ಚಂಡೀಗಢ: 1993ರಲ್ಲಿ ತರಣ್ ತಾರನ್ ಜಿಲ್ಲೆಯಲ್ಲಿ ಸಂಭವಿಸಿದ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಐವರು ನಿವೃತ್ತ ಪೊಲೀಸರು ದೋಷಿಗಳೆಂದು ಮೊಹಾಲಿಯ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ಅಪರಾಧ ಸಂಚು, ಹತ್ಯೆ ಹಾಗೂ ಸಾಕ್ಷ್ಯನಾಶ ಮಾಡಿದ ಅಪರಾಧಕ್ಕೆ ಐವರು ನಿವೃತ್ತ ಪೊಲೀಸರನ್ನು ದೋಷಿಗಳೆಂದು ನ್ಯಾಯಾಲಯ ಘೋಷಿಸಿತು.
ಶಿಕ್ಷೆಯ ಪ್ರಮಾಣವನ್ನು ಆಗಸ್ಟ್ 4ರಂದು ಪ್ರಕಟಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ. ಈ ಪ್ರಕರಣದಲ್ಲಿ 10 ಜನ ಪೊಲೀಸರು ಆರೋಪಿಗಳಾಗಿದ್ದರು. ಈ ಪೈಕಿ ವಿಚಾರಣೆ ವೇಳೆ ಐವರು ಪೊಲೀಸರು ಮೃತಪಟ್ಟಿದ್ದಾರೆ.
ನಿವೃತ್ತರಾದ ಡಿವೈಎಸ್‌ಪಿ ಭೂಪಿಂದರ್‌ಜಿತ್ ಸಿಂಗ್, ಡಿಎಸ್‌ಪಿ ದೇವೀಂದರ್ ಸಿಂಗ್, ಇನ್ಸ್‌ಪೆಕ್ಟರ್ ಸುಬಾ ಸಿಂಗ್, ಎಎಸ್‌ಐ ಗುಲ್ಬರ್ಗ್ ಸಿಂಗ್ ಹಾಗೂ ರಘಬೀರ್ ಸಿಂಗ್ ದೋಷಿಗಳೆಂದು ನ್ಯಾಯಾಲ ಹೇಳಿದೆ.
ಸರ್ಕಲ್ ಇನ್ಸ್‌ಪೆಕ್ಟರ್ ಗಿಯಾನ್ ಚಂದ್, ಇನ್ಸ್‌ಪೆಕ್ಟರ್ ಗುರುದೇವ್ ಸಿಂಗ್, ಎಎಸ್‌ಐ ಜಗೀರ್ ಸಿಂಗ್ ಮತ್ತು ಹೆಡ್ ಕಾನ್‌ಸ್ಟೆಬಲ್‌ಗಳಾದ ಮೊಹಿಂದರ್ ಸಿಂಗ್, ಅರೂರ್ ಸಿಂಗ್ ವಿಚಾರಣೆ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ.
1993ರ ಜೂನ್ 27ರಂದು ಕಳ್ಳತನ ಆರೋಪದಲ್ಲಿ ಸರ್ಕಾರಿ ಗುತ್ತಿಗೆದಾರ ದೇಸಾ ಸಿಂಗ್ ಕುಟುಂಬದ ಮೇಲೆ ದಾಳಿ ಮಾಡಿದ್ದ ಪೊಲೀಸರು ಶಿಂದರ್ ಸಿಂಗ್, ದೇಸಾ ಸಿಂಗ್, ಸುಖದೇವ್ ಸಿಂಗ್, ಬಾಲ್ಕರ್ ಸಿಂಗ್ ಹಾಗೂ ದಲ್ಜಿತ್ ಸಿಂಗ್ ಅವರನ್ನು ಬಂಧಿಸಿದ್ದರು. ನಂತರ ಅವರ ಮೇಲೆ ಶಸ್ತ್ರಾಸ್ತ್ರಗಳ ಕಳ್ಳತನ ಆರೋಪ ಮಾಡಲಾಗಿತ್ತು.
ಜುಲೈ 12ರಂದು ಪ್ರಕರಣದ ಮಹಜರಿಗೆ ಗ್ರಾಮಕ್ಕೆ ಕರೆದೊಯ್ಯುವಾಗ ಆರೋಪಿಗಳು ಪೊಲೀಸರ ಮೇಲೆ ದಾಳಿ ಮಾಡಿದರು ಎಂದು ಆತ್ಮರಕ್ಷಣೆಗಾಗಿ ಎನ್‌ಕೌಂಟರ್ ಮಾಡಿ ದೇಸಾ ಸಿಂಗ್, ಶಿಂದರ್ ಸಿಂಗ್, ಬಾಲ್ಕರ್ ಸಿಂಗ್ ಹಾಗೂ ಸುಖದೇವ್ ಸಿಂಗ್‌ನನ್ನು ಹತ್ಯೆ ಮಾಡಲಾಗಿತ್ತು.
ಜುಲೈ 28ರಂದು ದೇಸಾ ಸಿಂಗ್ ಕುಟುಂಬದ ದಲ್ಜಿತ್ ಸಿಂಗ್ ಹಾಗೂ ಇತರೆ ಇಬ್ಬರನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.