ADVERTISEMENT

ವೀಸಾ ವಂಚನೆ ಪ್ರಕರಣ: ಶುಭಂ ಶೋಕಿನ್‌ ವಿರುದ್ಧ ಇಂಟರ್‌ಪೋಲ್‌ನಿಂದ ಸಿಲ್ವರ್ ನೋಟಿಸ್

ಪಿಟಿಐ
Published 28 ಮೇ 2025, 5:56 IST
Last Updated 28 ಮೇ 2025, 5:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವೀಸಾ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫ್ರೆಂಚ್‌ ರಾಯಭಾರ ಕಚೇರಿಯ ಮಾಜಿ ಅಧಿಕಾರಿ ಶುಭಂ ಶೋಕಿನ್‌ ವಿರುದ್ಧ ಇಂಟರ್‌ಪೋಲ್‌ ಸಿಲ್ವರ್ ನೋಟಿಸ್ ಜಾರಿಗೊಳಿಸಿದೆ. ಇದು ಜಗತ್ತಿನಾದ್ಯಂತ ಶೋಕಿನ್‌ ಹೊಂದಿರುವ ಆಸ್ತಿಗಳನ್ನು ಪತ್ತೆಹಚ್ಚಲು ಸಹಕಾರಿಯಾಗಿದೆ.

ಶುಭಂ ಶೋಕಿನ್‌ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಬಿಐ, ಸಿಲ್ವರ್ ನೋಟಿಸ್‌ ಹೊರಡಿಸುವಂತೆ ಇಂಟರ್‌ಪೋಲ್‌ಗೆ ಮನವಿ ಮಾಡಿತ್ತು.

ಸಿಲ್ವರ್ ನೋಟಿಸ್‌ ಅನ್ನು ಇಂಟರ್‌ಪೋಲ್‌ ಇತ್ತೀಚೆಗೆ ಪರಿಚಯಿಸಿತ್ತು. ಮೊದಲ ನೋಟಿಸ್‌ ಅನ್ನು ಇಟಲಿಯ ಮನವಿಯ ಮೇರೆಗೆ ನೀಡಿತ್ತು.

ADVERTISEMENT

ಅಪರಾಧಿಗಳ ಮಾಹಿತಿ ಪಡೆಯಲು ಇಂಟರ್‌ಪೋಲ್ ಒಂಬತ್ತು ವಿಧದ ನೋಟಿಸ್‌ಗಳನ್ನು ಹೊರಡಿಸುತ್ತದೆ. ಗಡಿಪಾರಿನ ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿಯ ಪತ್ತೆ ರೆಡ್‌ ನೋಟಿಸ್‌, ಹೆಚ್ಚುವರಿ ಮಾಹಿತಿ ಪಡೆಯಲು ಬ್ಲೂ ನೋಟಿಸ್‌ ಹಾಗೂ ಮೃತಪಟ್ಟಿರುವ ವ್ಯಕ್ತಿಯ ಗುರುತು ಪತ್ತೆಗೆ ಬ್ಲ್ಯಾಕ್‌ ನೋಟಿಸ್‌ ನೀಡುತ್ತದೆ.

ಇಂಟರ್‌‍ಪೋಲ್‌ ಎಂಬುದು ಅಂತರರಾಷ್ಟ್ರೀಯ ಪೊಲೀಸ್ ಸಂಘಟನೆಯಾಗಿದ್ದು, ವಿಶ್ವದ 196 ದೇಶಗಳು ಇದರ ಸದಸ್ವತ್ವ ಹೊಂದಿದೆ. ಅಪರಾಧಿಗಳ ಬಂಧನಕ್ಕೆ ಜಾಗತಿಕ ಮಟ್ಟದಲ್ಲಿ ದೇಶ–ದೇಶಗಳ ಮಧ್ಯೆ ಕೊಂಡಿಯಾಗಿ ಇದು ಕಾರ್ಯನಿರ್ವಹಿಸುತ್ತದೆ.

ಪ್ರಕರಣದ ಹಿನ್ನೆಲೆ:

ನವದೆಹಲಿಯಲ್ಲಿರುವ ಫ್ರೆಂಚ್‌ ರಾಯಭಾರ ಕಚೇರಿಯಲ್ಲಿ ಸಿಬ್ಬಂದಿ ವೀಸಾ ಮತ್ತು ಸ್ಥಳೀಯ ಕಾನೂನು ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಶೋಕಿನ್‌, 2019 ಮತ್ತು ಮೇ 2022ರ ನಡುವೆ ಅರ್ಜಿದಾರರಿಂದ ₹15 ಲಕ್ಷದಿಂದ ₹45 ಲಕ್ಷ ಲಂಚ ಪಡೆದು ಷೆಂಗೆನ್ ವೀಸಾ ಪಡೆದುಕೊಳ್ಳಲು ಅನುಕೂಲ ಮಾಡಿಕೊಟ್ಟಿದ್ದರು. ಹೀಗೆ ಗಳಿಸಿದ ಹಣದಿಂದ ದುಬೈನಲ್ಲಿ ಸುಮಾರು ₹15.7 ಕೋಟಿ ಮೌಲ್ಯದ ಆಸ್ತಿ ಸಂಪಾದಿಸಿದ್ದಾರೆ ಎಂದು ಸಿಬಿಐ ಆರೋಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.