ADVERTISEMENT

ಇಂಡಿಗೊ ಮ್ಯಾನೇಜರ್‌ ಹತ್ಯೆ: ನಿತೀಶ್‌ ಸರ್ಕಾರದ ವಿರುದ್ಧ ಟೀಕೆ

ಪಿಟಿಐ
Published 13 ಜನವರಿ 2021, 15:31 IST
Last Updated 13 ಜನವರಿ 2021, 15:31 IST
ರೂಪೇಶ್‌ ಸಿಂಗ್‌
ರೂಪೇಶ್‌ ಸಿಂಗ್‌   

ಪಟ್ನಾ: ಇಂಡಿಗೊ ಸಂಸ್ಥೆಯ ವಿಮಾನ ನಿಲ್ದಾಣದ ವ್ಯವಸ್ಥಾಪಕ ರೂಪೇಶ್‌ಕುಮಾರ್‌ ಸಿಂಗ್‌ (40) ಹತ್ಯೆ ಪ್ರಕರಣವು ಬಿಹಾರದಲ್ಲಿ ರಾಜಕೀಯ ಮುಖಂಡರ ವಾಗ್ವಾದಕ್ಕೆ ಕಾರಣವಾಗಿದೆ.

ರೂಪೇಶ್‌ ಅವರನ್ನು ದುಷ್ಕರ್ಮಿಗಳು ಮಂಗಳವಾರ ಸಂಜೆ ಗುಂಡಿಕ್ಕಿ ಹತ್ಯೆ ಮಾಡಿದ್ದರು. ಈ ಕೃತ್ಯವನ್ನು ಖಂಡಿಸಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಆಡಳಿತಾರೂಢ ಜೆಡಿಯು–ಬಿಜೆಪಿ ಮೈತ್ರಿಕೂಟ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ಕೆಲಸ ಮುಗಿಸಿ ವಿಮಾನ ನಿಲ್ದಾಣದಿಂದ ಪುನೈಚಕ್‌ ಪ್ರದೇಶದಲ್ಲಿರುವ ತಮ್ಮ ನಿವಾಸಕ್ಕೆ ಎಸ್‌ಯುವಿ ಕಾರಿನಲ್ಲಿ ಬಂದಿದ್ದ ರೂಪೇಶ್‌ ಅವರು ಸಿಬ್ಬಂದಿಯು ಮನೆಯ ಮುಂದಿನ ಗೇಟ್‌ ತೆರೆಯುವುದನ್ನು ಎದುರು ನೋಡುತ್ತಿದ್ದರು. ಈ ವೇಳೆ ಬೈಕಿನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ರೂಪೇಶ್‌ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು. ಆ ರಸ್ತೆಯಲ್ಲಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗದಂತೆ ಅವರು ಮುಖಗಳನ್ನು ಮುಚ್ಚಿಕೊಂಡಿದ್ದರು’ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

‘ರೂಪೇಶ್‌ ಅವರ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದ ದುಷ್ಕರ್ಮಿಗಳು ಮಂಗಳವಾರ ವಿಮಾನ ನಿಲ್ದಾಣದಿಂದಲೇ ಅವರ ಕಾರನ್ನು ಹಿಂಬಾಲಿಸಿಕೊಂಡು ಮನೆಯವರೆಗೂ ಬಂದಿದ್ದರು. ಅವರು ಕೆಲ ಸುಳಿವುಗಳನ್ನು ಬಿಟ್ಟು ಹೋಗಿದ್ದಾರೆ. ಅದರ ಆಧಾರದಲ್ಲೇ ಅವರನ್ನು ಶೀಘ್ರವೇ ಬಂಧಿಸುತ್ತೇವೆ’ ಎಂದು ಡಿವೈಎಸ್‌ಪಿ ರಾಜೇಶ್‌ ಸಿಂಗ್‌ ಪ್ರಭಾಕರ್‌ ತಿಳಿಸಿದ್ದಾರೆ. ರಾಜೇಶ್‌ ಅವರು ಈ ಪ್ರಕರಣವನ್ನು ಭೇದಿಸಲು ರಚಿಸಲಾಗಿರುವ ವಿಶೇಷ ತನಿಖಾ ತಂಡದ ಸದಸ್ಯರೂ ಆಗಿದ್ದಾರೆ.

ರೂಪೇಶ್‌ ಅವರು ರಾಜಕೀಯ ಪಕ್ಷಗಳ ಪ್ರಭಾವಿ ಮುಖಂಡರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು ಎನ್ನಲಾಗಿದೆ. ಅವರಿಗೆ ಪತ್ನಿ ಮತ್ತು 10 ವರ್ಷದೊಳಗಿನ ಪ್ರಾಯದ ಇಬ್ಬರು ಪುತ್ರಿಯರಿದ್ದಾರೆ.

‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಇದರ ಹೊಣೆ ಹೊತ್ತು ನಿತೀಶ್‌ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಲಿ’ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಟ್ವೀಟ್‌ ಮಾಡಿದ್ದಾರೆ.

‘ನಿತೀಶ್‌ ಅವರು ಕಾನೂನು ಸುವ್ಯವಸ್ಥೆ ಮೇಲಿನ ನಿಯಂತ್ರಣವನ್ನು ಕಳೆದುಕೊಂಡಿರುವುದಕ್ಕೆ ಈ ಘಟನೆಯೇ ಸಾಕ್ಷಿ’ ಎಂದು ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತಾರಿಕ್‌ ಅನ್ವರ್‌ ಹೇಳಿದ್ದಾರೆ.

‘ನಿತೀಶ್‌ ಅವರು ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಬೇಕು. ರಾಜ್ಯದ ಪೊಲೀಸರು ಐದು ದಿನಗಳೊಳಗೆ ಪ್ರಕರಣ ಭೇದಿಸಲು ವಿಫಲರಾದರೆ, ಇದನ್ನು ಸಿಬಿಐಗೆ ವಹಿಸಬೇಕು’ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ವಿವೇಕ್‌ ಠಾಕೂರ್‌ ಒತ್ತಾಯಿಸಿದ್ದಾರೆ.

‘ರೂಪೇಶ್‌ ಅವರು ರಾಜ್ಯದ ಪ್ರಭಾವಿ ಮುಖಂಡರೊಂದಿಗೆ ನಿಕಟ ಸಂಪರ್ಕದಲ್ಲಿದ್ದರು. ಹೀಗಾಗಿ ಯಾವುದೇ ಒತ್ತಡಕ್ಕೆ ಮಣಿಯದೇ ಪ್ರಕರಣದ ತನಿಖೆ ನಡೆಸಬೇಕು’ ಎಂದು ಜನ ಅಧಿಕಾರಿ ಪಕ್ಷದ ಮುಖ್ಯಸ್ಥ ಪಪ್ಪು ಯಾದವ್‌ ಆಗ್ರಹಿಸಿದ್ದಾರೆ.

‘ರೂಪೇಶ್‌ ಹಾಗೂ ಅವರ ಕುಟುಂಬದವರು ನನಗೆ ತುಂಬಾ ಹಳೆಯ ಪರಿಚಯ. ಅವರು ಪಟ್ನಾಗೆ ವರ್ಗಾವಣೆಯಾಗುವ ಮುನ್ನ ಕೋಲ್ಕತ್ತದಲ್ಲಿ ಕೆಲಸ ಮಾಡುತ್ತಿದ್ದರು. ಅವರ ಬದುಕು ಹೀಗೆ ದುರಂತ ಅಂತ್ಯ ಕಾಣುತ್ತದೆ ಎಂದು ಖಂಡಿತವಾಗಿಯೂ ಭಾವಿಸಿರಲಿಲ್ಲ’ ಎಂದು ಬಿಜೆಪಿ ಸಂಸದ ಜನಾರ್ದನ್‌ ಸಿಂಗ್‌ ಸಿಗ್ರಿವಾಲ್‌ ತಿಳಿಸಿದ್ದಾರೆ.

***

ಯೋಗಿ ಮಾದರಿ ಅನುಸರಿಸಿ

ಪಟ್ನಾ: ಬಿಹಾರದಲ್ಲಿ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ನಿತೀಶ್‌ ಕುಮಾರ್‌ ಅವರು ಯೋಗಿ ಆದಿತ್ಯನಾಥ್ ಸರ್ಕಾರದ ಮಾದರಿಯನ್ನು ಅನುಸರಿಸಬೇಕು ಎಂದು ಬಿಜೆಪಿ ಸಲಹೆ ನೀಡಿದೆ.

‘ಉತ್ತರ ಪ್ರದೇಶದ ಹಾಗೆ ರಾಜ್ಯದಲ್ಲೂ ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡಬೇಕು. ಅಪರಾಧಿಗಳನ್ನು ಎನ್‌ಕೌಂಟರ್‌ ಮಾಡುವಂತೆ ಆದೇಶಿಸಬೇಕು’ ಎಂದು ಬಿಜೆಪಿಯ ಹಿರಿಯ ಶಾಸಕ ನಿತೀನ್‌ ನವೀನ್‌, ನಿತೀಶ್‌ ಅವರನ್ನು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.