆ’

‘ಕೇವಲ ಐದು ದಶಕಗಳ ಅವಧಿಯಲ್ಲಿ ಭಾರತವು ವಿಶ್ವದಲ್ಲೇ ಆರ್ಥಿಕ ಕ್ಷೇತ್ರದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ದೇಶವಾಗಿದೆ. 11ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಜಿಗಿದಿದ್ದೇವೆ. ಕಠಿಣ ಶ್ರಮ, ರೈತಾಪಿ ವರ್ಗದ ಕೊಡುಗೆ, ಕೈಗಾರಿಕೋದ್ಯಮಗಳ ಬೆಳವಣಿಗೆಯಿಂದ ಇದು ಸಾಧ್ಯವಾಗಿದೆ‘ ಎಂದು ಕೇಂದ್ರ ವಾಣಿಜ್ಯ ಸಚಿವ ಪೀಯೂಷ್ ಗೋಯಲ್ ಪ್ರತಿಕ್ರಿಯಿಸಿದ್ದಾರೆ.

‘ವಿಶ್ವದ ಉತ್ಪಾದನಾ ಹಬ್ ಆಗಿ ಭಾರತವನ್ನು ರೂಪಿಸಲು ಕಳೆದ ಒಂದು ದಶಕದಲ್ಲಿ ಏನೆಲ್ಲ ಅಗತ್ಯವಿದೆಯೋ ಆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಯುವ ಮಾನವ ಸಂಪನ್ಮೂಲವನ್ನು ಬಳಸಿಕೊಂಡು ಪ್ರಗತಿಯತ್ತ ದಾಪುಗಾಲು ಹಾಕುತ್ತಿದ್ದೇವೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.