ಶಶಿ ತರೂರ್
(ಪಿಟಿಐ ಚಿತ್ರ)
ನವದೆಹಲಿ: ಭಾರತದ್ದು 'ಸತ್ತ' ಆರ್ಥಿಕತೆ ಎಂಬ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪವನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಮರ್ಥಿಸಿಕೊಂಡಿದ್ದರು.
ಆದರೆ ರಾಹುಲ್ ಗಾಂಧಿ ನಿಲುವುಗಳನ್ನು ಒಪ್ಪಿಕೊಳ್ಳಲು ಕಾಂಗ್ರೆಸ್ ನಾಯಕ ತಶಿ ತರೂರ್ ತಯಾರಾಗಲಿಲ್ಲ. ಇದರೊಂದಿಗೆ ಕಾಂಗ್ರೆಸ್ ನಾಯಕರಲ್ಲೇ ಭಿನ್ನಮತ ಉಂಟಾಗಿದೆ.
ಸಂಸತ್ತಿನ ಆವರಣದಲ್ಲಿ ಭಾರತದದ್ದು ಸತ್ತ ಆರ್ಥಿಕತೆ ಎಂದು ನಂಬುತ್ತೀರಾ ಎಂದು ಮಾಧ್ಯಮದವರು ಕೇಳಿದಾಗ, 'ಇಲ್ಲ, ಇಲ್ಲ, ಖಂಡಿತವಾಗಿಯೂ ಇಲ್ಲ. ಅದು ಎಲ್ಲರಿಗೂ ಗೊತ್ತಿರುವ ವಿಷಯ' ಎಂದಷ್ಟೇ ತರೂರ್ ಪ್ರತಿಕ್ರಿಯಿಸಿದ್ದಾರೆ.
'ಪ್ರಧಾನಿ ನರೇಂದ್ರ ಮೋದಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಹೊರತುಪಡಿಸಿ ಉಳಿದೆಲ್ಲವರಿಗೂ ಭಾರತದ ಆರ್ಥಿಕತೆ ನೆಲಕಚ್ಚಿದೆ ಎಂಬ ವಿಷಯ ಗೊತ್ತಿದೆ. ಟ್ರಂಪ್ ಸತ್ಯ ಹೇಳಿದಕ್ಕಾಗಿ ಸಂತೋಷವಿದೆ' ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು.
ಈ ನಡುವೆ ಛತ್ತೀಸಗಢದಲ್ಲಿ ಕೇರಳದ ಇಬ್ಬರು ಕ್ಯಾಥೋಲಿಕ್ ಸನ್ಯಾಸಿನಿಯರು ಮಾನವ ಕಳ್ಳಸಾಗಣೆ ಮತ್ತು ಬಲವಂತದ ಮತಾಂತರದಲ್ಲಿ ಬಂಧನವಾಗಿರುವ ಘಟನೆ ಕುರಿತು ಪ್ರತಿಕ್ರಿಯಿಸಿರುವ ತರೂರ್, 'ಸನ್ಯಾಸಿನಿಯರು ಯಾವುದೇ ನಿಮಯವನ್ನು ಉಲ್ಲಂಘಿಸಿಲ್ಲ. ಅವರ ವಿರುದ್ಧ ಅನ್ಯಾಯವಾಗಿದೆ. ಆದಷ್ಟು ಬೇಗನೇ ಬಿಡುಗಡೆ ಮಾಡಲು ಮನವಿ ಮಾಡಿದ್ದೇನೆ' ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.