ADVERTISEMENT

ಏಷ್ಯಾ ಕಪ್‌ ಟೂರ್ನಿ: ಭಾರತ– ಪಾಕ್‌ ಪಂದ್ಯದ ಔಚಿತ್ಯ ಪ್ರಶ್ನಿಸಿದ ಆದಿತ್ಯ ಠಾಕ್ರೆ

ಪಿಟಿಐ
Published 4 ಜುಲೈ 2025, 14:18 IST
Last Updated 4 ಜುಲೈ 2025, 14:18 IST
ಆದಿತ್ಯ ಠಾಕ್ರೆ 
ಆದಿತ್ಯ ಠಾಕ್ರೆ    

ಮುಂಬೈ: ನಮ್ಮ ವಿರುದ್ಧ ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತಿರುವ ಪಾಕಿಸ್ತಾನದ ಜೊತೆ ಏಷ್ಯಾ ಕಪ್‌ ಕ್ರಿಕೆಟ್‌ ಮತ್ತು ಹಾಕಿ ಟೂರ್ನಿಯನ್ನು ಆಡುವುದು ಸರಿಯೇ ಎಂದು ಶಿವಸೇನಾ (ಉದ್ಧವ್‌ ಬಣ)ದ ನಾಯಕ ಆದಿತ್ಯ ಠಾಕ್ರೆ ಅವರು ಶುಕ್ರವಾರ ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಠಾಕ್ರೆ, ‘ಏಷ್ಯಾ ಕಪ್‌ ಟೂರ್ನಿಯಲ್ಲಿ ಭಾರತ ತಂಡವು ಪಾಕಿಸ್ತಾನದ ವಿರುದ್ಧ ಆಡ‌ಬೇಕೇ? ಈ ಕುರಿತು ಬಿಜೆಪಿ ಮತ್ತು ಕೇಂದ್ರ ಸರ್ಕಾರದಿಂದ ಸ್ಪಷ್ಟ ಉತ್ತರ ಬಯಸುತ್ತಿದ್ದೇವೆ. ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಹಲವು ಪ್ರಶ್ನೆಗಳಿಗೆ ಕೇಂದ್ರದಿಂದ ಇನ್ನೂ ಉತ್ತರ ದೊರೆತಿಲ್ಲ’ ಎಂದರು.

‘ಬಿಸಿಸಿಐ ಭಾರತೀಯ ಕ್ರಿಕೆಟ್‌ ತಂಡವನ್ನು ಪಾಕಿಸ್ತಾನದೊಂದಿಗೆ ಆಡಲು ಅನುಮತಿಸಿದರೆ, ಇತರರಿಗೆ ಮಾಡಿದಂತೆ ಬಿಜೆಪಿ ಬಿಸಿಸಿಐಗೂ ರಾಷ್ಟ್ರವಿರೋಧಿ ಪಟ್ಟ ಕಟ್ಟುತ್ತದೆಯೇ?’ ಎಂದು ಕೇಳಿದರು. 

ADVERTISEMENT

ಪಹಲ್ಗಾಮ್‌ ಉಗ್ರರ ದಾಳಿ ಮತ್ತು ರಾಷ್ಟ್ರೀಯ ಭದ್ರತೆ ನಿರ್ವಹಣೆಯಲ್ಲಿ ಕೇಂದ್ರ ಕೈಗೊಂಡ ಕ್ರಮಗಳ ಬಗ್ಗೆ ಠಾಕ್ರೆ ಅಸಮಾಧಾನ ವ್ಯಕ್ತಪಡಿಸಿದರು. 

ಏಷ್ಯಾ ಕಪ್‌ ಟಿ20 ಮತ್ತು ಏಷ್ಯಾ ಕಪ್‌ ಹಾಕಿ ಟೂರ್ನಿಗಳಿಗೆ ಭಾರತ ಆತಿಥ್ಯ ವಹಿಸಿದ್ದು, ಪಂದ್ಯಗಳು ಬಿಹಾರದಲ್ಲಿ ನಡೆಯಲಿವೆ. ಸೆಪ್ಟೆಂಬರ್‌ನಲ್ಲಿ  ಏಷ್ಯಾ ಕಪ್‌ ಟಿ20 ನಡೆಯುವ ನಿರೀಕ್ಷೆಯಿದೆ ಮತ್ತು ಏಷ್ಯಾ ಕಪ್‌ ಹಾಕಿ ಟೂರ್ನಿಯನ್ನು ಆಗಸ್ಟ್‌ 27ರಂದು ಆಯೋಜಿಸಲಾಗಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.