ADVERTISEMENT

ಅಂಬೇಡ್ಕರ್‌ಗೆ ಅವಮಾನ: ‘ಮಹಾ’ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲಗೆ ಮಸಿ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2022, 16:51 IST
Last Updated 10 ಡಿಸೆಂಬರ್ 2022, 16:51 IST
ಚಂದ್ರಕಾಂತ ಪಾಟೀಲಗೆ ಮಸಿ ಬಳಿಯುತ್ತಿರುವುದು
ಚಂದ್ರಕಾಂತ ಪಾಟೀಲಗೆ ಮಸಿ ಬಳಿಯುತ್ತಿರುವುದು    

ಬೆಳಗಾವಿ: ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ ಅವರ ಮುಖಕ್ಕೆಪುಣೆ ನಗರದಲ್ಲಿ ಶನಿವಾರ ವ್ಯಕ್ತಿಯೊಬ್ಬರು ಮಸಿ ಬಳಿದಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಸಚಿವ ಹೊರಗೆ ಬರುತ್ತಿದ್ದಂತೆಯೇ ಎದುರಿನಿಂದ ನುಗ್ಗಿದ ವ್ಯಕ್ತಿ ಚೀರಾಡುತ್ತ ಮುಖಕ್ಕೆ ಮಸಿ ಬಳಿದರು. ಏಕಾಏಕಿ ದಾಳಿಯಿಂದ ವಿಚಲಿತರಾದ ಸಚಿವ ಚಂದ್ರಕಾಂತ ಅವರು ಪೊಲೀಸರ ಆಶ್ರಯ ಪಡೆದರು.

ತಕ್ಷಣ ಧಾವಿಸಿದ ಪೊಲೀಸರು ಸಚಿವರನ್ನು ದೂರ ಸರಿಸಿ, ಆರೋಪಿಯನ್ನು ನೆಲಕ್ಕೆ ಕೆಡವಿ ಹಿಡಿದರು. ಇದರಿಂದಾಗಿ ಸ್ಥಳದಲ್ಲಿ ಸಂಜೆಯವರೆಗೂ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು ಎಂದು ಪುಣೆಯ ನಿವಾಸಿಗಳು ಮಾಹಿತಿ ನೀಡಿದರು.

ADVERTISEMENT

ಮಹಾರಾಷ್ಟ್ರದ ಪೈಠಾಣ ನಗರದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಸಚಿವ ಚಂದ್ರಕಾಂತ ಅವರು ಡಾ.ಬಿ.ಆರ್‌. ಅಂಬೇಡ್ಕರ್‌ ಹಾಗೂ ಜ್ಯೋತಿಬಾ ಫುಲೆ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಸಚಿವ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದವು. ಅದಕ್ಕೆ ಬೆಲೆ ಕೊಡದ ಸಚಿವ ‘ಧೈರ್ಯವಿದ್ದವರು ಮುಂದೆ ಬರುವಂತೆ’ ಸವಾಲು ಹಾಕಿದ್ದರು. ಹೀಗಾಗಿ, ಮಸಿ ಬಳಿಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬೆಳಗಾವಿಗೆ ಭೇಟಿ ನೀಡಿ, ಎಂಇಎಸ್‌ ನೇತೃತ್ವದಲ್ಲಿ ಮಹಾ ಸಮಾವೇಶ ಮಾಡಿಯೇ ಸಿದ್ಧ ಎಂದು ಪಟ್ಟು ಹಿಡಿಯುವ ಮೂಲಕ, ಚಂದ್ರಕಾಂತ ಪಾಟೀಲ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಶನಿವಾರ ಅವರ ಮುಖಕ್ಕೆ ಮಸಿ ಬಳಿದ ವಿಡಿಯೊ ತುಣುಕುಗಳು ಜಿಲ್ಲೆಯಲ್ಲಿಯೂ ಕಾಳ್ಗಿಚ್ಚಿನಂತೆ ಹರಿದಾಡಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.