ನವದೆಹಲಿ: ರೈಲು ಮತ್ತು ರೈಲು ನಿಲ್ದಾಣಗಳಲ್ಲಿ ಉಂಟಾಗುವ ವೈದ್ಯಕೀಯ ತುರ್ತು ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು 16 ಲಕ್ಷಕ್ಕೂ ಅಧಿಕ ಉದ್ಯೋಗಿಗಳಿಗೆ, ಮೂರು ವರ್ಷ ತರಬೇತಿ ನೀಡಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಲೋಕಸಭೆಗೆ ಬುಧವಾರ ತಿಳಿಸಿದ್ದಾರೆ.
ರೈಲು/ನಿಲ್ದಾಣಗಳಲ್ಲಿನ ತುರ್ತು ವೈದ್ಯಕೀಯ ಕೇಂದ್ರಗಳ ಕುರಿತು ಕೇಳಲಾದ ಪ್ರಶ್ನೆಯೊಂದಕ್ಕೆ ವೈಷ್ಣವ್ ಲಿಖಿತ ಉತ್ತರ ನೀಡಿದ್ದಾರೆ. ‘ರೈಲು ಮತ್ತು ರೈಲು ನಿಲ್ದಾಣಗಳಲ್ಲಿನ ವೈದ್ಯಕೀಯ ಸೌಲಭ್ಯಗಳನ್ನು ಸುಪ್ರೀಂ ಕೋರ್ಟ್ ಪರಿಶೀಲಿಸಿದೆ. ನ್ಯಾಯಾಲಯದ ಆದೇಶದ ಮೇರೆಗೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್) ತಜ್ಞರ ಸಮಿತಿಯನ್ನು ರಚಿಸಲಾಗಿದೆ’ ಎಂದಿದ್ದಾರೆ.
‘ಸಮಿತಿಯ ತಜ್ಞರ ಶಿಫಾರಸಿನಂತೆ, ಜೀವ ರಕ್ಷಕ ಔಷಧಗಳು, ವೈದ್ಯಕೀಯ ಉಪಕರಣಗಳು ಹಾಗೂ ಆಮ್ಲಜನಕ ಸಿಲಿಂಡರ್‌ಗಳನ್ನು ಒಳಗೊಂಡ ಚಿಕಿತ್ಸಾ ಪೆಟ್ಟಿಗೆಯನ್ನು ಎಲ್ಲಾ ರೈಲು/ನಿಲ್ದಾಣಗಳಿಗೆ ಒದಗಿಸಲು ಸೂಚಿಸಲಾಗಿದೆ. ಗಾಯಾಳು ಅಥವಾ ಅಸ್ವಸ್ಥ ಪ್ರಯಾಣಿಕರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್ ವ್ಯವಸ್ಥೆಯೂ ಲಭ್ಯವಿದೆ’ ಎಂದು ತಿಳಿಸಿದ್ದಾರೆ.
ಟಿಕೆಟ್ ಪರೀಕ್ಷಕರು, ಭದ್ರತಾ ಸಿಬ್ಬಂದಿ, ಸ್ಟೇಷನ್ ಮಾಸ್ಟರ್‌ಗಳು ಹಾಗೂ ಮೇಲ್ವಿಚಾರಕರು ಸೇರಿದಂತೆ ಇತರ ಉದ್ಯೋಗಿಗಳಿಗೆ ಪ್ರಥಮ ಚಿಕಿತ್ಸೆ ನೀಡುವ ಕುರಿತು ತರಬೇತಿ ನೀಡಲಾಗಿದೆ. 2022ರ ಏಪ್ರಿಲ್ 1ರಿಂದ 2025ರ ಜೂನ್ 30ರವರೆಗೆ 16,14,748 ಉದ್ಯೋಗಿಗಳಿಗೆ ತರಬೇತಿ ನೀಡಲಾಗಿದೆ. ಹತ್ತಿರದ ಆಸ್ಪತ್ರೆಗಳು ಮತ್ತು ವೈದ್ಯರ ಪಟ್ಟಿ ಹಾಗೂ ಅವರ ದೂರವಾಣಿ ಸಂಖ್ಯೆಯು ಎಲ್ಲಾ ನಿಲ್ದಾಣಗಳಲ್ಲಿ ಲಭ್ಯವಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.