ADVERTISEMENT

ತಿಂಗಳಲ್ಲಿ ಮೂರನೇ ಬಾರಿ IRCTCಯಲ್ಲಿ ತಾಂತ್ರಿಕ ಸಮಸ್ಯೆ: ಪ್ರಯಾಣಿಕರ ಪರದಾಟ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಡಿಸೆಂಬರ್ 2024, 11:27 IST
Last Updated 31 ಡಿಸೆಂಬರ್ 2024, 11:27 IST
   

ಮುಂಬೈ: ಭಾರತೀಯ ರೈಲ್ವೆಯ ಕೇಟರಿಂಗ್‌ ಹಾಗೂ ಪ್ರವಾಸ ನಿಗಮ (IRCTC) ಮೊಬೈಲ್‌ ಅಪ್ಲಿಕೇಷನ್‌ ಹಾಗೂ ಅಂತರ್ಜಾಲ ತಾಣವು ಇಂದು (ಡಿ. 31) ಮತ್ತೆ ತಾಂತ್ರಿಕ ಸಮಸ್ಯೆ ಎದುರಿಸಿತು. ಇದರಿಂದಾಗಿ ತತ್ಕಾಲ್‌ ಮೂಲಕ ಮುಂಗಡವಾಗಿ ಟಿಕೆಟ್ ಕಾಯ್ದಿರಿಸುವಲ್ಲಿ ಪ್ರಯಾಣಿಕರು ತೀವ್ರ ಸಂಕಷ್ಟ ಎದುರಿಸಿದರು.

ತತ್ಕಾಲ್ ಮೂಲಕ ಮುಂಗಡ ಬುಕ್ಕಿಂಗ್ ಆರಂಭಗೊಳ್ಳುವ ಹತ್ತು ನಿಮಿಷಗಳ ಮೊದಲು ಬೆಳಿಗ್ಗೆ 9.50ಕ್ಕೆ ತಾಂತ್ರಿಕ ಸಮಸ್ಯೆ ಎದುರಾಯಿತು. ಅಂತರ್ಜಾಲ ಪುಟಕ್ಕೆ ಲಾಗಿನ್ ಆದವರಿಗೆ, ‘ಬುಕ್ಕಿಂಗ್ ಹಾಗೂ ಟಿಕೆಟ್ ಕ್ಯಾನ್ಸಲೇಷನ್‌ ಸೌಕರ್ಯವು ಮುಂದಿನ ಒಂದು ಗಂಟೆಗಳ ಕಾಲ ಲಭ್ಯವಿರುವುದಿಲ್ಲ. ಅದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇವೆ. ಟಿಕೆಟ್‌ ರದ್ದುಪಡಿಸಲು ಕಸ್ಟಮರ್‌ ಕೇರ್‌ ಸಂಖ್ಯೆಗೆ ಕರೆ ಮಾಡಿ’ ಎಂಬ ಒಕ್ಕಣೆ ಅಲ್ಲಿತ್ತು.

ಇಂಥ ಗಂಭೀರ ಸಮಸ್ಯೆಯನ್ನು ಐಆರ್‌ಸಿಟಿಸಿ ಎದುರಿಸುತ್ತಿರುವುದು ತಿಂಗಳಲ್ಲಿ ಮೂರನೇ ಬಾರಿ. ಬಳಕೆದಾರರು ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಐಆರ್‌ಸಿಟಿಸಿಯನ್ನು ವ್ಯಾಪಕವಾಗಿ ಟೀಕಿಸಿದ್ದಾರೆ. 

ADVERTISEMENT

ಡೌನ್‌ಡಿಟೆಕ್ಟರ್‌ ಸೈಟ್‌ನ ಪ್ರಕಾರ, ವೆಬ್‌ಸೈಟ್‌ ಪ್ರವೇಶಿಸಲು ಸಾಧ್ಯವಾಗದವರ ಸಂಖ್ಯೆ ಶೇ 47ರಷ್ಟು. ಆ್ಯಪ್‌ ಮೂಲಕ ಸಮಸ್ಯೆ ಎದುರಿಸಿದವರ ಸಂಖ್ಯೆ ಶೇ 42ರಷ್ಟು ಹಾಗೂ ಟಿಕೆಟ್‌ ಬುಕ್ಕಿಂಗ್‌ ಸಾಧ್ಯವಾಗದವರ ಸಂಖ್ಯೆ ಶೇ 10ರಷ್ಟು. 

ಲಾಗಿನ್ ಸಮಸ್ಯೆ, ಪ್ರಯಾಣಿಸಬೇಕಾದ ಸ್ಥಳ ಹಾಗೂ ರೈಲಿನ ಮಾಹಿತಿ ಮತ್ತು ಬೆಲೆ ಲಭ್ಯವಾಗದಿರುವುದು ಹಾಗೂ ಟಿಕೆಟ್‌ ಬುಕ್ಕಿಂಗ್ ಅಪೂರ್ಣವಾಗುವ ಸಮಸ್ಯೆಯನ್ನು ಗ್ರಾಹಕರು ವ್ಯಾಪಕವಾಗಿ ಅನುಭವಿಸಿದರು.

ಇದೇ ಸಮಸ್ಯೆ ಸಾಕಷ್ಟು ಹೊತ್ತು ಮುಂದುವರಿಯಿತು. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಟ್ಯಾಗ್‌ ಮಾಡಿ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಹಲವರು, ‘ನೀವು ಟಿಕೆಟ್ ಬುಕ್ಕಿಂಗ್ ವೆಬ್‌ಸೈಟ್‌ ಅನ್ನು ಮುಚ್ಚಿಬಿಡಿ. ಅದರ ಬದಲು ಟಿಕೆಟ್ ಬುಕ್ಕಿಂಗ್ ಹೇಗೆ ಮಾಡಬೇಕು ಎಂಬ ನಿಮ್ಮ ಎಂದಿನ ರೀಲ್ಸ್‌ ಮಾಡುವುದನ್ನು ಮುಂದುವರಿಸಿ’ ಎಂದು ಕಾಲೆಳೆದಿದ್ದಾರೆ.

ತಾಂತ್ರಿಕ ಸಮಸ್ಯೆ ಕುರಿತು ಐಆರ್‌ಸಿಟಿಸಿ ಯಾವುದೇ ಪ್ರತಿಕ್ರಿಯೆ ಈವರೆಗೂ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.