ADVERTISEMENT

INSV ಕೌಂಡಿನ್ಯ: ಶಬ್ದ ಮಾಡುವ ಯಂತ್ರವಿಲ್ಲ, ಲೋಹ ಬಳಕೆಯೂ ಇಲ್ಲ; ನೌಕಾಪಡೆಯ ಈ ಹಡಗು

ಇ.ಎಸ್.ಸುಧೀಂದ್ರ ಪ್ರಸಾದ್
Published 31 ಡಿಸೆಂಬರ್ 2025, 9:18 IST
Last Updated 31 ಡಿಸೆಂಬರ್ 2025, 9:18 IST
<div class="paragraphs"><p>ಭಾರತೀಯ ನೌಕಾಪಡೆಯ ಕೌಂಡಿನ್ಯ</p></div>

ಭಾರತೀಯ ನೌಕಾಪಡೆಯ ಕೌಂಡಿನ್ಯ

   

ಎಕ್ಸ್ ಚಿತ್ರ

ಪೋರ್‌ಬಂದರ್‌: ಮರದಿಂದ ತಯಾರಿಸಿದ ಬೃಹತ್ ಹಡಗು, ವೇಗ ಹೆಚ್ಚಿಸುವ ಹಾಗೂ ತಗ್ಗಿಸುವ, ದಿಕ್ಕು ನಿರ್ಧರಿಸಲು ಎತ್ತರದ ಹಾಗೂ ಬೃಹದಾಕಾರದ ಬಟ್ಟೆಗಳಿಂದ ತಯಾರಿಸಿದ ನೌಕಾಪಟ, ಅವುಗಳನ್ನು ಕಟ್ಟಲು ಕತ್ತದ ಹಗ್ಗ... ಇವೆಲ್ಲವೂ 2ನೇ ಶತಮಾನದಲ್ಲಿ ಆರಂಭವಾದ ಭಾರತದ ಸಮುದ್ರಯಾನದಲ್ಲಿ ಬಳಕೆಯಾದ ಹಡಗಿನ ವಿನ್ಯಾಸ. ಅದೇ ಪ್ರಾಚೀನ ತಂತ್ರಜ್ಞಾನದಲ್ಲಿ ಸಿದ್ಧಗೊಂಡ ಹಡಗೊಂದನ್ನು ಭಾರತೀಯ ನೌಕಾಪಡೆ ಸಿದ್ಧಪಡಿಸಿದೆ.

ADVERTISEMENT

ಗುಜರಾತ್‌ನ ಪೋರ್‌ಬಂದರ್‌ನಿಂದ ತನ್ನ ಮೊದಲ ಯಾನ ಆರಂಭಿಸಿದ ಭಾರತೀಯ ನೌಕಾಪಡೆಯ ನೌಕಾಯಾನ ಹಡಗು (INSV) ಕೌಂಡಿನ್ಯ ತನ್ನ ಚೊಚ್ಚಲ ಯಾನವನ್ನು ಡಿ. 29ರಿಂದ ಆರಂಭಿಸಿದೆ. ಪೋರ್‌ಬಂದರ್‌ನಿಂದ ಹೊರಟ ಈ ಹಡಗು ಒಮಾನ್‌ನ ಮಸ್ಕತ್‌ವರೆಗೆ ಪ್ರಯಾಣಿಸಲಿದೆ. ಆಧುನಿಕ ಹಡಗಿನ ಬದಲು, ಪ್ರಾಚೀನ ಕಾಲದ ಈ ಹಡಗನ್ನು  ಅದೇ ವಿನ್ಯಾಸದಲ್ಲಿ ನೌಕಾಪಡೆ ತಯಾರಿಸಿದೆ. 

ವಿಶೇಷವೆಂದರೆ ಇದರಲ್ಲಿ ಎಂಜಿನ್‌ ಇಲ್ಲ, ಲೋಹದ ಮೊಳೆಗಳಿಲ್ಲ ಅಥವಾ ಹಡಗನ್ನು ನೂಕು, ದಿಕ್ಕು ತೋರಿಸುವ ಆಧುನಿಕ ಪ್ರೇರಕಗಳಿಲ್ಲ. ಕೌಂಡಿನ್ಯಕ್ಕೆ ಗಾಳಿಯೇ ಎಲ್ಲಾ. ಇದರ ನಿರ್ಮಾಣಕ್ಕೆ 1,500 ವರ್ಷಗಳ ಹಿಂದಿನ ತಂತ್ರಜ್ಞಾನವನ್ನೇ ಬಳಸಿಕೊಂಡಿರುವುದು ವಿಶೇಷ.

ಅಜಂತಾ ಗುಹೆಯಲ್ಲಿರುವ ಕಲಾಕೃತಿಗಳಲ್ಲಿ ಬಳಕೆಯಾಗಿರುವ ಹಡಗುಗಳ ವಿನ್ಯಾಸವನ್ನೇ ಕೌಂಡಿನ್ಯ ತಯಾರಿಯಲ್ಲಿ ಬಳಸಲಾಗಿದೆ. ಇದರೊಂದಿಗೆ ಭಾರತದ ಹಲವು ಪ್ರಾಚೀನ ಸಾಹಿತ್ಯಗಳಿಂದಲೂ ಮತ್ತು ಭಾರತಕ್ಕೆ ಭೇಟಿ ನೀಡಿದ ವಿದೇಶಿಯರು ದಾಖಲಿಸಿದ್ದ ಮಾಹಿತಿಯಿಂದಲೂ ಅಂದಿನ ಹಡಗನ್ನು ಇಂದು ನಿರ್ಮಿಸಲಾಗಿದೆ. 

ಮೌರ್ಯ ಹಾಗೂ ಸಂಗಮ ರಾಜರ ಅವಧಿಯಲ್ಲಿನ ಹಡಗು ನಿರ್ಮಾಣ, ಗುಪ್ತ ಹಾಗೂ ಚೋಳರ ಕಾಲದಲ್ಲಿದ್ದ ಹಡಗುಗಳಿಂದ ಹಿಡಿದು 16ನೇ ಶತಮಾನವರೆಗಿನ ಆಧುನಿಕ ಹಡಗುಗಳವರೆಗೂ ಇದ್ದ ಅತ್ಯುತ್ತಮ ತಂತ್ರಜ್ಞಾನವನ್ನು ಕೌಂಡಿನ್ಯದಲ್ಲಿ ಅಳವಡಿಸಲಾಗಿದೆ.

ಈ ಹಡಗು ನಿರ್ಮಾಣದಲ್ಲಿ ಬಳಸಲಾದ ಮರದ ಹಲಗೆಗಳನ್ನು ಪರಸ್ಪರ ಒಂದರ ಪಕ್ಕ ಒಂದನ್ನು ಜೋಡಿಸಲಾಗಿದೆ. ಅವುಗಳನ್ನು ತೆಂಗಿನ ನಾರಿನಿಂದ ಮಾಡಲಾದ ಹಗ್ಗದಿಂದ ಬಿಗಿಯಲಾಗಿದೆ. ಹಡಗಿನ ಒಡಲು ತುಂಬಲು ನೈಸರ್ಗಿಕ ರಾಳ, ಹತ್ತಿ ಮತ್ತು ಎಣ್ಣೆಯನ್ನು ಬಳಸಲಾಗಿದೆ. ನೌಕಾಪಡೆಯೇ ಇದನ್ನು ನಿರ್ಮಿಸಿದ್ದರೂ ಇದು ಯುದ್ಧನೌಕೆಯಲ್ಲ.

ಹಡಗಿನ ವಿನ್ಯಾಸ, ಕಲಾಕೃತಿ, ನಿರ್ಮಾಣ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ದುಡಿದವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ. ನೌಕಾಪಟವುಳ್ಳ ಹಡಗಿನ ವಿನ್ಯಾಸಕ್ಕೆ ಮರುಜೀವ ನೀಡಿರುವುದನ್ನು ಮುಕ್ತಕಂಠದಿಂದ ಹೊಗಳಿರುವ ಅವರು, ಕೊಲ್ಲಿ ಪ್ರಾಂತ್ಯದತ್ತ ಹೊರಟ ಹಡಗು ಹಾಗೂ ಅದರಲ್ಲಿರುವ ನಾವಿಕರಿಗೆ ಶುಭ ಕೋರಿದ್ದಾರೆ. 

ಈ ಹಡಗು 19.6 ಮೀಟರ್‌ ಉದ್ದ ಹಾಗೂ 6.5 ಮೀಟರ್ ಅಗಲವಿದೆ. ಹಡಗು ತೇಲಲು ಅಗತ್ಯವಿರುವ ಕೆಳಭಾಗವು 3.33 ಮೀಟರ್‌ ಇದೆ. ಇದು 15 ನಾವಿಕರನ್ನು ಹೊತ್ತು ಸಾಗುವ ಸಾಮರ್ಥ್ಯ ಹೊಂದಿದೆ. ‘ಟಂಕೈ’ ಎಂಬ ನಿರ್ಮಾಣ ತಂತ್ರ ಬಳಸಿ ಕೌಂಡಿನ್ಯವನ್ನು ನಿರ್ಮಿಸಲಾಗಿದೆ. ಇದರಲ್ಲಿ ಹಡಗಿನ ಒಡಲನ್ನು ಮೊದಲು ನಿರ್ಮಿಸಲಾಗುತ್ತದೆ. ನಂತರ ಇಕ್ಕೆಲಗಳ ಪಟ್ಟಿಯನ್ನು ಕಟ್ಟಲಾಗುತ್ತದೆ. ಇದರಿಂದ ಹಡಗಿನ ರಚನೆ ಹೆಚ್ಚು ಸದೃಢವಾಗಿರುತ್ತದೆ. ಅಲೆಯ ಒತ್ತಡವನ್ನು ನಿರ್ವಹಿಸುವ ಸಾಮರ್ಥ್ಯ ಈ ಶೈಲಿಯ ಹಡಗು ನಿರ್ಮಾಣದಿಂದ ಸಾಧ್ಯ ಎಂಬುದನ್ನು ನೌಕಾಪಡೆಯ ತಂತ್ರಜ್ಞರು ಕಂಡುಕೊಂಡಿದ್ದಾರೆ.

2023ರ ಜುಲೈನಲ್ಲಿ ಕೌಂಡಿನ್ಯ ನಿರ್ಮಾಣ ಆರಂಭಗೊಂಡಿತು. ಇದಕ್ಕಾಗಿ ಕೇಂದ್ರ ಸಂಸ್ಕೃತಿ ಸಚಿವಾಲಯ, ಭಾರತೀಯ ನೌಕಾಪಡೆ ಮತ್ತು ಹೊದಿ ಇನ್ನೋವೇಷನ್ಸ್‌ ಜತೆ ಒಡಂಬಡಿಕೆಯಾಗಿತ್ತು. ಹಡಗು ನಿರ್ಮಾಣಕ್ಕೆ ಸಂಸ್ಕೃತಿ ಸಚಿವಾಲಯ ಅನುದಾನ ನೀಡಿತು. ಕೇರಳದ ಸಾಂಪ್ರದಾಯಿಕ ಹಡಗು ತಯಾರಕರ ತಂಡವನ್ನು ಇದಕ್ಕಾಗಿ ಸಜ್ಜುಗೊಳಿಸಲಾಯಿತು. ಈ ತಂಡದ ನೇತೃತ್ವವನ್ನು ಕುಶಲಕರ್ಮಿ ಬಾಬು ಶಂಕರನ್ ಅವರು ವಹಿಸಿದ್ದರು. ಈ ಹಡಗಿನ ನಿರ್ಮಾಣದಲ್ಲಿ ಯಾವುದೇ ಯಂತ್ರ ಬಳಸಲಾಗಿಲ್ಲ. ವಿನ್ಯಾಸದ ನಕ್ಷೆಯನ್ನಾಗಲೀ ಅಥವಾ ಬೌದ್ಧಿಕ ಮಾದರಿಯನ್ನು ಆಧಾರವಾಗಿಟ್ಟುಕೊಂಡಿರಲಿಲ್ಲ. ನೌಕಾಪಡೆಯು ತನ್ನ ಜ್ಞಾನ ಹಾಗೂ ತಾಂತ್ರಿಕ ಮಾಹಿತಿಗಳನ್ನು ನೀಡಿತು. ಐಐಟಿ ಮದ್ರಾಸ್‌ನ ಹೈಡ್ರೊಡೈನಾಮಿಕ್ಸ್‌ ಅಧ್ಯಯನ ವಿಭಾಗವೂ ಕೌಂಡಿನ್ಯ ನಿರ್ಮಾಣಕ್ಕೆ ಕೈಜೋಡಿಸಿತ್ತು.

2025ರ ಫೆಬ್ರುವರಿಯಲ್ಲಿ ಗೋವಾದ ಹಡಗುಕಟ್ಟೆಯಲ್ಲಿ ಇದನ್ನು ಬಿಡುಗಡೆ ಮಾಡಲಾಯಿತು ಮತ್ತು ಕಾರವಾರದ ನೌಕಾನೆಲೆಗೆ ಅಧಿಕೃತವಾಗಿ ಸೇರ್ಪಡೆಗೊಂಡಿತು. ಡಿ. 29ರಂದು ವೈಸ್ ಅಡ್ಮಿರಲ್‌ ಕೃಷ್ಣ ಸ್ವಾಮಿನಾಥನ್ ಅವರು ಪ್ರಯಾಣ ಆರಂಭಿಸಿದ ಕೌಂಡಿನ್ಯಕ್ಕೆ ಹಸಿರು ನಿಶಾನೆ ತೋರಿದರು. ಈ ಸಂದರ್ಭದಲ್ಲಿ ಒಮಾನ್‌ನ ಭಾರತದ ರಾಯಭಾರಿಯೂ ಇದ್ದರು.

ಈ ಹಡಗಿನಲ್ಲಿ ಗಂಡಭೇರುಂಡ, ಸೂರ್ಯನ ಕಸೂತಿಯನ್ನು ನೌಕಾಪಟದ ಮೇಲೆ ರಚಿಸಲಾಗಿದೆ. ಸಿಂಹ ಯಾಲಿಯನ್ನು ವಿನ್ಯಾಸಗೊಳಿಸಲಾಗಿದೆ. ಡೆಕ್‌ ಮೇಲೆ ಹರಪ್ಪ ವಿನ್ಯಾಸದಲ್ಲಿ ಆ್ಯಂಕರ್‌ ಸಿದ್ಧಪಡಿಸಲಾಗಿದೆ. ಅಂತಿಮವಾಗಿ ಸಿದ್ಧಗೊಂಡ ಹಡಗಿಗೆ ಆಗ್ಯೇಯ ಏಷ್ಯಾದಲ್ಲಿ 1ನೇ ಶತಮಾನದಲ್ಲಿದ್ದ ಫುನಾನ್‌ ಸಂಸ್ಥಾನಕ್ಕೆ ಸೇರಿದ ಭಾರತದ ನಾವಿಕ ಕೌಂಡಿನ್ಯ ಹೆಸರನ್ನು ಇಡಲಾಗಿದೆ. 

ಹೀಗೆ ಸಿದ್ಧಗೊಂಡ ಕೌಂಡಿನ್ಯವು ಭಾರತ ಮತ್ತು ಒಮಾನ್‌ ನಡುವೆ ಇದ್ದ ಪ್ರಾಚೀನ ಸಮುದ್ರ ಮಾರ್ಗದಲ್ಲಿ ಸಾಗುತ್ತಿದೆ. ಆ ಮೂಲಕ ಹಿಂದೂ ಮಹಾಸಾಗರದಲ್ಲಿ ಭಾರತದ ನಾಗರಿಕ ಸಂಪರ್ಕ ಮತ್ತು ಪ್ರಾಚೀನ ಕಡಲ ಪರಂಪರೆಗೆ ಕನ್ನಡಿ ಹಿಡಿದಿದೆ.

ಕೌಂಡಿನ್ಯ ಯಾನದ ಮಾಹಿತಿ

  • ಒಟ್ಟು 1,400 ಕಿಲೋ ಮೀಟರ್ ದೂರ (750 ನಾಟಿಕಲ್‌ ಮೈಲ್‌)

  • ಒಟ್ಟು 15 ದಿನಗಳ ಯಾನ

  • ಒಟ್ಟು ನಾವಿಕರ ಸಂಖ್ಯೆ 16

  • ಉದ್ದ: 65 ಅಡಿ

  • ಅಗಲ: 22 ಅಡಿ

  • ಎತ್ತರ: 13 ಅಡಿ

  • ತೂಕ: 50 ಟನ್‌

INSV ಕೌಂಡಿನ್ಯದಲ್ಲಿ ಬಳಸಿರುವ ಲಾಂಛನಗಳಾವುವು?

INSV ಕೌಂಡಿನ್ಯವು ತಂತ್ರಜ್ಞಾನದಷ್ಟೇ ಸಂಸ್ಕೃತಿಯನ್ನೂ ಹೊತ್ತು ಸಾಗರದಲ್ಲಿ ಸಾಗುತ್ತಿದೆ. ಎರಡು ತಲೆ ಪಕ್ಷಿಯಾದ ಗಂಡಭೇರುಂಡವನ್ನು ಬಳಸಲಾಗಿದೆ. ಇದು ಮೈಸೂರು ಸಂಸ್ಥಾನದ ಲಾಂಛನವಾಗಿದೆ. ಸೂರ್ಯನ ಚಿತ್ರವನ್ನೂ ನೌಕಾಪಟದ ಮೇಲೆ ಬಳಸಲಾಗಿದೆ. ಮತ್ತೊಂದೆಡೆ ದಕ್ಷಿಣ ಭಾರತದ ಪುರಾತನ ದೇವಾಲಯಗಳಲ್ಲಿ ದ್ವಾರ ಕಂಬಗಳಲ್ಲಿರುವ ಸಿಂಹ ಹಾಗೂ ಕುದುರೆಯನ್ನು ಹೋಲುವ ‘ಸಿಂಹ ಯೆಲಿ’ಯನ್ನು ಬಳಸಲಾಗಿದೆ. ಹರಪ್ಪ ವಿನ್ಯಾಸದ ಕಲ್ಲು ಕೂಡಾ ಬಳಸಲಾಗಿದೆ.

ಯಾರು ಈ ಕೌಂಡಿನ್ಯ?

ಒಂದೇ ಶತಮಾನದ ನಾವಿಕ ಕೌಂಡಿನ್ಯನ ಹೆಸರನ್ನೇ ಈ ಹಡಗಿಗೆ ಇಡಲಾಗಿದೆ. ಆಗ್ನೇಯ ಏಷ್ಯಾ ಮತ್ತು ಚೀನಾದ ದಾಖಲೆಗಳ ಪ್ರಕಾರ ಮೆಕಾಂಗ್ ಡೆಲ್ಟಾಗೆ ಕೌಂಡಿನ್ಯ ಪ್ರಯಾಣಿಸಿದ್ದರು. ರಾಣಿ ಸೋಮ ಅವರನ್ನು ಇವರು ವಿವಾಹವಾಗಿದ್ದರು. ಅಲ್ಲಿ ಫುನಾನ್‌ ಸಂಸ್ಥಾನವನ್ನು ಹುಟ್ಟುಹಾಕಿದ್ದರು. ಅದನ್ನೇ ಇಂದು ಕಾಂಬೊಡಿಯಾ ಎಂದು ಕರೆಯಲಾಗುತ್ತಿದೆ.

ಭಾರತದಿಂದ ಪ್ರಭಾವಿತ ಆಗ್ನೇಯ ಏಷ್ಯಾದಲ್ಲೇ ಅತ್ಯಂತ ಪ್ರಬಲ ರಾಜಮನೆತನದ ಎಂದು ಕರೆಯಿಸಿಕೊಂಡಿದ್ದ ಫುನಾನ್‌ನ ಸಂಸ್ಥಾಪಕನಾದ ಕೌಂಡಿನ್ಯ, ಜಾಗತಿಕ ಮಟ್ಟದ ಇತಿಹಾಸದ ಪುಟದಲ್ಲೂ ತನ್ನ ಛಾಪು ಮೂಡಿಸಿದ್ದಾರೆ.

ಈ ಮಾರ್ಗವೇ ಯಾನಕ್ಕೆ ಆಯ್ಕೆ ಏಕೆ ?

ಆಗ್ನೇಯ ಏಷ್ಯಾದಲ್ಲಿ ಭಾರತದಿಂದ ಒಮಾನ್‌ಗೆ ಪ್ರಯಾಣಿಸಲು ಇದ್ದ ಅತ್ಯಂತ ಪ್ರಮುಖ ವ್ಯಾಪಾರ ಮಾರ್ಗವಿದು. ಭಾರತೀಯ ವ್ಯಾಪಾರಿಗಳು ಹಾಗೂ ನಾವಿಕರು ಈ ಸಮುದ್ರ ಮಾರ್ಗದ ಮೂಲಕವೇ ಸಾಂಬಾರ ಪದಾರ್ಥ, ವಸ್ತ್ರಗಳನ್ನು ಮಾರುತ್ತಾ ಪಶ್ಚಿಮ ಏಷ್ಯಾ, ಆಫ್ರಿಕಾ ಹಾಗೂ ಆಗ್ನೇಯ ಏಷ್ಯಾದೊಂದಿಗೆ ತಮ್ಮ ಜ್ಞಾನವನ್ನು ಹಂಚಿಕೊಂಡರು. ಈ ಮಾರ್ಗದಲ್ಲೇ ಸಾಗುತ್ತಿರುವ INSV ಕೌಂಡಿನ್ಯದಿಂದಾಗಿ ಭಾರತದ ಪ್ರಾಚೀನ ಸಮುದ್ರ ಮಾರ್ಗವನ್ನು ಮರುಶೋಧಿಸುವ ಪ್ರಯತ್ನ ನಡೆಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.