ದೆಹಲಿಗೆ ಬಂದಿಳಿದ 110 ವಿದ್ಯಾರ್ಥಿಗಳನ್ನು ಹೊತ್ತ ವಿಮಾನ
ಚಿತ್ರ ಕೃಪೆ: @MEAIndia
ನವದೆಹಲಿ: ಸಂಘರ್ಷ ಪೀಡಿತ ಇರಾನ್‌ನಿಂದ ‘ಆಪರೇಷನ್ ಸಿಂಧು’ ಕಾರ್ಯಾಚರಣೆಯಡಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊತ್ತ ವಿಮಾನ ಗುರುವಾರ ಬೆಳಗಿನ ಜಾವ ದೆಹಲಿಗೆ ಸುರಕ್ಷಿತವಾಗಿ ಬಂದಿಳಿದಿದೆ.
ವಿದ್ಯಾರ್ಥಿಗಳು ಇರಾನ್‌ನಲ್ಲಿ ತಾವು ಎದುರಿಸಿದ ಭಯದ ಪರಿಸ್ಥಿತಿಯನ್ನು ನೆನಪಿಸಿಕೊಂಡು ತಮ್ಮನ್ನು ಮನೆಗೆ ಮರಳಿ ಕರೆತರುವಲ್ಲಿ ತ್ವರಿತ ಕ್ರಮ ಕೈಗೊಂಡಿದ್ದಕ್ಕಾಗಿ ಭಾರತ ಸರ್ಕಾರಕ್ಕೆ ಧನ್ಯವಾದ ಹೇಳಿದರು.
ಮೊದಲ ವಿಮಾನದಲ್ಲಿ 110 ವಿದ್ಯಾರ್ಥಿಗಳು ಭಾರತಕ್ಕೆ ವಾಪಸ್ಸಾಗಿದ್ದಾರೆ. ಇನ್ನಷ್ಟು ಜನರನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ತಿಳಿಸಿದ್ದಾರೆ.
'ನಮ್ಮಲ್ಲಿ ವಿಮಾನಗಳು ಸಿದ್ಧವಾಗಿವೆ. ಇಂದು (ಗುರುವಾರ) ನಾವು ಮತ್ತೊಂದು ವಿಮಾನವನ್ನು ಕಳುಹಿಸುತ್ತೇವೆ. ನಾವು ತುರ್ಕಮೆನಿಸ್ತಾನದಿಂದ ಇನ್ನೂ ಕೆಲವು ಜನರನ್ನು ಸ್ಥಳಾಂತರಿಸುತ್ತಿದ್ದೇವೆ. ಕಾರ್ಯಾಚರಣೆ 24 ಗಂಟೆ ನಡೆಯುತ್ತಿದೆ. ಇರಾನ್‌ನಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದ ಕಾರಣ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ನಾವು ಹೆಚ್ಚಿನ ವಿಮಾನಗಳನ್ನು ಕಳುಹಿಸುತ್ತೇವೆ’ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
‘4 ಸಾವಿರಕ್ಕಿಂತ ಹೆಚ್ಚಿನ ಭಾರತೀಯರು ಇರಾನ್‌ನಲ್ಲಿ ನೆಲೆಸಿದ್ದಾರೆ. ಇವರಲ್ಲಿ ಅರ್ಧಕ್ಕಿಂತ ಹೆಚ್ಚಿನವರು ವಿದ್ಯಾರ್ಥಿಗಳು. ವಿದೇಶದಲ್ಲಿರುವ ಭಾರತೀಯರ ಭದ್ರತೆ ಮತ್ತು ಸುರಕ್ಷತೆಯೇ ದೇಶದ ಆದ್ಯತೆಯಾಗಿದೆ. ಇರಾನ್‌ನಲ್ಲಿರುವ ಭಾರತೀಯರು, ದೇಶಕ್ಕೆ ಮರಳಲು ತುರ್ತು ಸಹಾಯವಾಣಿ ಮೂಲಕ ಟೆಹರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಂಪರ್ಕಿಸಬಹುದು. ನವದೆಹಲಿಯಲ್ಲೂ ಸಹಾಯವಾಣಿ ಪ್ರಾರಂಭಿಸಲಾಗಿದೆ’ ಎಂದು ಸಚಿವಾಲಯ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.