
ಸಾವು
(ಪ್ರಾತಿನಿಧಿಕ ಚಿತ್ರ)
ಗಿರ್ ಸೋಮನಾಥ್ (ಗುಜರಾತ್): ಸುಮಾರು ಮೂರು ವರ್ಷಗಳ ಹಿಂದೆ ಶಿಕ್ಷೆ ಪೂರ್ಣಗೊಂಡಿದ್ದರೂ ಪಾಕಿಸ್ತಾನದ ಜೈಲಿನಲ್ಲೇ ಇದ್ದ 36 ವರ್ಷದ ಗುಜರಾತ್ ಮೂಲದ ಮೀನುಗಾರ ಕಳೆದ ತಿಂಗಳು ಜೈಲಿನಲ್ಲೇ ಮೃತಪಟ್ಟಿದ್ದರು. ಅವರ ಮೃತದೇಹವನ್ನು ಗಿರ್ ಸೋಮನಾಥ್ ಜಿಲ್ಲೆಯ ಅವರ ಹುಟ್ಟೂರಿಗೆ ತರಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಿಲ್ಲೆಯ ಉನಾ ತಾಲೂಕಿನ ಚಿಖ್ಲಿ ಗ್ರಾಮದ ನಿವಾಸಿ ಭಾಗಭಾಯ್ ಬಂಭಾನಿಯಾ ಜನವರಿ 16ರಂದು ಕರಾಚಿಯ ಜೈಲಿನಲ್ಲಿ ಹೃದಯಾಘಾತದಿಂದ ಮೇರಪಟ್ಟಿದ್ದರು ಎಂದು ಜಾಫ್ರಾಬಾದ್‌ನ ಮೀನುಗಾರಿಕೆ ಅಧಿಕಾರಿ ಒ.ಎ. ಮಕ್ರಾನಿ ತಿಳಿಸಿದ್ದಾರೆ.
‘ಅವರ ಮೃತದೇಹವನ್ನು ವಾಘಾದ ಭಾರತ-ಪಾಕಿಸ್ತಾನ ಗಡಿಯಲ್ಲಿ ಮೀನುಗಾರಿಕೆ ಇಲಾಖೆಯ ತಂಡಕ್ಕೆ ಹಸ್ತಾಂತರಿಸಲಾಯಿತು. ಮೃತದೇಹವನ್ನು ವಿಮಾನದ ಮೂಲಕ ಅಹಮದಾಬಾದ್‌ಗೆ ಸಾಗಿಸಲಾಯಿತು. ನಂತರ, ಶನಿವಾರ ರಸ್ತೆ ಮೂಲಕ ಅವರ ಹುಟ್ಟೂರಿಗೆ ತರಲಾಯಿತು’ಎಂದು ಮಕ್ರಾನಿ ಹೇಳಿದ್ದಾರೆ.
2022ರ ಫೆ 18ರಂದು ಗುಜರಾತ್ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಯ ಸಮಯದಲ್ಲಿ 'ಬುರಾಕ್' ಎಂಬ ಮೀನುಗಾರಿಕಾ ದೋಣಿ ಆಕಸ್ಮಿಕವಾಗಿ ಅಂತರರಾಷ್ಟ್ರೀಯ ಸಮುದ್ರ ಗಡಿಯನ್ನು ದಾಟಿದ ನಂತರ, ಬಂಭಾನಿಯಾ ಅವರನ್ನು ಪಾಕಿಸ್ತಾನಿ ಅಧಿಕಾರಿಗಳು ಬಂಧಿಸಿದ್ದರು.
ನಂತರ, ಅವರನ್ನು ತಪ್ಪಿತಸ್ಥರೆಂದು ಘೋಷಿಸಿ ಶಿಕ್ಷೆ ವಿಧಿಸಲಾಗಿತ್ತು. ಶಿಕ್ಷೆ ಅನುಭವಿಸಿದ ನಂತರವೂ ಅವರು ದೀರ್ಘಕಾಲ ಜೈಲಿನಲ್ಲಿ ಇದ್ದರು. ಜೈಲಿನಲ್ಲಿ ಅವರ ಆರೋಗ್ಯ ಹದಗೆಟ್ಟಿತ್ತು. ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಣನೀಯ ವಿಳಂಬದ ನಂತರ ಎರಡೂ ದೇಶಗಳ ಸರ್ಕಾರಗಳ ನಡುವಿನ ಕಾರ್ಯವಿಧಾನಗಳು ಪೂರ್ಣಗೊಂಡ ನಂತರ, ಮೀನುಗಾರನ ಮೃತದೇಹವನ್ನು ಭಾರತಕ್ಕೆ ತರಲಾಯಿತು ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.