ADVERTISEMENT

ಇಂಡಿಯಾಸ್ ಗಾಟ್‌ ಲೇಟೆಂಟ್‌ ಕಾರ್ಯಕ್ರಮ ಪ್ರಸಾರಕ್ಕೆ ಅಲಹಾಬಾದಿಯಾಗೆ SC ಅನುಮತಿ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2025, 11:39 IST
Last Updated 3 ಮಾರ್ಚ್ 2025, 11:39 IST
<div class="paragraphs"><p>ರಣವೀರ್&nbsp;ಅಲಹಾಬಾದಿಯಾ, ಸುಪ್ರೀಂ ಕೋರ್ಟ್‌</p></div>

ರಣವೀರ್ ಅಲಹಾಬಾದಿಯಾ, ಸುಪ್ರೀಂ ಕೋರ್ಟ್‌

   

ನವದೆಹಲಿ: ಯೂಟ್ಯೂಬರ್‌ ರಣವೀರ್ ಅಲಹಾಬಾದಿಯಾ ಅವರ ‘ದಿ ರಣವೀರ್‌ ಶೋ’ ಕಾರ್ಯಕ್ರಮ ಪ್ರಸಾರಕ್ಕೆ ಸೋಮವಾರ ಅನುಮತಿ ನೀಡಿರುವ ಸುಪ್ರೀಂ ಕೋರ್ಟ್, ‘ನೈತಿಕತೆ ಮತ್ತು ಸಭ್ಯತೆ’ ಕಾಪಾಡಿಕೊಂಡು ಎಲ್ಲಾ ವರ್ಗದವರನ್ನೂ ಗಮನದಲ್ಲಿಟ್ಟುಕೊಳ್ಳುವಂತೆ ತಾಕೀತು ಮಾಡಿದೆ.

‘ಈ ಕಾರ್ಯಕ್ರಮವೇ ನನ್ನ ದುಡಿಮೆಯ ದಾರಿ. 280 ನೌಕರರು ತಮ್ಮ ಜೀವನೋಪಾಯಕ್ಕಾಗಿ ಈ ಕಾರ್ಯಕ್ರಮವನ್ನೇ ನೆಚ್ಚಿಕೊಂಡಿದ್ದಾರೆ. ಹೀಗಾಗಿ ಕಾರ್ಯಕ್ರಮ ಪ್ರಸಾರಕ್ಕೆ ಅನುಮತಿ ನೀಡಬೇಕು’ ಎಂದು ಅಲಹಾಬಾದಿಯಾ ನ್ಯಾಯಾಲಯವನ್ನು ಕೋರಿದ್ದರು.

ADVERTISEMENT

‘ಇಂಡಿಯಾಸ್‌ ಗಾಟ್‌ ಲೇಟೆಂಟ್’ ಕಾರ್ಯಕ್ರಮದಲ್ಲಿ ಆಡಿದ ಅಶ್ಲೀಲ ಮಾತುಗಳ ಸಂಬಂಧ ದಾಖಲಾಗಿರುವ ಎಫ್‌ಐಆರ್‌ಗಳ ಕುರಿತು ವಿಚಾರಣೆ ನಡೆಸಿದ ನ್ಯಾ. ಸೂರ್ಯ ಕಾಂತ್ ಹಾಗೂ ನ್ಯಾ. ಎನ್. ಕೋಟಿಶ್ವರ ಸಿಂಗ್‌ ಅವರು, ಕಾರ್ಯಕ್ರಮ ಪ್ರಸಾರಕ್ಕೆ ಅನುಮತಿ ನೀಡುವುದರ ಜತೆಗೆ, ಬಂಧಿಸದಂತೆ ನೀಡಿದ್ದ ಮಧ್ಯಂತರ ರಕ್ಷಣೆಯ ಅವಧಿಯನ್ನೂ ಮುಂದಿನ ಆದೇಶದವರೆಗೆ ವಿಸ್ತರಿಸಿತು. 

ಕೇಂದ್ರ ಸರ್ಕಾರ, ಮಹಾರಾಷ್ಟ್ರ, ಅಸ್ಸಾಂ ಹಾಗೂ ಒಡಿಶಾ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ‘ವಿವಾದಾತ್ಮಕ ಯುಟ್ಯೂಬ್ ಕಾರ್ಯಕ್ರಮ ‘ಇಂಡಿಯಾ ಗಾಟ್ ಲೇಟೆಂಟ್‌’ನಲ್ಲಿ ಅಸಭ್ಯ ಹಾಗೂ ವಿಕೃತವಾಗಿದೆ. ಹೀಗಾಗಿ ಕಾರ್ಯಕ್ರಮ ಪ್ರಸಾರಕ್ಕೆ ನೀಡಿರುವ ತಡೆಯನ್ನು ಯಾವುದೇ ಕಾರಣಕ್ಕೂ ಸುಪ್ರೀಂ ಕೋರ್ಟ್ ಹಿಂಪಡೆಯಬಾರದು. ಕೆಲಕಾಲ ಅವರು ಸುಮ್ಮನಿರಲಿ’ ಎಂದು ಕೋರಿದರು.

ಅಲಾಹಾಬಾದಿಯಾ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿನವ ಚಂದ್ರಚೂಡ್‌, ‘ಮೂಲಭೂತ ಹಕ್ಕುಗಳು ಎಲ್ಲವನ್ನೂ ಒಂದೇ ಬಾರಿ ನೀಡದೆ, ಕೆಲವೊಂದು ನಿರ್ಬಂಧಗಳನ್ನೂ ಹೇರಲಾಗಿದೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಸೂರ್ಯ ಕಾಂತ್, ‘ಆರೋಪಿಯು ಕೆನಡಾಗೆ ತೆರಳಿ ಪ್ರಕರಣದ ಕುರಿತು ಮಾತನಾಡಿದ್ದಾರೆ. ಈ ಯುವಪೀಳಿಗೆಗೆ ನಾವು ಹಳೇ ಕಾಲದವರು ಎಂಬ ಭಾವನೆ ಇದೆ. ನಮ್ಮ ನ್ಯಾಯಾಲಯವನ್ನು ಹಗುರವಾಗಿ ಪರಿಗಣಿಸಬೇಡಿ. ಇವರನ್ನೆಲ್ಲಾ ಹೇಗೆ ನಿಭಾಯಿಸಬೇಕು ಎಂಬುದು ನಮಗೆ ಗೊತ್ತಿಗೆ’ ಎಂದಿದ್ದಾರೆ.

ಕಾರ್ಯಕ್ರಮ ಪ್ರಸಾರಕ್ಕೆ ಅನುಮತಿ ನೀಡಿರುವ ಸುಪ್ರೀಂ ಕೋರ್ಟ್, ಪ್ರಕರಣ ಕುರಿತು ಯಾವುದೇ ಹೇಳಿಕೆಯನ್ನು ತಮ್ಮ ಕಾರ್ಯಕ್ರಮದಲ್ಲಿ ನೀಡದಂತೆ ನಿರ್ಬಂಧ ಹೇರಿದೆ.

ಯೂಟ್ಯೂಬರ್‌ ರಣವೀರ್ ಅಲಾಹಾಬಾದಿಯಾ ಅವರು ಇಂಡಿಯಾಸ್ ಗಾಟ್‌ ಲೇಟೆಂಟ್ ಕಾರ್ಯಕ್ರಮದಲ್ಲಿ ಸಮಯ್ ರೈನಾ ಅವರೊಂದಿಗಿನ ಕಾರ್ಯಕ್ರಮದಲ್ಲಿ ಪಾಲಕರು ಮತ್ತು ಲೈಂಗಿಕತೆ ಕುರಿತು ಹೇಳಿಕೆ ನೀಡಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಇವರ ಹೇಳಿಕೆ ವಿರುದ್ಧ ದೇಶದ ಹಲವು ರಾಜ್ಯಗಳಲ್ಲಿ ಎಫ್‌ಐಆರ್‌ ದಾಖಲಾಗಿದ್ದವು.

‘ಒಂದಿಷ್ಟು ಜವಾಬ್ದಾರಿ ಇರಬೇಕು. ಇಂತಹ ವರ್ತನೆಗಳನ್ನು ಖಂಡಿಸಬೇಕು... ಇದು ವ್ಯಕ್ತಿಯೊಬ್ಬನ ನೈತಿಕತೆಗೆ ಸಂಬಂಧಿಸಿದ ಪ್ರಶ್ನೆಯಲ್ಲ. ಆತ ತಂದೆ–ತಾಯಿಯನ್ನು ಅವಮಾನಿಸುತ್ತಿದ್ದಾನೆ. ಈ ವ್ಯಕ್ತಿಯ ಮನಸ್ಸಿನಲ್ಲಿ ಏನೋ ಕೊಳಕಿದೆ, ಅದನ್ನು ಈ ಕಾರ್ಯಕ್ರಮದ ಮೂಲಕ ಹರಡಲಾಗುತ್ತಿದೆ’ ಎಂದು ಈ ಹಿಂದಿನ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್. ಕೋಟೀಶ್ವರ ಸಿಂಗ್ ಅವರು ಇರುವ ಪೀಠವು ಖಾರವಾಗಿ ಹೇಳಿತ್ತು.

‘ರಣವೀರ್ ಅವರು ತಮ್ಮ ಪಾಲಕರಿಗೆ ಏನು ಮಾಡಿದ್ದಾರೋ ಅದರ ಬಗ್ಗೆ ನಾಚಿಕೆಪಟ್ಟುಕೊಳ್ಳಬೇಕು. ನಾವು ದಂತಗೋಪುರದಲ್ಲಿ ಕುಳಿತಿಲ್ಲ. ಅವರು ಆಸ್ಟ್ರೇಲಿಯಾದ ಕಾರ್ಯಕ್ರಮವೊಂದನ್ನು ಹೇಗೆ ನಕಲು ಮಾಡಿದ್ದಾರೆ ಎಂಬುದು ನಮಗೆ ತಿಳಿದಿದೆ. ಆದರೆ ಇಂತಹ ಕಾರ್ಯಕ್ರಮಗಳಲ್ಲಿ ಒಂದು ಎಚ್ಚರಿಕೆಯೂ ಇದೆ’ ಎಂದು ಪೀಠ ಹೇಳಿತ್ತು.

ಸಾಮಾಜಿಕ ಮಾದ್ಯಮಗಳ ಮೂಲಕ ಪ್ರಸಾರ ಮಾಡುವ ವಿಷಯಗಳ ಮೇಲೆ ನಿಯಂತ್ರಣ ಕ್ರಮಗಳಿಗೆ ಸಂಬಂಧಿಸಿದ ಕರಡು ಸಿದ್ಧಪಡಿಸಲು ಕೇಂದ್ರ ಸರ್ಕಾರ ನಿರ್ದೇಶಿಸಿದೆ. ಇದನ್ನು ಸಿದ್ಧಪಡಿಸಿ ಸಾರ್ವಜನಿಕ ವೇದಿಕೆಯಲ್ಲಿ ಪ್ರಕಟಿಸಬೇಕು. ಬರುವ ಸಲಹೆಗಳನ್ನು ಸಂಗ್ರಹಿಸಬೇಕು ಎಂದು ಕೇಂದ್ರ ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.