ಜನರು ಸಾಲಿನಲ್ಲಿ ನಿಂತು ಫೋನ್ ಖರೀದಿ
ಬೆಂಗಳೂರು/ಮುಂಬೈ: ದೇಶದ ಎಲ್ಲೆಡೆ ಐಫೋನ್–17 ಸೀರಿಸ್ ಮಾರಾಟ ಶುಕ್ರವಾರದಿಂದ ಆರಂಭವಾಗಿದ್ದು ದೆಹಲಿ, ಮುಂಬೈ, ಬೆಂಗಳೂರು ಮತ್ತು ಪುಣೆಯ ಆ್ಯಪಲ್ ಮಳಿಗೆಗಳ ಮುಂದೆ ಜನರು ಸರತಿ ಸಾಲುಗಳಲ್ಲಿ ನಿಂತು ಫೋನ್ ಖರೀದಿಸುತ್ತಿದ್ದಾರೆ.
ಆ್ಯಪಲ್ ಮಳಿಗೆಗಳಲ್ಲಿ ಐಫೋನ್–17, ಐಫೋನ್–17 ಪ್ರೊ, ಐಫೋನ್–17 ಪ್ರೊ ಮ್ಯಾಕ್ಸ್ ಮತ್ತು ಹೊಸ ಐಫೋನ್ ಏರ್‌ಗೆ ಹೆಚ್ಚಿನ ಬೇಡಿಕೆಯಿದ್ದು ಜನರು ಉತ್ಸಾಹದಿಂದ ಫೋನ್‌ಗಳನ್ನು ಖರೀದಿ ಮಾಡುತ್ತಿದ್ದಾರೆ.
ಬೆಂಗಳೂರಿನ ಫೀನಿಕ್ಸ್ ಮಾಲ್ ಆಫ್ ಏಷ್ಯಾ, ಮುಂಬೈನ ಜಿಯೋ ಸೆಂಟರ್ ಮತ್ತು ದೆಹಲಿಯ ಸಾಕೇತ್ ಮಾಲ್‌ನಲ್ಲಿ ಬೆಳಗ್ಗೆಯಿಂದಲೇ ಜನರು ಸರತಿ ಸಾಲಿನಲ್ಲಿ ನಿಂತಿದ್ದರು. ಮಳಿಗೆಗಳ ಮುಂದೆ ಜನಸಂದಣಿ ತುಂಬಾ ದೊಡ್ಡದಾಗಿರುವುದು ಕಂಡು ಬಂದಿದೆ.
ಬೆಂಗಳೂರಿನ ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿರುವ ಆ್ಯಪಲ್ ಮಳಿಗೆಯಲ್ಲೂ ಹೆಚ್ಚಿನ ಸಂಖ್ಯೆಯ ಜನರು ಸೇರಿದ್ದಾರೆ. ಎಎನ್‌ಐ ಮಾಧ್ಯಮ ಸಂಸ್ಥೆಯೊಂದಿಗೆ ಮಾತನಾಡಿದ ಗೌರಿ ಶಂಕರ್ ಎಂಬ ಗ್ರಾಹಕ, ಐಫೋನ್ 17 ಸೀರಿಸ್ ಸ್ಮಾರ್ಟ್ಫೋನ್ ಖರಿದೀಸಿದ್ದೇನೆ. ನಾನು ಕಳೆದ ಹಲವು ವರ್ಷಗಳಿಂದ ಐಫೋನ್‌ಗಳನ್ನು ಖರೀದಿಸುತ್ತಿದ್ದೇನೆ. ಇದು ಒಂದು ಉತ್ತಮ ಅನುಭವವಾಗಿದೆ ಎಂದು ಹೇಳಿದ್ದಾರೆ.
ಮುಂಬೈನಲ್ಲಿ ಗಲಾಟೆ: ಮುಂಬೈನ ಬಿಕೆಸಿ ಜಿಯೋ ಸೆಂಟರ್‌ನಲ್ಲಿರುವ ಆ್ಯಪಲ್ ಸ್ಟೋರ್ ಹೊರಗೆ ಜನದಟ್ಟಣೆಯಲ್ಲಿ ಮಾರಾಮರಿ ನಡೆದಿದೆ. ಈ ವೇಳೆ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿ ಗಲಾಟೆ ತಡೆದಿದ್ದಾರೆ. ನಂತರ ಜನರು ಸಾಲಿನಲ್ಲಿ ನಿಂತು ಫೋನ್‌ಗಳನ್ನು ಖರೀದಿ ಮಾಡುತ್ತಿದ್ದಾರೆ ಎಂದು ಮಳಿಗೆಯ ಸಿಬ್ಬಂದಿ ಹೇಳಿದ್ದಾರೆ.
ಆ್ಯಪಲ್ ಸ್ಟೋರ್‌ಗಳ ಜೊತೆಗೆ, ಅಮೆಜಾನ್, ಫ್ಲಿಪ್‌ಕಾರ್ಟ್, ರಿಲಯನ್ಸ್ ಡಿಜಿಟಲ್ ಮತ್ತು ಕ್ರೋಮಾದಲ್ಲಿಯೂ ಮಾರಾಟ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.