ADVERTISEMENT

ಬಿರ್‌ಭೂಮ್‌ ಪ್ರಕರಣ: ಗಾಯಗೊಂಡಿದ್ದ ಮಹಿಳೆ ಸಾವು, ಮೃತರ ಸಂಖ್ಯೆ 9ಕ್ಕೆ ಏರಿಕೆ

ಪಿಟಿಐ
Published 28 ಮಾರ್ಚ್ 2022, 14:18 IST
Last Updated 28 ಮಾರ್ಚ್ 2022, 14:18 IST
ಸಿಎಫ್ಎಸ್ಎಸ್ ತಂಡದೊಂದಿಗೆ ತನಿಖೆ ನಡೆಸಿದ ಸಿಬಿಐ ಅಧಿಕಾರಿಗಳು
ಸಿಎಫ್ಎಸ್ಎಸ್ ತಂಡದೊಂದಿಗೆ ತನಿಖೆ ನಡೆಸಿದ ಸಿಬಿಐ ಅಧಿಕಾರಿಗಳು   

ರಾಮ್‌ಪುರಹಾಟ್‌: ಬಿರ್‌ಭೂಮ್‌ ಜಿಲ್ಲೆಯ ಬೋಗ್‌ತುಇ ಗ್ರಾಮದಲ್ಲಿ ನಡೆದ ಹಿಂಸಾಚಾರದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆಗೆ ಸ್ಪಂದಿಸದೆ ಇಂದು ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ಒಟ್ಟು ಮೃತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಂಭತ್ತು ಜನರ ಪೈಕಿ ಏಳು ಜನ ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದ್ದಾರೆ.

'ನಜೀಮಾ ಬಿಬಿ ಶೇ 65 ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದರು. ಕಳೆದ ರಾತ್ರಿ ಅವರ ಪರಿಸ್ಥಿತಿ ಹದಗೆಟ್ಟಿದ್ದರಿಂದ ರಾಮ್‌ಪುರಹಾಟ್‌ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೆಂಟಿಲೇಷನ್‌ನಲ್ಲಿ ಇಡಲಾಗಿದೆ. ಆದರೆ ಮುಂಜಾನೆ ಆಕೆ ಸಾವಿಗೀಡಾಗಿದ್ದಾರೆ' ಎಂದು ತಿಳಿಸಿದ್ದಾರೆ.

ADVERTISEMENT

ಬಾಲಕ ಸೇರಿದಂತೆ ಮತ್ತೊಬ್ಬ ವ್ಯಕ್ತಿ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಭಾನುವಾರ ಆಸ್ಪತ್ರೆಗೆ ಭೇಟಿ ನೀಡಿದ್ದರೂ ಕೂಡ ನಜೀಮಾ ಅವರ ಸ್ಥಿತಿ ಗಂಭೀರವಾಗಿದ್ದರಿಂದ ಹೇಳಿಕೆ ಪಡೆಯಲು ಸಾಧ್ಯವಾಗಿಲ್ಲ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಾರ್ಚ್ 24 ರಂದು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದರು.

ರಾಮ್‌ಪುರಹಾಟ್‌ನ ಪಂಚಾಯಿತಿಯ ಟಿಎಂಸಿ ಸದಸ್ಯನ ಹತ್ಯೆಯ ನಂತರ ಮಾರ್ಚ್ 21ರಂದು ಬೋಗ್‌ತುಇ ಗ್ರಾಮದ ಹತ್ತಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಹಚ್ಚಲಾಗಿತ್ತು. ಈ ಕೃತ್ಯದಲ್ಲಿ ಇಬ್ಬರು ಮಕ್ಕಳು, ಐವರು ಮಹಿಳೆಯರು ಸೇರಿ ಎಂಟು ಜನರನ್ನು ಸಜೀವವಾಗಿ ಸುಡಲಾಗಿತ್ತು. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಬಿರ್‌ಭೂಮ್‌ನಲ್ಲಿನ ಸಜೀವ ದಹನ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ ಕಲ್ಕತ್ತ ಹೈಕೋರ್ಟ್‌ ಶುಕ್ರವಾರ(ಮಾ.25) ಆದೇಶ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.