ಇಂಡಿಗೊ ವಿಮಾನ
ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಗುವಾಹಟಿಯಿಂದ ಚೆನ್ನೈಗೆ ಹೊರಟಿದ್ದ ಇಂಡಿಗೊ ವಿಮಾನವು ‘ಇಂಧನ ಕೊರತೆ’ಯಿಂದಾಗಿ ಗುರುವಾರ ರಾತ್ರಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು.
ಗುವಾಹಟಿಯಿಂದ 168 ಪ್ರಯಾಣಿಕರೊಂದಿಗೆ ಟೇಕಾಫ್ ಆಗಿದ್ದ ಇಂಡಿಗೊ ಏರ್‌ಬಸ್ ಎ–312 ವಿಮಾನವು ಚೆನ್ನೈ ವಿಮಾನ ನಿಲ್ದಾಣದಲ್ಲಿ ರಾತ್ರಿ 7.45ಕ್ಕೆ ಇಳಿಯಬೇಕಿತ್ತು. ಆದರೆ, ದಟ್ಟಣೆಯಿಂದಾಗಿ ನಿಗದಿತ ಸಮಯದಲ್ಲಿ ಚೆನ್ನೈನಲ್ಲಿ ಲ್ಯಾಂಡಿಂಗ್ ಸಾಧ್ಯವಾಗದ ಕಾರಣ ಆಗಸದಲ್ಲೇ ಸುತ್ತುವಂತೆ ಸೂಚಿಸಲಾಯಿತು.
ವಿಮಾನದಲ್ಲಿ ಇಂಧನ ಪ್ರಮಾಣ ತೀರಾ ಕಡಿಮೆ ಇದ್ದಿದ್ದರಿಂದ ಪೈಲಟ್ ತುರ್ತು ಸಮಸ್ಯೆಯ ಸಂದೇಶ (‘ಮೇಡೇ’ ಕರೆ) ನೀಡಿದರು. ತಕ್ಷಣವೇ ಬೆಂಗಳೂರು ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡುವಂತೆ ‘ಎಟಿಸಿ’ ಸೂಚಿಸಿತು. ವಿಮಾನವನ್ನು 8.15ಕ್ಕೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪೈಲಟ್ ಸುರಕ್ಷಿತವಾಗಿ ಇಳಿಸಿದರು ಎಂದು ಇಂಡಿಗೊ ವಿಮಾನದ ವಕ್ತಾರರೊಬ್ಬರು ಮಾಹಿತಿ ನೀಡಿದ್ದಾರೆ.
‘ವಿಮಾನ ತುರ್ತು ಭೂಸ್ಪರ್ಶದ ಸಂದರ್ಭದಲ್ಲಿ ಅನುಸರಿಸಬೇಕಾದ ಎಲ್ಲ ಶಿಷ್ಟಾಚಾರಗಳನ್ನು ಪಾಲಿಸಲಾಗಿತ್ತು. ಆಂಬುಲೆನ್ಸ್, ವೈದ್ಯಕೀಯ ಮತ್ತು ಅಗ್ನಿಶಾಮಕ ಸಿಬ್ಬಂದಿ ಸನ್ನದ್ಧವಾಗಿದ್ದರು’ ಎಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.
ಗುರುವಾರ ರಾತ್ರಿ 10.24ಕ್ಕೆ ಮರಳಿ ಈ ವಿಮಾನವು ಬೆಂಗಳೂರಿನಿಂದ ಚೆನ್ನೈಗೆ ಪ್ರಯಾಣಿಸಿತು ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.