ADVERTISEMENT

ಐಎನ್‌ಎಸ್‌ ವಿಕ್ರಾಂತ್‌ ಜೊತೆ ಯುದ್ಧ ವಿಮಾನ ಒಗ್ಗೂಡಿಕೆ: ಜೂನ್‌ ವೇಳೆಗೆ ಪೂರ್ಣ

ಪಿಟಿಐ
Published 30 ನವೆಂಬರ್ 2022, 11:08 IST
Last Updated 30 ನವೆಂಬರ್ 2022, 11:08 IST
ಆರ್‌.ಹರಿ ಕುಮಾರ್ 
ಆರ್‌.ಹರಿ ಕುಮಾರ್    

ಪುಣೆ (ಪಿಟಿಐ): ‘ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ದೇಶದ ಮೊದಲ ಯುದ್ಧ ವಿಮಾನ ವಾಹಕ ನೌಕೆ ಐಎನ್‌ಎಸ್‌ ವಿಕ್ರಾಂತ್‌ ಜೊತೆ ಯುದ್ಧ ವಿಮಾನ ಒಗ್ಗೂಡಿಸುವ ಕಾರ್ಯ ಮುಂದಿನ ವರ್ಷದ ಮೇ ಅಥವಾ ಜೂನ್‌ ತಿಂಗಳೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ’ ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್‌ ಆರ್‌.ಹರಿಕುಮಾರ್‌ ಹೇಳಿದ್ದಾರೆ.

ಇಲ್ಲಿನ ಖಡಕ್‌ವಾಸ್ಲಾದಲ್ಲಿರುವ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ (ಎನ್‌ಡಿಎ) ಬುಧವಾರ ನಡೆದ 143ನೇ ಕೋರ್ಸ್‌ನ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ‘ನೌಕೆಯ ಸಮುದ್ರಯಾನದ ಟ್ರಯಲ್‌ ಈಗಾಗಲೇ ಮುಕ್ತಾಯಗೊಂಡಿದೆ. ಯುದ್ಧ ವಿಮಾನ ಒಗ್ಗೂಡಿಸುವಿಕೆಯ ಟ್ರಯಲ್‌ ಶುರುವಾಗಿದೆ. ವಿಮಾನವು ನೌಕೆಯ ಮೇಲೆ ಇಳಿಯುವ ವ್ಯವಸ್ಥೆಯನ್ನು ಪರೀಕ್ಷಿಸಬೇಕಿದೆ. 6 ರಿಂದ 8 ತಿಂಗಳಲ್ಲಿ ಯಾವಾಗ ಬೇಕಿದ್ದರೂ ವಿಕ್ರಾಂತ್‌ ಜೊತೆ ಯುದ್ಧ ವಿಮಾನ ಒಗ್ಗೂಡಿಸುವ ಕಾರ್ಯ ಪೂರ್ಣಗೊಳ್ಳಬಹುದು’ ಎಂದಿದ್ದಾರೆ.

ಎನ್‌ಡಿಎಗೆ ಮಹಿಳೆಯರ ಮೊದಲ ತಂಡ ಸೇರ್ಪಡೆ ಮಾಡಿರುವ ಕುರಿತು ಪ್ರತಿಕ್ರಿಯಿಸಿರುವ ಅವರು, ‘ನೌಕಾಪಡೆ ಸೇರಿದಂತೆ ಎಲ್ಲಾ ರಕ್ಷಣಾ ಪಡೆಗಳಲ್ಲೂ ಮಹಿಳಾ ಅಧಿಕಾರಿಗಳಿದ್ದಾರೆ. ನೌಕಾಪಡೆಯು ಮಹಿಳಾ ಸೇಲರ್‌ಗಳ ಸೇರ್ಪಡೆ ಕಾರ್ಯಕ್ಕೆ ಚಾಲನೆ ನೀಡಿದೆ. ಇದು ಹೊಸ ಮೈಲಿಗಲ್ಲು. ಈ ವರ್ಷ 3 ಸಾವಿರ ಸೇಲರ್‌ ಹುದ್ದೆಗಳನ್ನು ಭರ್ತಿ ಮಾಡಬೇಕಿದೆ. ಇದಕ್ಕೆ 10 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಮಹಿಳೆಯರ ಸಂಖ್ಯೆ 82 ಸಾವಿರದಷ್ಟಿದೆ’ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.