
ಜೆಫ್ರಿ ಎಪ್‌ಸ್ಟೈನ್
ಜೆಫ್ರಿ ಎಪ್‌ಸ್ಟೈನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ದಾಖಲೆಗಳನ್ನು ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿದೆ. ಇದರಲ್ಲಿ ಭಾರತೀಯ ಯುವತಿಯೊಬ್ಬಳು ಇರುವುದು ಬಹಿರಂಗವಾಗಿದೆ.
2020ರ ಜನವರಿ 13ರಂದು ಬಿಡುಗಡೆಯಾದ ಆಂತರಿಕ ಇಮೇಲ್‌ನ ಪ್ರಕಾರ, ಎಪ್‌ಸ್ಟೈನ್ ಫೈಲ್‌ನ ಸಂತ್ರಸ್ತರಿಗೆ ನೀಡುವ ನಿಧಿಯನ್ನು ಯುವತಿಗೆ ಒದಗಿಸುವ ಉದ್ದೇಶದಿಂದಾಗಿ ಅಮೆರಿಕದ ಆಧಿಕಾರಿಗಳು ಭಾರತೀಯ ಯುವತಿಯನ್ನು ಪತ್ತೆ ಮಾಡಲು ಮುಂದಾಗಿದ್ದಾರೆ.
‘ಎಪ್‌ಸ್ಟೀನ್ ಸಂತ್ರಸ್ತರು’ ಎಂಬ ಶೀರ್ಷಿಕೆಯ ಇಮೇಲ್‌ನಲ್ಲಿ, ಭಾರತೀಯ ಮೂಲದ ಯುವತಿಯ ವಿಳಾಸ ಮತ್ತು ಸಂಪರ್ಕದ ವಿವರಗಳನ್ನು ಪಡೆಯಲು ಭಾರತದಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಜೊತೆ ಅಧಿಕಾರಿಗಳು ಮಾತುಕತೆನಡೆಸಿದ್ದಾರೆ. ಯುವತಿಯ ಮಾಹಿತಿ ಸಿಕ್ಕರೆ ಅದನ್ನು ಗೌಪ್ಯವಾಗಿಡುವುದಾಗಿಯೂ ತಿಳಿಸಿದ್ದಾರೆ.
ದಿ ಪಯೋನೀರ್ ವರದಿಯ ಪ್ರಕಾರ, ‘ಅಮೆರಿಕದ ಅಧಿಕಾರಿಗಳು ಎಪ್‌ಸ್ಟೈನ್ ಫೈಲ್ ಸಂತ್ರಸ್ತರಿಗೆ ಒದಗಿಸಲಾಗುವ ಪರಿಹಾರ ವಿಧಾನಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ ಹಾಗೂ ಸಂತ್ರಸ್ತರಿಗೆ ನೀಡುವ ಪರಿಹಾರದ ಕುರಿತು ಉಲ್ಲೇಖಿಸಿದ್ದಾರೆ. ಜೊತೆಗೆ ಎಫ್‌ಬಿಐಗೆ ಸಲ್ಲಿಸಬೇಕಾದ ದಾಖಲೆಗಳು, ಅರ್ಜಿಯ ನಮೂನೆಯನ್ನು ರವಾನಿಸುವಂತೆ ಅಧಿಕಾರಿಗಳಿಗೆ ಕೇಳಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದರ ಜೊತೆಗೆ ಅರ್ಹ ಸಂತ್ರಸ್ತರಿಗೆ ತುರ್ತು ಸಹಾಯದ ಅಡಿಯಲ್ಲಿ ಚಿಕಿತ್ಸೆಯ ಸಮಯದಲ್ಲಿ ಸಹಾಯ ಮಾಡುವ ಕುರಿತ ಉಲ್ಲೇಖವಿದೆ.
ಯುಎಸ್ ನ್ಯಾಯಾಂಗ ಇಲಾಖೆಯು 'EFTA 00038425' ಸಂಖ್ಯೆಯ ಅಡಿಯಲ್ಲಿ ಭಾರತೀಯ ಸಂತ್ರಸ್ತೆಯ ಕುರಿತಾದ ಮಾಹಿತಿ ನೀಡಿದೆ. ಅದರ ಅನ್ವಯ ‘ಭಾರತದಲ್ಲಿರುವ ಸಂತ್ರಸ್ತ ವ್ಯಕ್ತಿಯ ಕುರಿತು, ಅವರ ವಿಳಾಸ ಮತ್ತು ಸಂಪರ್ಕ ಮಾಹಿತಿಯನ್ನು ನಮಗೆ ನೀಡಿದರೆ, ನಾವು ಅಲ್ಲಿರುವ ನಮ್ಮ ರಾಯಭಾರ ಕಚೇರಿಯ ಸಹೋದ್ಯೋಗಿಗಳೊಂದಿಗೆ ಸಮನ್ವಯ ಸಾಧಿಸುತ್ತೇವೆ. ನಿಮಗೆ ಯಾವುದೇ ಹೆಚ್ಚುವರಿ ಪ್ರಶ್ನೆಗಳಿದ್ದರೆ ದಯವಿಟ್ಟು ನಮಗೆ ಕರೆ ಮಾಡಿ’ ಎಂದಿದ್ದಾರೆ.
2019ರ ಆಗಸ್ಟ್‌ನಲ್ಲಿ ಅಪ್ರಾಪ್ತ ವಯಸ್ಸಿನ ಹುಡುಗಿಯರ ಲೈಂಗಿಕ ಕಳ್ಳಸಾಗಣೆ ಆರೋಪದಡಿ ವಿಚಾರಣೆ ನಡೆಯುತ್ತಿರುವಾಗ ಜೆಫ್ರಿ ಎಪ್‌ಸ್ಟೈನ್ ಜೈಲಿನಲ್ಲಿ ನಿಧನರಾಗುತ್ತಾರೆ. ಎಪ್‌ಸ್ಟೀನ್ ನಿಧನವಾಗುವ ಕೆಲವೇ ತಿಂಗಳುಗಳ ಮೊದಲು ಭಾರತೀಯ ಯುವತಿಯ ಮಾಹಿತಿ ಹೊರಬಿದ್ದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.