ನಾಗ್ಪುರದಲ್ಲಿ ಇಂಡಿಗೊ ವಿಮಾನ ತುರ್ತು ಭೂಸ್ಪರ್ಶ
(ಪಿಟಿಐ ಚಿತ್ರ)
ಮುಂಬೈ: ಮಸ್ಕತ್‌ನಿಂದ ಕೊಚ್ಚಿ ಮಾರ್ಗವಾಗಿ ದೆಹಲಿಗೆ ಹೋಗುತ್ತಿದ್ದ ಇಂಡಿಗೊ ವಿಮಾನಕ್ಕೆ ಇಂದು (ಮಂಗಳವಾರ) ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ಕೊಚ್ಚಿನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಸಿಐಎಎಲ್) ತಿಳಿಸಿದೆ.
ವಿಮಾನದಲ್ಲಿ 157 ಪ್ರಯಾಣಿಕರು ಹಾಗೂ ಆರು ಸಿಬ್ಬಂದಿ ಸಂಚರಿಸುತ್ತಿದ್ದರು.
ಇಂಡಿಗೊ ವಿಮಾನದ ಅಧಿಕೃತ ಇ-ಮೇಲ್ ಖಾತೆಗೆ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೂಡಲೇ ಬಾಂಬ್ ಬೆದರಿಕೆ ಪರಿಶೀಲನಾ ಸಮಿತಿಯನ್ನು (ಬಿಟಿಎಸಿ) ಸಂಪರ್ಕಿಸಲಾಯಿತು. ಬಳಿಕ ವಿಮಾನ ತಪಾಸಣೆಗಾಗಿ ನಾಗ್ಪುರ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು.
ವಿಮಾನವನ್ನು ಸಂಪೂರ್ಣವಾಗಿ ಪರಿಶೀಲಿಸಿದ ಬಳಿಕವಷ್ಟೇ ದೆಹಲಿಯತ್ತ ಪ್ರಯಾಣ ಬೆಳೆಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಗದೊಂದು ಘಟನೆಯಲ್ಲಿ ಇಂದು (ಮಂಗಳವಾರ) ಮಧ್ಯಾಹ್ನ ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವನ್ನು ಕಾರ್ಯಾಚರಣೆ ಸಮಸ್ಯೆಗಳಿಂದಾಗಿ ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಸ್ಯಾನ್ ಫ್ರಾನ್ಸಿಸ್ಕೊದಿಂದ ಮುಂಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದ ಒಂದು ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿದ್ದರಿಂದ ಕೋಲ್ಕತ್ತ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.