
ನವದೆಹಲಿ: ಅಮೆರಿಕ-ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದ್ದು, ಇದನ್ನು ಬಲವಾಗಿ ಖಂಡಿಸುವಂತೆ ಭಾರತದಲ್ಲಿರುವ ಇರಾನ್ ರಾಯಭಾರ ಕಚೇರಿ ವಿಶ್ವದ ಎಲ್ಲಾ ದೇಶಗಳನ್ನು ಒತ್ತಾಯಿಸಿದೆ.
ಖಮೇನಿ ಹತ್ಯೆಗೆ ಇರಾನಿನ ಗಾರ್ಡ್ ಕಾರ್ಪ್ಸ್ ಪಡೆಯು ಸೇಡು ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದೆ. ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ನೆಲೆಗಳ ಮೇಲೆ ಈಗಾಗಲೇ ಪ್ರತೀಕಾರದ ದಾಳಿಗಳನ್ನು ನಡೆಸಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ.
'ಪ್ರಪಂಚದಾದ್ಯಂತ ಸ್ವಾತಂತ್ರ್ಯವನ್ನು ಬಯಸುವ ಸರ್ಕಾರಗಳು ಈ ಅಪರಾಧವನ್ನು ಬಲವಾಗಿ ಖಂಡಿಸಬೇಕು. ಕಾನೂನುಬಾಹಿರ ಹಾಗೂ ಆಕ್ರಮಣಕಾರಿ ಧೋರಣೆಗಳ ಮುಂದೆ ಮೌನವಾಗಿರಬಾರದು' ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
'ಕ್ಷಮಿಸಲಾಗದ ಅಪರಾಧಕ್ಕೆ ಅಮೆರಿಕ ಮತ್ತು ಇಸ್ರೇಲ್ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಹುತಾತ್ಮರ ತ್ಯಾಗವು ಇರಾನಿನ ಜನರ ಸ್ವಾತಂತ್ರ್ಯ, ಘನತೆ ಮತ್ತು ಉನ್ನತ ಆದರ್ಶಗಳನ್ನು ರಕ್ಷಿಸುವ ಸಂಕಲ್ಪವನ್ನು ಬಲಪಡಿಸುತ್ತದೆ' ಎಂದು ರಾಯಭಾರ ಕಚೇರಿ ಹೇಳಿದೆ.
ಇಸ್ರೇಲ್–ಅಮೆರಿಕದ ದಾಳಿಯಲ್ಲಿ ಖಮೇನಿ ಹತ್ಯೆಯಾಗಿದ್ದಾರೆ ಎಂದು ಇರಾನ್ ಸರ್ಕಾರಿ ದೂರದರ್ಶನ ದೃಢಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.