ಹೈದರಾಬಾದ್: ಭಾರತದಿಂದ ಆಮದು ಮಾಡಿಕೊಳ್ಳುವ ಉತ್ಪನ್ನಗಳ ಮೇಲೆ ಶೇ 50ರಷ್ಟು ತೆರಿಗೆ ವಿಧಿಸುವ ಅಮೆರಿಕದ ಕ್ರಮವು ಬುಧವಾರದಿಂದ ಜಾರಿಗೆ ಬರುತ್ತಿದ್ದು, ದೇಶದ ಸ್ಫಟಿಕಶಿಲೆ ಉದ್ಯಮ ಆತಂಕಕ್ಕೆ ಒಳಗಾಗಿದೆ.
ಅಮೆರಿಕದ ಈ ಕ್ರಮದಿಂದ ದೇಶೀಯ ಸ್ಫಟಿಕಶಿಲೆ ಉದ್ಯಮ ಎದುರಿಸುವ ಆರ್ಥಿಕ ಕುಸಿತ ತಡೆಗಟ್ಟಲು ಸರ್ಕಾರ ತುರ್ತಾಗಿ ಹಸ್ತಕ್ಷೇಪ ಮಾಡಬೇಕು ಎಂದು ಭಾರತೀಯ ಸ್ಫಟಿಕಶಿಲೆ ತಯಾರಕರ ಒಕ್ಕೂಟವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.
ಈ ವಲಯದಲ್ಲಿ ಉದ್ದಿಮೆದಾರರು ಅಂದಾಜು ₹5,000 ಕೋಟಿಗೂ ಹೆಚ್ಚು ಹೂಡಿಕೆ ಮಾಡಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಅಮೆರಿಕದಲ್ಲಿ ಮಾರುಕಟ್ಟೆ ಕಂಡುಕೊಂಡಿದ್ದ ಈ ವಲಯವು ಹೆಚ್ಚುವರಿ ಸುಂಕದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ತಕ್ಷಣವೇ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡಿ ಸಮಗ್ರ ಪರಿಹಾರ ನೀಡಬೇಕು ಎಂದು ಒಕ್ಕೂಟವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೋರಿಕೆ ಸಲ್ಲಿಸಿದೆ.
ಸಾಲದ ಕಂತುಗಳ ಮರುಪಾವತಿ, ಬಡ್ಡಿ ಪಾವತಿಯನ್ನು ಮೂರು ವರ್ಷಗಳವರೆಗೆ ತಡೆ ನೀಡಬೇಕು, ಸ್ಪಟಿಕ ಶಿಲೆ ಮೇಲ್ಮೈ ಉತ್ಪನ್ನಗಳ ಮೇಲಿನ ಜಿಎಸ್‌ಟಿ ಅನ್ನು ಈಗಿನ ಶೇ 18ರಿಂದ ಶೇ 5ಕ್ಕೆ ಇಳಿಸುವುದೂ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒಕ್ಕೂಟ ಕೋರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.