ADVERTISEMENT

ಅಪರಾಧ ತಡೆಗೆ ಕ್ರಮ: ಭಾರತೀಯರಿಗೆ ವೀಸಾ ವಿನಾಯಿತಿ ಸ್ಥಗಿತಗೊಳಿಸಿದ ಇರಾನ್

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 2:23 IST
Last Updated 18 ನವೆಂಬರ್ 2025, 2:23 IST
<div class="paragraphs"><p>ವೀಸಾ (ಪ್ರಾತಿನಿಧಿಕ ಚಿತ್ರ)</p></div>

ವೀಸಾ (ಪ್ರಾತಿನಿಧಿಕ ಚಿತ್ರ)

   

ನವದೆಹಲಿ: ಉದ್ಯೋಗದ ಸುಳ್ಳು ಭರವಸೆಯ ಆಧಾರದ ಮೇಲೆ ಅಥವಾ ಮೂರನೇ ದೇಶಕ್ಕೆ ತೆರಳಲು ಇರಾನ್‌ಗೆ ಭೇಟಿ ನೀಡುವವರು ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಘಟನೆಗಳು ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗೆ ವೀಸಾ ವಿನಾಯಿತಿ ಸೌಲಭ್ಯವನ್ನು ಇರಾನ್ ಸ್ಥಗಿತಗೊಳಿಸಿದೆ ಎಂದು ವಿದೇಶಾಂಗ ವ್ಯವಹಾರ ಸಚಿವಾಲಯ (ಎಂಇಎ) ತಿಳಿಸಿದೆ.

ಉದ್ಯೋಗದ ಸುಳ್ಳು ಭರವಸೆ ಅಥವಾ ಬೇರೆ ದೇಶಗಳಿಗೆ ತೆರಳಲು ನೆರವಾಗುವ ಭರವಸೆಯೊಂದಿಗೆ ಭಾರತೀಯ ಪ್ರಜೆಗಳನ್ನು ಇರಾನ್‌ಗೆ ಬರುವಂತೆ ಆಮಿಷವೊಡ್ಡುತ್ತಿರುವ ಘಟನೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.

ADVERTISEMENT

ನವೆಂಬರ್ 22ರಿಂದ ಅನ್ವಯವಾಗುವಂತೆ ಇರಾನ್‌ಗೆ ಭೇಟಿ ನೀಡುವ ಸಾಮಾನ್ಯ ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗೆ ಲಭ್ಯವಿರುವ ವೀಸಾ ವಿನಾಯಿತಿ ಸೌಲಭ್ಯವನ್ನು ಇರಾನ್ ಸರ್ಕಾರ ಸ್ಥಗಿತಗೊಳಿಸಿದೆ. ಅಪರಾಧ ಹಿನ್ನೆಲೆಯುಳ್ಳವರು ಈ ಸೌಲಭ್ಯವನ್ನು ಮತ್ತಷ್ಟು ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನ. 22ರಿಂದ ಸಾಮಾನ್ಯ ಪಾಸ್‌ಪೋರ್ಟ್‌ಗಳನ್ನು ಹೊಂದಿರುವ ಭಾರತೀಯ ಪ್ರಜೆಗಳು ಇರಾನ್ ಪ್ರವೇಶಿಸಲು ಅಥವಾ ಇರಾನ್ ಮೂಲಕ ಬೇರೆ ದೇಶಗಳಿಗೆ ತೆರಳಲು ಅನುಮತಿ ಪಡೆಯಬೇಕಾಗುತ್ತದೆ ಎಂದೂ ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ.

ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗೆ ಲಭ್ಯವಿರುವ ವೀಸಾ ವಿನಾಯಿತಿ ಸೌಲಭ್ಯವನ್ನು ಬಳಸಿಕೊಂಡು ಇರಾನ್‌ಗೆ ಬಂದಿರುವ ಹಲವರನ್ನು ವಂಚಿಸಲಾಗಿದೆ ಮತ್ತು ಹಲವರನ್ನು ಸುಲಿಗೆಗಾಗಿ ಅಪಹರಿಸಲಾಗಿದೆ. ಆದ್ದರಿಂದ ಇರಾನ್‌ಗೆ ಭೇಟಿ ನೀಡುವ ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗೆ ಲಭ್ಯವಿರುವ ವೀಸಾ ವಿನಾಯಿತಿ ಸೌಲಭ್ಯವನ್ನು ಇರಾನ್ ಸರ್ಕಾರ ಸ್ಥಗಿತಗೊಳಿಸಿದೆ.

‘ಇರಾನ್‌ಗೆ ಭೇಟಿ ನೀಡಲು ಉದ್ದೇಶಿಸಿರುವ ಎಲ್ಲಾ ಭಾರತೀಯರು ಜಾಗರೂಕರಾಗಿರಬೇಕು. ವೀಸಾ ಮುಕ್ತ ಪ್ರಯಾಣ ಅಥವಾ ಇರಾನ್ ಮೂಲಕ ಮೂರನೇ ದೇಶಗಳಿಗೆ ಪ್ರಯಾಣಿಸಲು ನೆರವಾಗುವ ಏಜೆಂಟರ ಬಗ್ಗೆ ಎಚ್ಚರಿಕೆವಹಿಸುವಂತೆ ಸೂಚನೆ ನೀಡಲಾಗಿದೆ’ ಎಂದು ಎಂಇಎ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.