ADVERTISEMENT

ಕೇಜ್ರಿವಾಲ್, ಎಎಪಿ ಅಸ್ತಿತ್ವಕ್ಕೆ ಅಪಾಯ ಎದುರಾಗಿದೆ: ಬಿಜೆಪಿ ಸಂಸದ ಯೋಗೇಂದ್ರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಫೆಬ್ರುವರಿ 2025, 6:35 IST
Last Updated 12 ಫೆಬ್ರುವರಿ 2025, 6:35 IST
ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್   

ನವದೆಹಲಿ: ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹಾಗೂ ಅವರ ಪಕ್ಷ ಎಎಪಿಯ ರಾಜಕೀಯ ಅಸ್ತಿತ್ವಕ್ಕೆ ಅಪಾಯ ಎದುರಾಗಿದೆ ಎಂದು ಬಿಜೆಪಿ ಸಂಸದ ಯೋಗೇಂದ್ರ ಚಂಡೋಲಿಯಾ ಬುಧವಾರ ಹೇಳಿದ್ದಾರೆ.

ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶದ ಕುರಿತು ಮಾತನಾಡಿರುವ ಬಿಜೆಪಿ ಸಂಸದ, 'ಕೇಜ್ರಿವಾಲ್‌ ಹಾಗೂ ಅವರ ಪಕ್ಷದ ಅಸ್ತಿತ್ವಕ್ಕೆ ಅಪಾಯ ಎದುರಾಗಿದೆ. ಪಂಜಾಬ್‌ನಲ್ಲಿ ಚುನಾಯಿತ ಸರ್ಕಾರ ಇದೆಯಾದರೂ, ರಿಮೋಟ್‌ ಕಂಟ್ರೋಲ್‌ನಲ್ಲಿದೆ. ಸಿಎಂ ಭಗವಂತ್ ಮಾನ್‌ ಅವರಿಗೆ ಸಂಪೂರ್ಣ ಅಧಿಕಾರ ಇಲ್ಲ ಎನ್ನಲಾಗುತ್ತಿದೆ' ಎಂದು ಹೇಳಿದ್ದಾರೆ. ಹಾಗೆಯೇ, 'ಬಿಜೆಪಿಗೂ ಇದಕ್ಕೂ ಸಂಬಂಧವಿಲ್ಲ ಎಂಬುದನ್ನು ಸ್ಪಷ್ಟಪಡಿಸಲು ಬಯಸುತ್ತೇನೆ' ಎಂದಿದ್ದಾರೆ.

ದೆಹಲಿ ಸೋಲಿನ ಬೆನ್ನಲ್ಲೇ, ಪಂಜಾಬ್‌ ಎಎಪಿ ಘಟಕದಲ್ಲಿ ಭಿನ್ನಮತ ಆರಂಭವಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಹೀಗಾಗಿ, ಕೇಜ್ರಿವಾಲ್ ಅವರು ಸಿಎಂ ಮಾನ್, ಸಚಿವರು ಮತ್ತು ಶಾಸಕರೊಂದಿಗೆ ಸಭೆ ನಡೆಸಿದ್ದಾರೆ. ದೆಹಲಿಯಲ್ಲಿ ಎದುರಾದ ಹಿನ್ನಡೆ ಮತ್ತು 2027ರಲ್ಲಿ ನಡೆಯುವ ಪಂಜಾಬ್ ವಿಧಾನಸಭೆ ಚುನಾವಣೆಗೆ ಸಿದ್ಧತೆ ಕೈಗೊಳ್ಳುವ ಬಗ್ಗೆ ಚರ್ಚಿಸಲಾಗಿದೆ.

ADVERTISEMENT

ಸಭೆ ಬಳಿಕ ಕೇಜ್ರಿವಾಲ್‌ ಅವರು, ಎಎಪಿಯಲ್ಲಿನ ಭಿನ್ನಮತ ವದಂತಿಯನ್ನು ತಳ್ಳಿಹಾಕಿದ್ದಾರೆ.

70 ಸದಸ್ಯ ಬಲದ ದೆಹಲಿ ವಿಧಾನಸಭಾ ಚುನಾವಣೆಗೆ ಫೆಬ್ರುವರಿ 5ರಂದು ಮತದಾನವಾಗಿತ್ತು. ಫೆಬ್ರುವರಿ 8ರಂದು ಫಲಿತಾಂಶ ಪ್ರಕಟವಾಗಿದೆ.

2015ರಲ್ಲಿ ಮೂರು ಮತ್ತು 2020ರಲ್ಲಿ ಎಂಟು ಸ್ಥಾನಗಳಲ್ಲಷ್ಟೇ ಗೆದ್ದಿದ್ದ ಬಿಜೆಪಿ ಈ ಭಾರಿ, 48 ಕ್ಷೇತ್ರಗಳನ್ನು ಜಯಿಸಿ ಭಾರಿ ಬಹುಮತ ಸಾಧಿಸಿದೆ. ಕಳೆದೆರಡು ಚುನಾವಣೆಗಳಲ್ಲಿ ಕ್ರಮವಾಗಿ 67 ಹಾಗೂ 62 ಸ್ಥಾನಗಳಲ್ಲಿ ವಿಜಯದ ಕೇಕೆ ಹಾಕಿದ್ದ ಎಎಪಿಗೆ, ಈ ಸಲ ದಕ್ಕಿರುವುದು 22 ಸ್ಥಾನಗಳಷ್ಟೇ. ಭಾರಿ ಕಸರತ್ತು ನಡೆಸಿದ್ದರ ಹೊರತಾಗಿಯೂ ಕಾಂಗ್ರೆಸ್‌ ಪಕ್ಷ ಸತತ ಮೂರನೇ ಬಾರಿಗೆ ಶೂನ್ಯ ಸಾಧನೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.